ಮೇಜರ್‌ ಸರ್ಜರಿಗೆ ಕಾದು ರೋಗಿಯಾದ ಜಿಲ್ಲಾಸ್ಪತ್ರೆ!

KannadaprabhaNewsNetwork | Published : Apr 24, 2025 12:33 AM

ಸಾರಾಂಶ

ದಾವಣಗೆರೆ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನಂತರವೂ ಸುಧಾರಣೆ ಕಾಣದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಬುಧವಾರ ಉಪ ಲೋಕಾಯಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿದಾಗಲೂ ಜಿಲ್ಲಾಸ್ಪತ್ರೆ ವಯೋ ಸಹಜ ರೋಗಗ್ರಸ್ಥವಾಗಿದೆಯೆಂಬುದು ಮತ್ತೊಮ್ಮೆ ಸಾಬೀತಾದಂತಾಯಿತು.

ದಾವಣಗೆರೆ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ ನಂತರವೂ ಸುಧಾರಣೆ ಕಾಣದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಬುಧವಾರ ಉಪ ಲೋಕಾಯಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಿದಾಗಲೂ ಜಿಲ್ಲಾಸ್ಪತ್ರೆ ವಯೋ ಸಹಜ ರೋಗಗ್ರಸ್ಥವಾಗಿದೆಯೆಂಬುದು ಮತ್ತೊಮ್ಮೆ ಸಾಬೀತಾದಂತಾಯಿತು.

ನಗರದ ಜಿಲ್ಲಾಸ್ಪತ್ರೆಯ ಹೊರರೋಗಿಗಳ ನೋಂದಣಿ ವಿಭಾಗಕ್ಕೆ ಬುಧವಾರ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಲ್ಲಿದ್ದ ರೋಗಿಗಳು, ಸಾರ್ವಜನಿಕರಿಂದ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸಾ ಸೌಲಭ್ಯ, ಆರೈಕೆ ಕುರಿತಂತೆ ಮಾಹಿತಿ ಪಡೆದ ವೇಳೆ ಸಾಕಷ್ಟು ಸಮಸ್ಯೆ, ದೂರುಗಳು ಕೇಳಿ ಬಂದವು.

ಬಡ, ಮಧ್ಯಮ ವರ್ಗ, ಗ್ರಾಮೀಣರಿಗೆ, ರೈತಾಪಿ ಜನರಿಗೆ ಆಸರೆಯಾಗಬೇಕಾದ ಜಿಲ್ಲಾಸ್ಪತ್ರೆಯ ಒಂದೊಂದೇ ಅವ್ಯವಸ್ಥೆಯ ಅನಾವರಣವಾಗುತ್ತಾ ಸಾಗಿತು. ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದ ಎದುರಿನ ಮಿನಿ ಆಪರೇಷನ್ ಥೇಟರ್‌ನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದರೂ ವೈದ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ನ್ಯಾ.ವೀರಪ್ಪನವರ ಬಳಿ ಅಳಲು ತೋಡಿಕೊಂಡರು.

ಹೈ ದ್ರೋಗ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಓಬಿಜಿ ವಾರ್ಡ್ ಸೇರಿದಂತೆ ವಿವಿಧ ವಿಭಾಗಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಅಲ್ಲಿನ ಸ್ಥಿತಿಗತಿ, ಅವ್ಯವಸ್ಥೆಯನ್ನು ಕಣ್ಣಾರೆ ಕಂಡರಲ್ಲದೇ, ವಿವಿಧ ವಿಭಾಗಗಳ ವಾರ್ಡ್‌ಗಳಲ್ಲಿ ಒಳ ರೋಗಿಗಳಾಗಿ ದಾಖಲಾಗಿದ್ದ ರೋಗಿಗಳ ಆರೋಗ್ಯ ವಿಚಾರಿಸಿ, ಆಸ್ಪತ್ರೆ ಸೌಲಭ್ಯ, ವೈದ್ಯಾಧಿಕಾರಿ, ಶುಶ್ರೂಷಕರು, ಸಿಬ್ಬಂದಿ ಸೇವೆ ಬಗ್ಗೆ ಮಾಹಿತಿ ಪಡೆದರು.

ರೋಗಿಗಳು, ರೋಗಿಗಳ ಕುಟುಂಬದ ಮಾತುಗಳಿಂದಲೇ ಸಮಸ್ಯೆ ಗ್ರಹಿಸಿದ ನ್ಯಾ.ವೀರಪ್ಪ, ರೋಗಿಗಳಿಗೆ ಮೊದಲು ಗುಣಮಟ್ಟದ ಸೇವೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಆದೇಶಿಸಿದರು.

ಬಳಿಕ ಜಿಲ್ಲಾಸ್ಪತ್ರೆ ಶವಾಗಾರಾ ಹಾಗೂ ಜೀವ ವೈದ್ಯಕೀಯ ತ್ಯಾಜ್ಯ ಶೇಖರಣಾ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ವಿಲೇ ಮಾಡುತ್ತಿದ್ದಾರಾ?, ಶವಾಗಾರದ ತ್ಯಾಜ್ಯ ಸಮೀಪದ ನಾಲೆಗೆ ಸೇರುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಲೋಕಾಯುಕ್ತಕ್ಕೆ ವರದಿ ನೀಡುವಂತೆ ದಾವಣಗೆರೆ ಮಹಾ ನಗರ ಪಾಲಿಕೆ ಹಾಗೂಪರಿಸರ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೂ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಬಗ್ಗೆಯೂ ಬೇಸರ ಹೊರ ಹಾಕಿದರು. ಜಿಲ್ಲಾಸ್ಪತ್ರೆ ಆವರಣದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ, ಜಿಲ್ಲಾ ಔಷಧ ಉಗ್ರಾಣಕ್ಕೆ ಭೇಟಿ ನೀಡಿ, ಯಾವುದೇ ಆಸ್ಪತ್ರೆಗೂ ಅವಧಿ ಮೀರಿದ ಔಷಧಿ, ಶಸ್ತ್ರಚಿಕಿತ್ಸಕ ವಸ್ತು ವಿತರಿಸಬಾರದು. ಕೋಟ್ಯಾಂತರ ರು. ಖರ್ಚು ಮಾಡಿ, ಸರ್ಕಾರ ಔಷಧಿ ಖರೀದಿಸುತ್ತದೆ. ಕಾಲಕಾಲಕ್ಕೆ ಆಸ್ಪತ್ರೆಗಳಿಗೆ ಅವುಗಳನ್ನು ಹಂಚಿ, ರೈತರಿಗೆ ವಿತರಿಸಿ, ಔಷಧಗಳ ಅವಧಿಯೆ ಮುಗಿದು ಹೋದರೆ ಯಾರು ಹೊಣೆ ? ಉಗ್ರಾಣದಲ್ಲಿ ಅವಧಿ ಮೀರಿದ ಔಷಧ ಸೂಕ್ತ ರೀತಿ ವಿಲೇ ಮಾಡದೆ, ಯಾಕೆ ಇಟ್ಟುಕೊಂಡಿದ್ದೀರಿ ? ಡಿಸೆಂಬರ್ 2022ರಿಂದ ಈ‍ವರೆಗೆ ಅವಧಿ ಮೀರಿದ ಔಷಧಗಳ ಮೌಲ್ಯ ಎಷ್ಟು ಎಂಬುದನ್ನು ವಿವರವಾಗಿ ಲೋಕಾಯುಕ್ತ ಇಲಾಖೆಗೆ ಮಾಹಿತಿ ನೀಡುವಂತೆ ಔಷಧ ಉಗ್ರಾಣದ ವೈದ್ಯಾಧಿಕಾರಿಗೆ ಆದೇಶಿದರು.

ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ, ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ.ರಾಜಶೇಖರ, ಎನ್.ವಿ.ಅರವಿಂದ, ವಿ.ಎನ್.ಮಿಲನ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾ.ಮಹಾವೀರ ಮ.ಕರೆಣ್ಣವರ, ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ, ಜಿಲ್ಲಾ ಸರ್ಜನ್‌ ಡಾ.ನಾಗೇಂದ್ರಪ್ಪ ಮತ್ತಿತರರಿದ್ದರು.

Share this article