ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ಟಿಕೆಟ್‌ ಆಕಾಂಕ್ಷಿ: ವೀಣಾ

KannadaprabhaNewsNetwork | Published : Jul 3, 2024 12:17 AM

ಸಾರಾಂಶ

ಮುಂಬರುವ 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಂಬರುವ 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆ ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ನನಗೆ ಏಕೆ ಟಿಕೆಟ್ ಸಿಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ನಾನು ಜಿಲ್ಲೆಯ ಮನೆ ಮಗಳಾಗಿದ್ದು, ಜಿಲ್ಲೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನಾನು ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಿಗೆ ಟಿಕೆಟ್ ಆಕಾಂಕ್ಷಿ ಎಂದು ಸ್ಪಷ್ಟ ಪಡಿಸಿದರು.

ಈಚೆಗೆ ನಡೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಅನೇಕರು ನಾನು ದುಡ್ಡು ಪಡೆದು ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದೇನೆ ಎಂದು ಅಪಪ್ರಚಾರ ಮಾಡಿದರು. ನಾನು ದುಡ್ಡಿಗೆ ಮಾರಿಕೊಳ್ಳುವ ಹೆಣ್ಣಲ್ಲ. ಪಕ್ಷದ ಸೂಚನೆಯಂತೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಆಗಮಿಸಿ, ಬಳಿಕ ಪಕ್ಷ ಕೊಪ್ಪಳದ ಜವಾಬ್ದಾರಿ ನೀಡಿದ್ದರಿಂದ ಅಲ್ಲಿನ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೇನೆ. ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ 17.5 ಲಕ್ಷ ಜನರ ಸೇವೆಯೇ ನನ್ನ ಮೊದಲ ಆದ್ಯತೆ ಎಂದರು.

ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನೆಡೆಯಾಗಿದೆ. ನಾನು 2019ರಲ್ಲಿ ಸ್ಪರ್ಧಿಸಿದ್ದಾಗಲೂ ಪಕ್ಷಕ್ಕೆ ಬಿಜೆಪಿಗಿಂತ ಕಡಿಮೆ ಮತಗಳು ಬಂದಿದ್ದವು. ಜನರ ನಾಡಿ ಮಿಡಿತ ಅರಿಯುವುದು ಸುಲಭವಲ್ಲ. ಜಿಲ್ಲೆಯ ಜನರು ನನ್ನನ್ನು ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಒಪ್ಪಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದರೆ ಅಂದಾಜು 1 ಲಕ್ಷ ಮತಗಳ ಅಂತರದಿಂದ ನಾನು ಗೆಲ್ಲುತ್ತಿದ್ದೆ ಎಂದರು.ನಾನು ಜಿಲ್ಲೆಯ ಮನೆಗಳು. 22 ವರ್ಷದಿಂದ ರಾಜಕೀಯ ಜೀವನದಲ್ಲಿದ್ದೇನೆ. ಜಿಲ್ಲೆಯನ್ನು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರ ಸಮಸ್ಯೆ ಆಲಿಸಲು ನವನಗರದ ಸೆಕ್ಟರ್ ಸಂಖ್ಯೆ 63ರ ಮನೆಯಲ್ಲಿ ಜನ ಸಂಪರ್ಕ ಸಭೆ ನಡೆಸಲು ಪ್ರಾರಂಭಿಸುತ್ತೇನೆ.

- ವೀಣಾ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ

Share this article