ಧಾರವಾಡ:
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಡೀ ಜಿಲ್ಲೆಯನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ರಾಜ್ಯ ಸರ್ಕಾರ ಘೋಷಿಸಿರುವ 101 ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಯಾವುದೇ ತಾಲೂಕನ್ನು ಸೇರಿಸಿಲ್ಲ. ಕೂಡಲೇ ಧಾರವಾಡ ಜಿಲ್ಲೆಯನ್ನೂ ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಶೇ. 85ರಷ್ಟು ಬೆಳೆಗಳು ಒಣಗಿ ಹೋಗಿವೆ. ಮಳೆಯ ಅಭಾವದಿಂದ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹಿಂಗಾರು ಬೆಳೆಗಳಿಗೂ ಮಳೆಯ ಕೊರತೆ ಎದುರಾಗಿದ್ದು, ರೈತರ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಬರ ಪರಿಹಾರ ನೀಡದೆ ಜಿಲ್ಲೆಯನ್ನು ಬರದ ಪಟ್ಟಿಯಿಂದ ಹೊರಗಿಟ್ಟಿರುವುದು ಅತ್ಯಂತ ಖಂಡನೀಯ ಎಂದರು.ರಾಜ್ಯ ಸರ್ಕಾರ ಇನ್ನಾದರೂ ಜಿಲ್ಲೆಯ ಬರ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿ, ಜಿಲ್ಲೆಯನ್ನು ಕೂಡಲೇ ಬರಪೀಡಿತ ಎಂದು ಘೋಷಿಸಬೇಕು. ರೈತರಿಗೆ ಬೆಳೆ ಪರಿಹಾರ ಸೇರಿದಂತೆ ಅಗತ್ಯ ನೆರವು ಒದಗಿಸಬೇಕು. ಸ್ಥಳೀಯ ಸಚಿವರು ಹಾಗೂ ಶಾಸಕರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ತಂದು ಧಾರವಾಡವನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿಸಬೇಕು. ಇಲ್ಲವಾದಲ್ಲಿ ರೈತರ ಪರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.