ಯುವಜನತೆ ದುಶ್ಚಟಗಳಿಂದ ದೂರವಿರಿ ಎಂದ ಜಿಲ್ಲಾಧಿಕಾರಿ

KannadaprabhaNewsNetwork |  
Published : Aug 01, 2025, 11:45 PM IST
1ಎಚ್ಎಸ್ಎನ್17 : ಹಿಮ್ಸ್‌ನ ಮನೋ ವೈದ್ಯಕೀಯ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ ಸಂತೋಷ್ ಎನ್.ವಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. | Kannada Prabha

ಸಾರಾಂಶ

ಯುವಜನತೆ ದುಶ್ಚಟಗಳಿಂದ ದೂರವಿದ್ದು, ಜೀವನ ಕೌಶಲ್ಯ ವೃದ್ಧಿಗೊಳಿಸಿಕೊಂಡು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಸಲಹೆ ನೀಡಿದರು. ಕುತೂಹಲಕ್ಕೆ ಒಮ್ಮೆ ನೋಡುತ್ತೇನೆ ನಂತರ ಮನಸ್ಸು ನಿಗ್ರಹಿಸುತ್ತೇನೆ ಎಂದುಕೊಂಡರೆ ಅದು ತಪ್ಪು. ಚಟಗಳು ನರಕಕ್ಕೆ ಬಾಗಿಲು ಇದ್ದಂತೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದರಲ್ಲದೆ, ಉದಾತ್ತ ಗುರಿಯನ್ನಿಟ್ಟುಕೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸರಿಯಾದ ಮಾರ್ಗ ಆಯ್ಕೆ ಮಾಡಿಕೊಂಡು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಯುವ ಜನತೆ ಕೆಟ್ಟ ವ್ಯಸನಗಳಿಗೆ ಬಲಿಯಾಗದೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಯುವಜನತೆ ದುಶ್ಚಟಗಳಿಂದ ದೂರವಿದ್ದು, ಜೀವನ ಕೌಶಲ್ಯ ವೃದ್ಧಿಗೊಳಿಸಿಕೊಂಡು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಸನ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಗಂಧದಕೋಠಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಗೆ ಸಹಜವಾಗಿ ಕುತೂಹಲ ಇರುತ್ತದೆ ಆದರೆ ಸ್ನೇಹಿತರೊಂದಿಗೆ ಬೆರೆತು ಯಾವುದೇ ಪ್ರಯೋಗಗಳನ್ನು ಮಾಡಲು ಪ್ರಯತ್ನಿಸಬೇಡಿ ಎಂದು ತಿಳಿಸಿದರು.

ಕುತೂಹಲಕ್ಕೆ ಒಮ್ಮೆ ನೋಡುತ್ತೇನೆ ನಂತರ ಮನಸ್ಸು ನಿಗ್ರಹಿಸುತ್ತೇನೆ ಎಂದುಕೊಂಡರೆ ಅದು ತಪ್ಪು. ಚಟಗಳು ನರಕಕ್ಕೆ ಬಾಗಿಲು ಇದ್ದಂತೆ. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದರಲ್ಲದೆ, ಉದಾತ್ತ ಗುರಿಯನ್ನಿಟ್ಟುಕೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸರಿಯಾದ ಮಾರ್ಗ ಆಯ್ಕೆ ಮಾಡಿಕೊಂಡು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಯುವ ಜನತೆ ಕೆಟ್ಟ ವ್ಯಸನಗಳಿಗೆ ಬಲಿಯಾಗದೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವಂತೆ ತಿಳಿಸಿದರು.

ಡಾ. ಮಹಾಂತ ಶಿವಯೋಗಿಗಳು ಜನರಿಂದ ಯಾವುದೇ ದವಸ, ಧಾನ್ಯ, ನಗದು ಕೇಳಲ್ಲಿಲ್ಲ. ಜನರಲ್ಲಿರುವ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಎಂದು ಮನೆ ಮನೆ ಬಾಗಿಲಿಗೆ ಹೋಗಿ ಕೇಳಿಕೊಂಡು ಜನರ ಮನವೊಲಿಸಿ ಕೆಟ್ಟ ಚಟಗಳಿಂದ ದೂರವಿರುವಂತೆ ಮನಃಪರಿವರ್ತನೆ ಮಾಡುತ್ತಾ ಸಾಗಿದ ಮಹಾತ್ಮರು. ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಇವರ ದಾರಿಯಲ್ಲಿ ಎಲ್ಲರೂ ನಡೆಯೋಣ ಎಂದು ತಿಳಿಸಿದರು. ದುರಭ್ಯಾಸಗಳಿಂದ ದೂರವಿರುವುದಾಗಿ ಪ್ರತಿಜ್ಞೆ ಮಾಡಿ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ ಆಗುವಂತೆ ಆಟೋಟಗಳಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರಲ್ಲದೆ, ಧೂಮಪಾನ ಮತ್ತು ಮದ್ಯಪಾನದ ಜೊತೆಗೆ ಮೊಬೈಲ್ ಬಳಕೆ ಕೂಡ ಒಂದು ವ್ಯಸನವಾಗಿದೆ, ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ಓದಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಹಿಮ್ಸ್‌ನ ಮನೋ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಸಂತೋಷ್ ಎನ್.ವಿ ಅವರು ಪ್ರತಿಜ್ಞಾವಿಧಿ ಬೋಧಿಸಿ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಹೆಣ್ಣು- ಗಂಡು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಒಳಾಗಾಗಿ ದೈಹಿಕ, ಮಾನಸಿಕ, ಆರ್ಥಿಕ, ಸಾಮಾಜಿಕವಾಗಿ ತೊಂದರೆಗೆ ಸಿಲುಕಿ ನಲುಗುತ್ತಿರುವ ಯುವ ಜನತೆ ಎಚ್ಚೆತ್ತುಕೊಂಡು ವ್ಯಸನಗಳನ್ನು ಬಿಡಲು ಮೊದಲು ಮನಸ್ಸು ಮಾಡಬೇಕು ಎಂದು ಹೇಳಿದರು. ಸ್ನೇಹಿತರೊಂದಿಗೆ ಖುಷಿಗೆ ಎಂದು ಪ್ರಾರಂಭವಾಗುವ ಕೆಟ್ಟ ಹವ್ಯಾಸಗಳು ಮುಂದೆ ಅವುಗಳನ್ನು ಬಿಡದಂತ ಚಟಗಳಾಗಿ ರೂಪಗೊಂಡು ದುಷ್ಪರಿಣಾಮ ಬೀರುತ್ತವೆ ಎಂದು ತಿಳಿಸಿದರು.

ತಂಬಾಕು ಸೇವನೆ ಮಾಡುತ್ತಿರುವವರು ಜಗತ್ತಿನಲ್ಲಿ ಹೆಚ್ಚು ಮಾನಸಿಕ ತೊಂದರೆಗೆ ಸಿಲುಕಿದ್ದಾರೆ ಎಂದ ಅವರು ಅತಿಯಾದ ಬೇಜಾರು, ಖುಷಿ, ಅನುಮಾನ, ಸಿಟ್ಟು, ಗಾಬರಿ ಇವುಗಳು ಕೂಡ ವ್ಯಸನಗಳೇ ಇದಕ್ಕೆಲ್ಲಾ ಚಿಕಿತ್ಸೆ ಇದೆ ಎಂದು ತಿಳಿಸಿದರು. ಎ.ಪಿ.ಎಲ್. ಕಾರ್ಡ್ ಇರುವವರು ಶೇ.೩೦ರಷ್ಟು ಹಣ ಪಾವತಿ ಮಾಡಬೇಕು. ಬಿಪಿಎಲ್ ಕಾರ್ಡ್ ಇರುವವರಿಗೆ ಹಿಮ್ಸ್‌ನಲ್ಲಿ ಉಚಿತ ಚಿಕಿತ್ಸೆ ಇದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಹದಿಹರೆಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದ ಕೆಟ್ಟ ಕುತೂಹಲ ಮೂಡುವುದು ಸಹಜ. ಆದರೆ ಯುವ ಜನತೆ ಎಚ್ಚರ ವಹಿಸಿ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಚಂದ್ರಮೌಳಿ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿಮ್ಮೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಮೀನಾಕ್ಷಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನಡೆಸಿದ ಆಶುಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌