ಕೆಎಫ್‌ಡಿ, ಡೆಂಘೀ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಾಕೀತು

KannadaprabhaNewsNetwork |  
Published : Jul 20, 2024, 12:46 AM IST
ಪೋಟೊ:19ಎಸ್‌ಎಂಜಿಕೆಪಿ04ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕೆಎಫ್‍ಡಿ ಮತ್ತು ಡೆಂಘೀ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕೆಎಫ್‍ಡಿ ಮತ್ತು ಡೆಂಘೀ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಸದ್ಯ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ಜೊತೆಗೆ ಕೆಎಫ್‌ಡಿ ಸೋಂಕು ಹರಡುವುದನ್ನು ತಡೆಯುವುದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕೆಎಫ್‍ಡಿ ಮತ್ತು ಡೆಂಘೀ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ, ಮೇಯಲು ಹೋದ ಹಸು-ಎಮ್ಮೆಗಳ ಮೈಮೇಲೆ ಉಣ್ಣಿಗಳು ಅಂಟಿಕೊಂಡು ಮನೆ-ಕೊಟ್ಟಿಗೆ ಸೇರಿಸುವ ಸಾಧ್ಯತೆ ಇರುವುದರಿಂದ ಕೆಎಫ್‌ಡಿ ಉಣ್ಣೆಗಳು ದನ ಮತ್ತು ಎಮ್ಮೆಗಳ ಮೂಲಕ ಮನೆಗಳಿಗೆ ತಲುಪುವುದನ್ನು ತಪ್ಪಿಸಲು ಜಾನುವಾರುಗಳ ಮೈಮೇಲೆ ನಿವಾರಕಗಳ ಲೇಪನ ಮತ್ತು ಲಸಿಕೆ ನೀಡುವ ಮೂಲಕ ಉಣ್ಣಿ ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.

ಮಳೆ ಕಡಿಮೆ ಆದ ಮೇಲೆ ಡೆಂಘೀ ಹೆಚ್ಚುವ ಸಂಭವ ಇದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಡೆಂಘೀ ಲಕ್ಷಣಗಳಿರುವವರನ್ನು ಫಿವರ್ ಕ್ಲಿನಿಕ್‍ಗೆ ಕರೆ ತರಬೇಕು. ಹಾಟ್‍ಸ್ಟಾಪ್ ಪ್ರದೇಶಗಳಲ್ಲಿ ಸೊಳ್ಳೆ ನಿವಾರಕಗಳನ್ನು ನೀಡಲು ಕ್ರಮ ವಹಿಸಬೇಕು. ಪ್ರತಿ ವಾರ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯ ಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಬೇಕು. ನಗರ ಭಾಗದಲ್ಲಿ ಆಶಾ, ಅಂಗನವಾಡಿ ಕೊರತೆ ಇರುವ ಕಾರಣ ನರ್ಸಿಂಗ್ ವಿದ್ಯಾರ್ಥಿ ಗಳನ್ನು ನಿಯೋಜಿಸಬೇಕು ಎಂದರು.

ಮೆಡಿಕಲ್ ಕಾಲೇಜುಗಳ ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನ್ನು ಡೆಂಘೀ ಸಮಸ್ಯಾತ್ಮಕ ಗ್ರಾಮ / ವಾರ್ಡ್‍ಗಳಿಗೆ ವಿಸ್ತರಿಸುವಂತೆ ತಿಳಿಸಿದ ಅವರು ಡೆಂಘೀ ನಿಯಂತ್ರಣದಲ್ಲಿ ಸಹಕರಿಸಿದ ನರ್ಸಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಇತರೆ ಸ್ವಯಂ ಸೇವಕರಿಗೆ ದೃಢೀಕರಣ ಪತ್ರ ನೀಡುವಂತೆ ತಿಳಿಸಿದರು.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಡೆಂಘೀ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಟಿಎಚ್‍ಒ ಮತ್ತು ವೈದ್ಯಾಧಿಕಾರಿಗಳು ತಾಲ್ಲೂಕುಗಳಲ್ಲಿ ಮೇಲ್ವಿಚಾರಣೆ ಕೈಗೊಳ್ಳಬೇಕು. ಪ್ರತಿವಾರ ಲಾರ್ವಾ ಸರ್ವೆ, ಫಾಗಿಂಗ್, ಜ್ವರ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.

ಜಿ.ಪಂ ಸಿಇಓ ಎನ್.ಹೇಮಂತ್ ಮಾತನಾಡಿ, ಕೆಎಫ್‍ಡಿ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳಲ್ಲಿ ಉಣ್ಣಿಗಳನ್ನು ನಿಯಂತ್ರಿಸಲು ಕೆಎಂಎಫ್ ಸಂಪರ್ಕಿಸಿ ಎಂಪಿಸಿಎಸ್ ಸೊಸೈಟಿ ಹಾಗೂ ಪಶುಪಾಲನಾ ಇಲಾಖೆಯಡಿ ನೋಂದಣಿಯಾದ ಜಾನುವಾರುಗಳ ಸಂಖ್ಯೆಯ ವರದಿ ಪಡೆಯಬೇಕು. ಜೊತೆಗೆ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಜಾನುವಾರುಗಳು ಹೊರಗಡೆ ಮೇಯುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 360 ಡೆಂಗಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 2 ಸಾವು ದೃಢಪಟ್ಟಿದೆ. ಡೆಂಘೀ ನಿಯಂತ್ರಿಸಲು ಪ್ರತಿ ವಾರ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಫಾಗಿಂಗ್ ಮಾಡಲಾಗುತ್ತಿದೆ. ಈಗ ಶುಕ್ರವಾರಗಳಂದು ನೀರು ಸಂಗ್ರಹಿಸುವ ಪರಿಕರ ಸ್ವಚ್ಛಗೊಳಿಸುವ ಶುಷ್ಕ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯ 17 ಕಡೆ ಫಿವರ್ ಕ್ಲಿನಿಕ್ ತೆರೆಯಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ 5 ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ಡೆಂಗಿ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿಮ್ಸ್ ಕಾಲೇಜಿನ ಡಾ.ಪ್ರವೀಣ್ ಮಾತನಾಡಿ, ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳು ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನಲ್ಲಿ ಗ್ರಾಮಗಳಲ್ಲಿ 3 ರಿಂದ 4 ಕುಟುಂಬ ಗಳನ್ನು ಅಡಾಪ್ಟ್ ಮಾಡಿಕೊಂಡಿದ್ದು, 2 ರಿಂದ 3 ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಶಿಬಿರಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಡೆಂಘೀ ಕುರಿತು ಅರಿವು ಮೂಡಿಸಲಾಗುವುದು ಎಂದರು.

ಸಭೆಯಲ್ಲಿ ಪಾಲಿಕೆ ಸಿಎಓ ಮೋಹನ್ ಕುಮಾರ್, ಡಿಎಸ್‍ಒ ಡಾ.ಮಲ್ಲಪ್ಪ, ಡಾ.ಕಿರಣ್, ಡಾ.ಹರ್ಷವರ್ದನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಐಎಂಎ ಅಧ್ಯಕ್ಷ ಡಾ.ರಮೇಶ್, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ಬಾಲು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ