ಜಯದೇವ-ಜಿಮ್ಸ್‌ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

KannadaprabhaNewsNetwork | Published : Jun 20, 2024 1:00 AM

ಸಾರಾಂಶ

ಕಲಬುರಗಿ ನಗರದ ಜಿಮ್ಸ್ ಅಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆಯಲ್ಲಿ ನೀರಿಲ್ಲದೆ ಶಸ್ತ್ರಚಿಕಿತ್ಸೆ ಮುಂದೂಡಲಾಗುತ್ತಿದೆ ಎಂದು ಮಾಧ್ಯಮದಲ್ಲಿ ಸುದ್ದಿ ಬಿತ್ತರವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗೆ 2 ಲಕ್ಷ ಲೀಟರ್ ನೀರು ಟ್ಯಾಂಕರ್ ಮೂಲಕ ಪೂರೈಸಬೇಕೆಂದು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಜಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಉಮೇಶ ಎಸ್.ಆರ್. ಮತ್ತು ಜಯದೇವ ಆಸ್ಪತ್ರೆಯ ವೈದ್ಯ ಡಾ.ವೀರೇಶ ಪಾಟೀಲ ಅವರಿಂದ ಆಸ್ಪತ್ರೆಗೆ ನೀರು ಪೂರೈಕೆ ಕುರಿತು ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯಲ್ಲಿ ಸ್ವಚ್ಛ ನೀರಿಲ್ಲದೆ ಶಸ್ತಚಿಕಿತ್ಸೆ ಮುಂದೂಡುವ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರೋಗಿಯ ಆರೈಕೆ ಮಾಡುವುದು ಆಸ್ಪತ್ರೆ ಮತ್ತು ಅದರ‌ ಸಿಬ್ಬಂದಿಗಳ ಪ್ರಥಮ ಜವಾಬ್ದಾರಿಯಾಗಿದೆ. ಜಿಮ್ಸ್ ಮತ್ತು ಜಯದೇವ ಅಸ್ಪತ್ರೆ ವೈದ್ಯರು ತಮ್ಮ ಕರ್ತವ್ಯವನ್ನು ಮರೆಯಬಾರದು. ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ. ಅವರೊಂದಿಗೆ ಸಮನ್ವಯ ಸಾಧಿಸಿ ಆಸ್ಪತ್ರೆಗೆ ಪ್ರತಿನಿತ್ಯ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು.ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮತ್ತು ನಿಯಮಿತ ವೈದ್ಯಕೀಯ ಸೇವೆಗಳು ವ್ಯತ್ಯಯವಾಗದಂತೆ ಎಚ್ಚರ ವಹಿಸಬೇಕೆಂದು ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ವೈದ್ಯರು ಮಾತನಾಡಿ, ನಗರಕ್ಕೆ ನೀರು ಪೂರೈಕೆಯಾಗುವ ಬೆಣ್ಣೆತೋರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಾಲಿಕೆಯಿಂದ ಪೂರೈಕೆಯಾಗುತ್ತಿರುವ ನಲ್ಲಿ ನೀರಿನಲ್ಲಿ ಮಣ್ಣು ಮಿಶ್ರಿತ‌ ಅಂಶ ಹೆಚ್ಚಾಗಿದೆ. ಶಸ್ತ್ರಚಿಕಿತ್ಸೆಗೆ ಸ್ವಚ್ಛ ನೀರು ಅವಶ್ಯಕತೆ ಇರುವ ಕಾರಣ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ನೀರಿನ ಅಭಾವ ಎಂದು ತಪ್ಪಾಗಿ ಭಾವಿಸಬಾರದು ವೈದ್ಯರು ತಿಳಿಸಿದರು.

ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ ಮತ್ತು ಇತರೆ ಅಧಿಕಾರಿಗಳಿದ್ದರು.

Share this article