ಕೇಂದ್ರ ಸಚಿವರು ಆಗಮಿಸುವ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಭದ್ರತೆ ಕುರಿತು ಮುನ್ನೆಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು.
ಕೂಡ್ಲಿಗಿ: ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಜೂ.೫ರಂದು ಚಿಕ್ಕಜೋಗಿಹಳ್ಳಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸುವ ಹಿನ್ನೆಲೆಯಲ್ಲಿ ಬುಧವಾರ ವೇದಿಕೆ ನಿರ್ಮಾಣ ಕಾರ್ಯವನ್ನು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಪರಿಶೀಲಿಸಿದರು.
ಕೇಂದ್ರ ಸಚಿವರು ಆಗಮಿಸುವ ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಭದ್ರತೆ ಕುರಿತು ಮುನ್ನೆಚರಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ನಂತರ ವಾಹನಗಳ ಪಾರ್ಕಿಂಗ್ ಜಾಗ, ಸಾರ್ವಜನಿಕರ ಗ್ಯಾಲರಿ, ಮಕ್ಕಳ ಆಸನಗಳ ವ್ಯವಸ್ಥೆ ಕುರಿತು ಈ ವೇಳೆ ಪರಿಶೀಲಿಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಜಪಾನ್ ಮಾದರಿ ಮಿಯಾವಾಕಿ ಅರಣ್ಯ ಕೃಷಿ ಮಾಡಲು ಸಚಿವರು ಸಸಿ ನೆಡುವ ಮೂಲಕ ಚಾಲನೆ ನೀಡುವರು. ನಂತರ ಶಾಲಾ ಮಕ್ಕಳಿಂದ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮವಿದೆ. ಈಗಾಗಲೇ ಒಂಬತ್ತು ಜಾತಿಯ ವಿವಿಧ ಹಣ್ಣಿನ ಗಿಡಗಳನ್ನು ತೋಟಗಾರಿಕಾ ಇಲಾಖೆಯ ಕಚೇರಿ ಹತ್ತಿರ ಸಂಗ್ರಹಿಸಲಾಗಿದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲ ರೀತಿ ಕ್ರಮಗಳನ್ನು ಕೈಗೊಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ವಿವೇಕಾನಂದ, ತಾಪಂ ಇಒ ನರಸಪ್ಪ, ಬಿಇಒ ಮೈಲೇಶ್ ಬೇವೂರ್, ಪಿಡಬ್ಲುಡಿ ಎಇಇ ಕೆ.ನಾಗನಗೌಡ, ತೋಟಗಾರಿಕಾ ಸಹಾಯಕ ನಿರ್ದೇಶಕ ಕುಬೇರಚಾರಿ, ಬಿಸಿಎಂ ಅಧಿಕಾರಿ ಶ್ಯಾಮಪ್ಪ, ಸಣ್ಣ ನೀರಾವರಿ ಇಲಾಖೆ ಎಇಇ ಮಂಜುನಾಥ ಜವಳಿ, ಕರಡಿಧಾಮ ಆರ್‌ಎಫ್‌ಒ ಜಗದೀಶ್ ಮೇದಾ, ಪಿಡಿಒ ಭರತಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಸ್ವಚ್ಚತಾ ಕಾರ್ಯ:
ತಾಪಂ ಇಒ ನರಸಪ್ಪ ನೇತೃತ್ವದಲ್ಲಿ ಬುಧವಾರ ಚಿಕ್ಕಜೋಗಿಹಳ್ಳಿಯ ಗ್ರಾಮದ ಮುಖ್ಯರಸ್ತೆ ಮತ್ತು ಬಸ್ ನಿಲ್ದಾಣ, ಕೆಇಬಿ ವೃತ್ತದವರಿಗೆ ಇಡೀ ಸ್ವಚ್ಛತಾ ಕಾರ್ಯ ಮಾಡಿದರು. ರಸ್ತೆಯ ಬದಿಯಲ್ಲಿನ ತಗ್ಗುಗುಂಡಿಗೆ ಮಣ್ಣು ಹಾಕಿ ಸರಿಪಡಿಸಿದರು. ಇದಕ್ಕೆ ಮಾಕನಡಕು, ಕಾನಹೊಸಹಳ್ಳಿ, ಗುಂಡುಮುಣುಗು, ಬೆಳಗಟ್ಟೆ, ಬಣವಿಕಲ್ಲು ಹುರುಳಿಹಾಳ ಗ್ರಾಪಂ ಸಿಬ್ಬಂದಿ ಭಾಗವಹಿಸಿದರು.
ಪರಿಶೀಲಿನೆ:
ಕೇಂದ್ರ ಸಚಿವೆ ಆಗಮಿಸುವ ಕಾರಣ ಬುಧವಾರ ಬೆಳಿಗ್ಗೆ ಎಎಸ್ಪಿ ಮಂಜುನಾಥ ನೇತೃತ್ವದಲ್ಲಿ ನಿಗದಿತ ಸ್ಥಳ ಪರಿಶೀಲನೆ ಮಾಡಿದರು. ಮೊದಲು ವೇದಿಕೆಯ ಸ್ಥಳಕ್ಕೆ ಅಗಮಿಸಿದ ಪೊಲೀಸ್ ಅಧಿಕಾರಿ, ಗ್ರಾಪಂ ಕಚೇರಿ, ಗ್ರಂಥಾಲಯ, ಪ್ರವಾಸಿ ಮಂದಿರ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೊಟ್ಟೂರು ಸಿಪಿಐ ದುರುಗಪ್ಪ, ಕಾನಹೊಸಹಳ್ಳಿ ಪಿಎಸೈಗಳಾದ ಸಿದ್ರಾಮ ಬಿದರಾಣಿ, ಅರುಣನಾಯ್ಕ ಇದ್ದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಚಿಕ್ಕಜೋಗಿಹಳ್ಳಿಯಲ್ಲಿ ನಡೆಯುವ ಜಪಾನ್ ಮಿಯಾವಾಕಿ ಕಿರು ಅರಣ್ಯೀಕರಣ ಯೋಜನೆಗೆ ಚಾಲನೆ ನೀಡಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯನಗರ ಎಸ್ಪಿ ಜಾಹ್ನವಿ ಬುಧವಾರ ಸಂಜೆ ಚಿಕ್ಕಜೋಗಿಹಳ್ಳಿಗೆ ಭೇಟಿ ನೀಡಿ ಭದ್ರತಾ ಸಂಬಂಧಿತ ವಿಷಯವಾಗಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಕೊಟ್ಟೂರು ಸಿಪಿಐ ದುರುಗಪ್ಪ, ಪಿಎಸೈ ಸಿದ್ರಾಮ್ ಬಿದರಾಣಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.