ಕ್ರೀಡೆಯಲ್ಲಿ ಮಕ್ಕಳು ಮುಂದಿರಬೇಕೆಂದು ಪೋಷಕರ ಆಶಯ: ರಾಮಚಂದ್ರರಾಜೇ ಅರಸ್

KannadaprabhaNewsNetwork |  
Published : Jul 24, 2024, 12:24 AM IST
23ಸಿಎಚ್‌ಎನ್‌60ಚಾಮರಾಜನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿ.ಪಂ., ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,  ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಆಲೂರು ವಲಯ ಮಟ್ಟದ ಕ್ರೀಡಾಕೂಟವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಣ ಇಲಾಖೆ ಇರುವುದು ಕೇವಲ ಪಾಠ, ಪ್ರವಚನ ಮಾಡಲಿಕ್ಕೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಸಹ ಪ್ರೋತ್ಸಾಹ, ಆದ್ಯತೆ ಕೊಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು. ಚಾಮರಾಜನಗರದಲ್ಲಿ ಕ್ರೀಡಾಕೂಟವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪ್ರಸ್ತುತ ದಿನಮಾನಗಳಲ್ಲಿ ಕ್ರೀಡೆ ಬೇರೆಯಲ್ಲ, ಕಲಿಕೆ ಬೇರೆಯಲ್ಲ ಎರಡರಲ್ಲೂ ಮಕ್ಕಳು ಮುಂದಿರಬೇಕು ಎಂದು ಪೋಷಕರು ಬಯಸುತ್ತಿದ್ದಾರೆ. ಶಿಕ್ಷಣ ಇಲಾಖೆ ಇರುವುದು ಕೇವಲ ಪಾಠ, ಪ್ರವಚನ ಮಾಡಲಿಕ್ಕೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಸಹ ಪ್ರೋತ್ಸಾಹ, ಆದ್ಯತೆ ಕೊಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಹೇಳಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಪಂ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಆಲೂರು ವಲಯ ಮಟ್ಟದ ಕ್ರೀಡಾಕೂಟವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಎಂದರೆ ದೈಹಿಕವಾಗಿ ಸಮರ್ಥರಿದ್ದು, ಓದಿನಲ್ಲಿ ಹಿಂದುಳಿಯುವಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಶಾಲೆ, ಗ್ರಾಮವನ್ನು ಪ್ರತಿನಿಧಿಸಬೇಕು. ಬಹುಮಾನ ತರಬೇಕು ಎಂದು ಈ ಹಿಂದೆ ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಆದರೆ ಇಂದು ಸಮಾಜ, ಇಲಾಖೆ, ಪೋಷಕರು ಬಹಳ ಬದಲಾವಣೆಯಾಗಿದ್ದು, ತಮ್ಮ ಮಕ್ಕಳು ಕಲಿಕೆಯಲ್ಲಿರುವಷ್ಟೆ ಸಾಂಸ್ಕೃತಿಕ, ಚಟುವಟಿಕೆ, ಕ್ರೀಡೆ ಚಟವಟಿಕೆಯಲ್ಲಿ ಮುಂದೆ ಇರಬೇಕು ಎಂದು ಪೋಷಕರು ಆಶಯ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಶಿಕ್ಷಸಪ್ತ ಕಾರ್ಯಕ್ರಮ ಜಾರಿ:

ಇಲಾಖೆಯು ಶಿಕ್ಷಸಪ್ತ ಕಾರ್ಯಕ್ರಮವನ್ನು ಸೋಮವಾರದಿಂದ ಜಾರಿ ಮಾಡಿದ್ದು, ಒಂದು ವಾರಗಳ ಕಾಲ ಮಕ್ಕಳಿಗೆ ಪಾಠಪ್ರವಚನ ಮಾಡುವುದರ ಜೊತೆಗೆ ಒಂದೊಂದು ದಿನ ಒಂದು ಮಹತ್ವದ ವಿಷಯದ ಬಗ್ಗೆ ಶಾಲೆಯಲ್ಲಿ ಕೆಲಸ ಮಾಡಬೇಕು. ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ವಿಶೇಷವಾಗಿ ಸುತ್ತೋಲೆ ಹೊರಡಿಸಲಾಗಿದೆ. ಬುಧವಾರ ದಿನ ಕ್ರೀಡಾ ಚಟುವಟಿಕೆಯನ್ನು ಮಕ್ಕಳಲ್ಲಿ ಗುರುತಿಸಿ, ಪ್ರೋತ್ಸಾಹಿಸಲು ಮೂಲಕ ಬೆಳಸಬೇಕು ಎಂದು ತಿಳಿಸಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಸೋಲು-ಗೆಲವು ಎರಡನ್ನು ಸಮನಾಗಿ ಸ್ವೀಕರಿಸಬೇಕು. ಈ ಕ್ರೀಡಾಕೂಟ ಯಶ್ವಸಿಯಾಗಲಿ ಎಂದು ಶುಭ ಕೋರಿದರು. ಗುರುಮಲ್ಲೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಇಲಾಖೆಯು ಆಲೂರು ವಲಯ ಮಟ್ಟದ ಕ್ರೀಡಾಕೂಟವನ್ನು ನಮ್ಮ ಶಿಕ್ಷಣ ಸಂಸ್ಥೆಗೆ ವಹಿಸಿರುವುದು ತುಂಬಾ ಸಂತಸ ತಂದಿದೆ. ತೀರ್ಪುಗಾರರು ಮಕ್ಕಳ ಪ್ರತಿಭೆಗೆ ತಕ್ಕಂತೆ ನ್ಯಾಯಯುತವಾಗಿ ತೀರ್ಪು ಕೊಡುವ ಮೂಲಕ ಕ್ರೀಡಾಕೂಟವನ್ನು ಯಶ್ವಸಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ರಾಮಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಪಿಎಂಸಿ ನಿರ್ದೇಶಕ ಆಲೂರು ಪ್ರತಾಪ್, ಗ್ರಾಪಂ ಸದಸ್ಯ ರವಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಸಿ.ಮಹದೇವಸ್ವಾಮಿ, ಉಪಾದ್ಯಕ್ಷ ಎಲ್.ಪರಶಿವಪ್ಪ, ಎಸ್‌ಬಿಸಿ ಸಮಿತಿ ಅಧ್ಯಕ್ಷ ಸುರೇಶ್, ಗೌರವ ಅಧ್ಯಕ್ಷ ನಾಗೇಶ್, ಜಿಪಿಟಿ ಸಂಘದ ಅಧ್ಯಕ್ಷ ಮಹೇಶ್, ಜಿಲ್ಲಾಧ್ಯಕ್ಷ ಸೈಮನ್, ಲೋಕೇಶ್, ವಲಯ ಮಟ್ಟದ ಕ್ರೀಡಾಕೂಟ ಸಂಘಟಕ ಶಂಕರಪ್ಪ, ದೈಹಿಕ ಶಿಕ್ಷಣ ಶಿಕ್ಷಕರು, ಸಿಆರ್‌ಪಿಗಳು, ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV