ಕುಸಿಯುವ ಭೀತಿಯಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಕಟ್ಟಡ

KannadaprabhaNewsNetwork |  
Published : May 05, 2026, 03:00 AM IST
ಶ್ರೀಕಾಂತ್‌ ಶೆಟ್ಟಿ ಬಾಳ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು, ಅದಕ್ಕಾಗಿ ತಡೆಗೋಡೆ ನಿರ್ಮಿಸಲು ದೇಣಿಗೆ ನೀಡುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.

ಮಂಗಳೂರು: ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು, ಅದಕ್ಕಾಗಿ ತಡೆಗೋಡೆ ನಿರ್ಮಿಸಲು ದೇಣಿಗೆ ನೀಡುವಂತೆ ಸಂಘದ ವತಿಯಿಂದ ಮನವಿ ಮಾಡಲಾಗಿದೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ, ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ (ಡಿಕೆಇಎಸ್‌ಎಂಎ) ಕಟ್ಟಡ ಮಂಗಳೂರಿನ ಲೈಟ್‌ಹೌಸ್‌ ಹಿಲ್‌ನ ಅಂಚಿನಲ್ಲಿದೆ. ಕಟ್ಟಡದ ಹಿಂಭಾಗ ಸೈಂಟ್‌ ಅಲೋಶಿಯಸ್‌ (ಪರಿಗಣಿತ) ವಿಶ್ವವಿದ್ಯಾಲಯದ ಕ್ರೀಡಾಂಗಣವನ್ನು ಹೊಂದಿದೆ. 2023ರಲ್ಲಿ ಸಂಘದ ಸದಸ್ಯರಿಂದ ಸಂಗ್ರಹಿಸಲಾದ ದೇಣಿಗೆಯ ಮೂಲಕ 24 ಲಕ್ಷ ರು. ವೆಚ್ಚದಲ್ಲಿ ಗುಡ್ಡದ ಭಾಗದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಈ ಕಟ್ಟಡ ಜಿಲ್ಲಾಡಳಿತದಿಂದ ನೀಡಲಾದ 5 ಸೆಂಟ್ಸ್‌ ಜಾಗದಲ್ಲಿದೆ. ತಡೆಗೋಡೆ ನಿರ್ಮಿಸಲಾದ ಒಂದು ಸೆಂಟ್ಸ್‌ ಸರ್ಕಾರಿ ಜಾಗವಾಗಿಯೇ ಉಳಿದಿದೆ. 2025ರ ಮೇ 28ರ ರಾತ್ರಿಯ ಬಾರೀ ಮಳೆಗೆ ಸಂಪೂರ್ಣ ತಡೆಗೋಡೆ ಹಾಗೂ ಗುಡ್ಡದ ಭಾಗ ಕುಸಿದು ಕ್ರೀಡಾಂಗಣಕ್ಕೆ ಬಿದ್ದಿದೆ. ಪರಿಣಾಮ ಸಂಘದ ಕಟ್ಡಡಕ್ಕೆ ಅಪಾಯ ಎದುರಾಗಿದೆ. ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದ್ದು, ಮುಂದಿನ ಸೂಚನೆವರೆಗೆ ಕಟ್ಟಡ ಬಳಸದಂತೆ ನೋಟೀಸ್ ನೀಡಿದ್ದಾರೆ. ಸಂಘದ ವತಿಯಿಂದ ಎಂಜಿನಿಯರ್‌ಗಳಿಂದ ತಾಂತ್ರಿಕ ಪರಿಶೀಲನೆ ನಡೆಸಿದ ವೇಳೆ ಬಲಿಷ್ಠ ತಡೆಗೋಡೆ ನಿರ್ಮಿಸಬೇಕು, ಇದಕ್ಕೆ ಅಂದಾ ವೆಚ್ಚ 46 ಲಕ್ಷ ರು. ಆಗಬಹುದು ಎಂದಿದ್ದರು. ಈ ಬಗ್ಗೆ ಸ್ಥಳೀಯಾಡಳಿತದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದಾಗ, ಈ ಚ್ಚ್ಚ ಸುಮಾರು 86 ಲಕ್ಷ ರು. ಆಗಬಹುದು ಎಂದು ಅಂದಾಜಿಸಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್‌ ಅವರನ್ನು ಸಂಪರ್ಕಿಸಿದ್ದೆವು. ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕ ನಿಧಿಯಿಂದ ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಯೋಜನೆ ಆರಂಭಿಸಿಲು ಮನಪಾ ಅಧಿಕಾರಿಗಳಿಗೆ ಹಲವು ಬಾರಿ ಸೂಚನೆ ನೀಡಿದ್ದರೂ, ನಿಧಿಯ ಕೊರತೆ ಹಾಗೂ ಇದು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿದ್ದರು.ಈಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಆರಂಭವಾಗಿಲ್ಲ. ಮುಂದಿನ ಮಳೆಗಾಲದ ಮೊದಲು ತಡೆಗೋಡೆ ನಿರ್ಮಾಣವಾಗದೇ ಇದ್ದಲ್ಲಿ ಕಟ್ಡಡ ಕುಸಿಯುವ ಭೀತಿಯಲ್ಲಿದೆ. ಕುಸಿಯಲು ನಾವು ಅವಕಾಶ ನೀಡುವುದಿಲ್ಲ. ಡಿಕೆಇಎಸ್‌ಎಂಎ ನೋಂದಾಯಿತ ಸಂಘವಾಗಿದ್ದು, ಸೀಮಿತ ಸಂಪನ್ಮೂಲಗಳನ್ನು ಹೊಂದಿದೆ. ತಡೆಗೋಡೆ ನಿರ್ಮಾಣಕ್ಕೆ ಅಗತ್ಯವಿರುವ ಹಣಕಾಸು ಒದಗಿಸಲು ಸಂಘ ಸದ್ಯದ ಪರಿಸ್ಥಿತಿಯಲ್ಲಿ ಅಸಮರ್ತವಾಗಿದೆ. ಆದ್ದರಿಂದ ಮಾಜಿ ಸೈನಿಕರ ಕಲ್ಯಾಣವನ್ನು ಬೆಂಬಲಿಸುವವರು, ಹಿತೈಷಿಗಳು ಹಾಗೂ ಜವಾಬ್ದಾರಿಯುತ ನಾಗರಿಕರು ಉದಾರವಾಗಿ ದೇಣಿಗೆ ನೀಡಿ ತಡೆಗೋಡೆಯ ಪುನರ್‌ ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕೆಂದು ಸಂಘ ವಿನಂತಿಸುತ್ತದೆ. ನಿಧಿಯ ಬಳಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು, ಎಲ್ಲ ದಾನಿಗಳಿಗೆ ಕಾಲಕಾಲಕ್ಕೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಅವರು ವಿನಂತಿಸಿದರು.ಸಂಘದ ಉಪಾಧ್ಯಕ್ಷ ಜಯಚಂದ್ರನ್ ಎ.ಕೆ., ಕಾರ್ಯದರ್ಶಿ ವಿ.ದೀಪಕ್ ಅಡ್ಯಂತಾಯ, ಕೋಶಾಧಿಕಾರಿ ಸುಧೀರ್ ಪೈ ಎಂ. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದೇಶ್ವರ ಶ್ರೀ ಮಹದಾಸೆ ಈಡೇರಿಸಿದ್ದೇವೆ
ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ ಉಮೇಶ