ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಸನ ಜಿಲ್ಲಾ ಘಟಕ ಮತ್ತು ಚನ್ನರಾಯಪಟ್ಟಣ ತಾಲೂಕು ಘಟಕದ ವತಿಯಿಂದ ರಾಜ್ಯದಲ್ಲೇ ಪ್ರಥಮ ಪತ್ರಿಕಾ ವಿತರಕರ ಜಿಲ್ಲಾ ಸಮ್ಮೇಳನವನ್ನು ಮಾ.೨ರಂದು ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಸಮ್ಮೇಳನವನ್ನು "ವಿತರಕರ ಬಾಳು ಬೆಳಕಾಗಿಸೋಣ " ಎಂಬ ಘೋಷವಾಕ್ಯದಡಿಯಲ್ಲಿ ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ. ೩ ಸಾವಿರಕ್ಕೂ ಅಧಿಕ ಜನ ವಿತರಕರು ಹಾಗೂ ಪತ್ರಕರ್ತರು ಆಗಮಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ೯ಕ್ಕೆ ಮೆರವಣಿಗೆ, ೧೦.೩೦ಕ್ಕೆ ಮುಖ್ಯ ವೇದಿಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಪತ್ರಿಕಾ ವಿತರಕರ ಗೋಷ್ಠಿ, ಕುಟುಂಬಗಳಿಗೆ ಕ್ರೀಡಾಕೂಟ, ಪತ್ರಿಕಾ ವಿತರಕರ ಕುಟುಂಬಗಳಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ಇ-ಶ್ರಮ್ ಕಾರ್ಡ್ ವಿತರಣೆ, ಅಂಬೇಡ್ಕರ್ ಸಹಾಯಹಸ್ತ ಯೋಜನೆ, ಪತ್ರಿಕಾ ವಿತರಕರ ಸದಸ್ಯತ್ವ ನೋಂದಣಿ ಅಭಿಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ.ನೋಂದಣಿಗೆ ಅವಕಾಶ:
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಸರ್ಕಾರದ ಗಮನ ಸೆಳೆದು ಈಗಾಗಲೇ ಪತ್ರಿಕಾ ವಿತರಕರಿಗೆ ತಂದಂತಹ ಅಪಘಾತ ವಿಮಾ ಯೋಜನೆಯ ವಯೋಮಿತಿಯನ್ನು ಹೆಚ್ಚಿಸಿದ್ದು ಇದೀಗ ವೆಬ್ ಪೋರ್ಟಲ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಇದ್ದಂತಹ ೧೬ರಿಂದ ೫೯ ವರ್ಷದ ವಯೋಮಿತಿಯನ್ನು ಹೆಚ್ಚಿಸಿ ಇದೀಗ ೧೬ರಿಂದ ೭೦ ವರ್ಷದವರೆಗೂ ಅಂಬೇಡ್ಕರ್ ಸಹಾಯಹಸ್ತ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.ನೋಂದಣಿಯಾದರೆ ಅಪಘಾತದಲ್ಲಿ ಮೃತಪಟ್ಟಲ್ಲಿ ೨ ಲಕ್ಷ ರು. ಪರಿಹಾರ ಹಣ ಕುಟುಂಬಕ್ಕೆ, ಅಂಗವೈಕಲ್ಯವಾದರೆ ಅಪಘಾತದ ತೀವ್ರತೆ ಅರಿತು ೨ ಲಕ್ಷ ರು.ವರೆಗೂ ಪರಿಹಾರ ಹಣ ಹಾಗೂ ಒಂದು ಲಕ್ಷ ರು. ಗಂಭೀರ ಕಾಯಿಲೆಗಳಿಗಾಗಿ ಸರ್ಕಾರ ನೀಡುತ್ತಿದೆ. ವಿತರಕರಿಗೆ ಪಿಂಚಣಿ ಯೋಜನೆ ಜಾರಿ ಮಾಡಿ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ. ಹಾಗೆಯೇ ವಿಮಾ ಯೋಜನೆ, ಕುಟುಂಬದ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ, ಉಚಿತ ಬಸ್‌ಪಾಸ್, ಕ್ಷೇಮನಿಧಿಗೆ ೧೦ ಕೋಟಿ ರೂ. ನೀಡುವಂತೆ ಸಮ್ಮೇಳನದಲ್ಲಿ ಒತ್ತಾಯಿಸಲಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿತರಕ ಸಂಘದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗರವರು ಪ್ರಧಾನ ಮಾತುಗಳನ್ನಾಡಲಿದ್ದು ಪ್ರಾಸ್ತಾವಿಕ ನುಡಿಯನ್ನು ಪತ್ರಿಕಾ ವಿತರಕರ ಸಂಘದ ರಾಜ್ಯ ನಿರ್ದೇಶಕರಾದ ಪುಟ್ಟಣ್ಣ ಗೋಕಾಕ್ ನಡೆಸಿಕೊಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಸಂಸದ ಶ್ರೇಯಸ್ ಎಂ.ಪಟೇಲ್, ಸ್ಥಳೀಯ ಶಾಸಕ ಡಾ.ಸಿ.ಎನ್.ಬಾಲಕೃಷ್ಣ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ರಾಜ್ಯ ಮತ್ತು ಜಿಲ್ಲೆಯ ಹಲವು ಶಾಸಕರು, ಗಣ್ಯರು ಆಗಮಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಮಿತಿ ರಚನೆ ಮಾಡಲಾಗಿದೆ.ಸನ್ಮಾನ: ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಗಳಿಸಿದ ಹಾಗೂ ಎಂಬಿಬಿಎಸ್ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ಪತ್ರಿಕಾ ವಿತರಕರ ಮಕ್ಕಳು ಹಾಗೂ ಪತ್ರಿಕೆ ಹಂಚುವ ಹುಡುಗರನ್ನು ಸಮಾವೇಶದಲ್ಲಿ ಅಭಿನಂದಿಸಲಾಗುವುದು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ನೀಡುವ ಜಿಲ್ಲೆಯ ಹಿರಿಯ ವಿತರಕರಿಗೆ ಕೊಡಮಾಡುವ ಹಿರಿಯ ಸಾಧಕರು ಪ್ರಶಸ್ತಿಗೆ ಜಿಲ್ಲೆಯ ಪ್ರತಿ ತಾಲೂಕಿನಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಹಾಸನದ ರಾಮಚಂದ್ರ, ಚನ್ನರಾಯಪಟ್ಟಣ ಗುಂಡಣ್ಣ ಹೊಳೆನರಸೀಪುರ ರಂಗಸ್ವಾಮಿ, ಅರಕಲಗೂಡು ಎನ್. ಅಣ್ಣಯ್ಯ, ಅರಸೀಕೆರೆ ಕೆ.ಜಿ.ವೆಂಕಟೇಶ್, ಬೇಲೂರು ಮಹಾವೀರ, ಆಲೂರು ಕೆ.ಬಿ.ಕಲ್ಯಾಣ ಕುಮಾರ್, ಸಕಲೇಶಪುರ ಶೇಖ್ ಅಹಮ್ಮದ್ ಆಯ್ಕೆಯಾಗಿದ್ದು ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.