ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ

KannadaprabhaNewsNetwork |  
Published : Jul 03, 2024, 12:17 AM IST
ಫೋಟೋ- ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ 1 | Kannada Prabha

ಸಾರಾಂಶ

ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಸತಿ ನಿಲಯ ಹಳೇಯದಾಗಿದ್ದು, ಪ್ರಸ್ತುತ 35 ನಿಲಯಾರ್ಥಿಗಳಿದ್ದಾರೆ. ಇದನ್ನು ಕೆಡವಿ ಇಲ್ಲಿ ತಲಾ 50 ಬಾಲಕ-ಬಾಲಕೀಯರ ಪ್ರತ್ಯೇಕ ವಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತ ವಸತಿ ನಿಲಯ ನಿರ್ಮಿಸಬೇಕಿದೆ. ಅಕ್ಕಪಕ್ಕದ ಕ್ರೀಡಾಂಗಣದ ಸ್ಥಳ ಬಳಸಿಕೊಂಡು ಸಕಲ ಸೌಕರ್ಯ ಒಳಗೊಂಡ ಕಟ್ಟಡ ನಿರ್ಮಿಸಬೇಕಿದ್ದು, ನಿವೇಶನದ ಸರ್ವೆ ಕಾರ್ಯ ಬುಧವಾರದಿಂದಲೆ ಆರಂಭಿಸುವಂತೆ ಕೆ.ಆರ್.ಐ.ಡಿ.ಎಲ್ ಕಾರ್ಯನಿರ್ವಾಹಕ ಅಭಿಯಂತ ಸೌರಭ್ ಅವರಿಗೆ ಡಿ.ಸಿ.ಸೂಚನೆ ನೀಡಿದರು.

ವಸತಿ ನಿಲಯದಲ್ಲಿ ಅಡುಗೆ ಕೋಣೆ, ಊಟದ ಕೋಣೆ, ವಾಸ ಸ್ಥಾನ, ಕ್ರೀಡಾ ಸಾಮಗ್ರಿ ಇಟ್ಟುಕೊಳ್ಳಲು ಪ್ರತ್ಯೇಕ ಸ್ಥಳ, ಶೌಚಾಲಯ ಹೀಗೆ ಸಕಲ ಸೌಕರ್ಯ ಒಳಗೊಂಡ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ಸಲ್ಲಿಸುವಂತೆ ಡಿ.ಸಿ. ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಐವಾನ್-ಎ-ಶಾಹಿ ಅತಿಥಿಗೃಹಕ್ಕೆ ಭೇಟಿ ನೀಡಿದ ಡಿ.ಸಿ. ಅವರು, ಆವರಣದಲ್ಲಿನ ನೂತನ ಅತಿಥಿಗೃಹಗಳ ಕಟ್ಟಡ ದುರಸ್ತಿ, ಅನೆಕ್ಸ್ ಕಟ್ಟಡದಲ್ಲಿ ಎರಡನೇ ಮಹಡಿ ನಿರ್ಮಾಣ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇದಕ್ಕು ಮುನ್ನ ಜಗತ್ ವೃತ್ತದಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು, ಪೀಠೋಪಕರಣಗಳನ್ನು ಬದಲಾಯಿಸುವಂತೆ ಸೂಚಿಸಿದರು.

ರಂಗಮಂದಿರ ದುರಸ್ತಿಗೆ ಪಟ್ಟಿ ಕೊಡಿ: ಡಾ. ಎಸ್.ಎಂ. ಪಂಡಿತ್ ರಂಗಮಂದಿರಕ್ಕೆ ಡಿ.ಸಿ. ಅವರು ಭೇಟಿ ನೀಡಿ ಕಟ್ಟಡ ವೀಕ್ಷಿಸಿದರು. ಅಲ್ಲಿದ್ದ ಮಾಜಿ ರಂಗಾಯಣ ನಿರ್ದೇಶಕ ಆರ್. ಕೆ. ಹುಡಗಿ, ರವೀಂದ್ರ ಶಾಬಾದಿ ಅವರು ರಂಗಮಂದಿರದಲ್ಲಿ ಪ್ರತಿನಿತ್ಯ ಸರ್ಕಾರಿ-ಖಾಸಗಿ ಕಾರ್ಯಕ್ರಮ ನಡೆಯುತ್ತವೆ, ಆದರೆ ಸೌಂಡ್ ಸಿಸ್ಟಮ್ ವ್ಯವಸ್ಥೆ ಇಲ್ಲದ ಕಾರಣ ಹೊರಗಿನಿಂದ ಬಾಡಿಗೆ ಪಡೆದು ತರಬೇಕಾಗಿದೆ. ಎ.ಸಿ. ಕಾರ್ಯನಿರ್ವಹಿಸುತ್ತಿಲ್ಲ, ಕಿಟಕಿ ಗಾಜು ಒಡೆದಿವೆ, ಸೀಟ್ ಹರಿದಿವೆ, ದುರಸ್ತಿ ಕಂಡಿಲ್ಲ ಎಂಬಿತ್ಯಾದಿ ವಿಷಯಗಳನ್ನು ಡಿ.ಸಿ ಅವರ ಗಮನಕ್ಕೆ ತಂದರು.

ಏನೇನು ದುರಸ್ತಿ ಮಾಡಬೇಕು ಅದೆಲ್ಲದರ ಬಗ್ಗೆ ಇಂದೇ ಪಟ್ಟಿ ಕೊಡಿ ದುರಸ್ತಿ ಮಾಡಲಾಗುವುದು ಎಂದು ರಂಗಮಂದಿರ ನಿರ್ವಹಣಾ ಸಮಿತಿಯ ಅಧ್ಯಕ್ಷೆಯಾಗಿರುವ ಡಿ.ಸಿ. ಫೌಜಿಯಾ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ