ಟಿಎವಿಐ ಶಸ್ತ್ರಚಿಕಿತ್ಸೆಯಿಂದ ಮಾದರಿಯಾದ ಜಿಲ್ಲಾಸ್ಪತ್ರೆ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : Apr 27, 2026, 02:15 AM IST
ಸುದ್ದಿಗೋಷ್ಠಿಯಲ್ಲಿ ಸಚಿವ ಡಾ. ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾಥ್‌ಲ್ಯಾಬ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಟಿಎವಿಐ(ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ಇಂಪ್ಲಾಂಟೇಶ್‌) ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಮೂಲಕ ಜಯದೇವ ಆಸ್ಪತ್ರೆ ಹೊರತುಪಡಿಸಿ ಟಿಎವಿಐ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗದಗ: ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕಳೆದ ಹಲವು ವರ್ಷಗಳಿಂದ ತನ್ನ ವಿಶೇಷತೆಗಳಿಂದ ತನ್ನ ಹಿರಿಮೆ ಹೆಚ್ಚಿಸುತ್ತ ಮಾದರಿಯಾಗುವಲ್ಲಿ ಕೆಲಸ ಮಾಡುತ್ತಿರುವ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಜಿಮ್ಸ್) ಇದೀಗ ಟಿಎವಿಐ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾಥ್‌ಲ್ಯಾಬ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಟಿಎವಿಐ(ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ಇಂಪ್ಲಾಂಟೇಶ್‌) ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಈ ಮೂಲಕ ಜಯದೇವ ಆಸ್ಪತ್ರೆ ಹೊರತುಪಡಿಸಿ ಟಿಎವಿಐ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಮೊದಲ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ₹22- 25 ಲಕ್ಷ ವೆಚ್ಚ ತಗುಲಬಹುದಾದ ಟಿಎವಿಐ ಹೃದಯ ಶಸ್ತ್ರಚಿಕಿತ್ಸೆಯನ್ನು ಜಿಲ್ಲೆಯ ನರಗುಂದ ತಾಲೂಕಿನ 68 ವರ್ಷದ ರಮೇಶ ಮುರಡಿ ಅವರು ಎಸ್ಸಿಪಿ- ಟಿಎಸ್ಪಿ ಅನುದಾನದಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು.

ಕೆಎಚ್‌ಪಿಐಎಂಎಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾರ್ಗದರ್ಶನದಡಿ ಹೃದ್ರೋಗ ತಜ್ಞ ಡಾ. ಸಂಜೀವ್ ಚಿಂತಾಮಣಿ ಸಹಕಾರದಲ್ಲಿ ಬೆಂಗಳೂರಿನ ಟಿಎವಿಐ ತಜ್ಞ ವೈದ್ಯ ಡಾ. ವಿಕ್ರಮ ಪಾಟೀಲ ನೇತೃತ್ವದ ವೈದ್ಯಕೀಯ ತಂಡ 68 ವರ್ಷದ ವ್ಯಕ್ತಿಗೆ ಸಂಕೀರ್ಣವಾದ ಹೈಬ್ರಿಡ್‌ ಟಿಎವಿಐ ವಿಧಾನದ ಮೂಲಕ ಯಶಸ್ವಿ ಹೃದಯ ಮಹಾಪಧಮನಿಯ ಕವಾಟ ಬದಲಾವಣೆ ಮಾಡಲಾಗಿದೆ ಎಂದರು.

ಜಯದೇವ ಆಸ್ಪತ್ರೆ ಹೊರತುಪಡಿಸಿ ಇದು ರಾಜ್ಯದಲ್ಲೇ ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕ್ಯಾಥ್ ಲ್ಯಾಬ್‌ವೊಂದರಲ್ಲಿ ನಡೆಸಿದ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕ್ಯಾಥ್ ಲ್ಯಾಬ್‌ ಪ್ರಾರಂಭವಾದ ವರ್ಷದೊಳಗೆ 543ಕ್ಕೂ ಹೆಚ್ಚು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆ ಪೈಕಿ 272ಕ್ಕೂ ಹೆಚ್ಚು ಆಂಜಿಯೀಪ್ಲಾಸ್ಟಿ(ಸ್ಟಂಟ್‌ ಅಳವಡಿಕೆ), 494ಕ್ಕೂ ಹೆಚ್ಚು ಆಂಜಿಯೋಗ್ರಾಫಿ, 13 ಪೇಸ್ ಮೇಕರ್(ಕೃತಕ ಹೃದಯ ಮಿಡಿತ ಸಾಧನ ಅಳವಡಿಕೆ), 1 ಸಿಆರ್‌ಟಿ- ಡಿ, 1 ಎಸ್‌ಎಸ್‌ಡಿ ಡಿವೈಸ್‌ ಕ್ಲೋಸರ್‌ ಹಾಗೂ 2 ಐವಿಐ ಚಿಕಿತ್ಸೆ ನೀಡಲಾಗಿದೆ. ಸದ್ಯ ಈಗ ಟಿಎವಿಐ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಹೃದ್ರೋಗ ತಜ್ಞ ಡಾ. ವಿಕ್ರಂ ಪಾಟೀಲ ಮಾತನಾಡಿ, ಟಿಎವಿಐ ಇದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ, ತೊಡೆಯ ಸಂದಿನ ಮೂಲಕ ಕ್ಯಾತಿಟರ್ ಬಳಸಿ ಹೃದಯದ ಕವಾಟ ಬದಲಾಯಿಸುವ ಅತ್ಯಾಧುನಿಕ ಚಿಕಿತ್ಸಾ ವಿಧಾನವಾಗಿದೆ ಎಂದರು.

ಈ ವೇಳೆ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ಸಂಜೀವ್ ಚಿಂತಾಮಣಿ, ಡಾ. ವಿನಾಯಕ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಎಡಿಸಿ ಡಾ. ದುರುಗೇಶ್ ಕೆ.ಆರ್. ಹಲವರು ಇದ್ದರು.

ಪಕ್ಷದ ಆಂತರಿಕ ಸುಧಾರಣೆಗೆ ಹೈಕಮಾಂಡ್ ಶೀಘ್ರ ಕ್ರಮ: ಸಚಿವ ಎಚ್.ಕೆ. ಪಾಟೀಲ

​ಗದಗ: ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಯಾವುದೂ ಕೆಟ್ಟಿಲ್ಲ. ಆದರೆ, ಕಾಲಕಾಲಕ್ಕೆ ಆಗಬೇಕಿರುವ ಸುಧಾರಣೆಗೆ ಖಂಡಿತ ಅವಕಾಶವಿದೆ. ಆ ಸುಧಾರಣಾ ಪ್ರಕ್ರಿಯೆಯನ್ನು ನಾವೆಲ್ಲರೂ ಎದುರು ನೋಡುತ್ತಿದ್ದೇವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲೆ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಹಿತದೃಷ್ಟಿಯಿಂದ ಬಣ ರಾಜಕೀಯದ ಬಗ್ಗೆ ಅಥವಾ ಗುಂಪುಗಾರಿಕೆ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಶೋಭೆಯಲ್ಲ. ಎಐಸಿಸಿ ಅಧ್ಯಕ್ಷರು ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದಾಗ್ಯೂ ಕೆಲವು ಮಾತುಗಳು ಕೇಳಿಬರುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪಕ್ಷದ ಆಂತರಿಕ ಗೊಂದಲಗಳನ್ನು ಬಗೆಹರಿಸುವುದು ಮತ್ತು ಸುಧಾರಣೆ ತರುವುದು ಹೈಕಮಾಂಡ್‌ನ ಜವಾಬ್ದಾರಿಯಾಗಿದೆ. ವರಿಷ್ಠರು ಈ ನಿಟ್ಟಿನಲ್ಲಿ ಶೀಘ್ರವಾಗಿ ಕಾರ್ಯಪ್ರವೃತ್ತರಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.ಇದೇ ಸಂದರ್ಭದಲ್ಲಿ ಒಳಮೀಸಲಾತಿ ಜಾರಿ ವಿಷಯದಲ್ಲಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡ ಸಚಿವರು, ಸರ್ಕಾರವು ಒಳಮೀಸಲಾತಿ ವಿಷಯದಲ್ಲಿ ದೇಶಕ್ಕೇ ಒಂದು ಯಶಸ್ವಿ ಮಾದರಿಯನ್ನು ರೂಪಿಸಿದೆ. ಈ ಹಿಂದೆ ಕೆಲವು ಸಮುದಾಯಗಳಲ್ಲಿ ತಮಗೆ ಅನ್ಯಾಯವಾಗಬಹುದು ಎಂಬ ಆತಂಕವಿತ್ತು. ಆದರೆ, ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರವು ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಒಳಮೀಸಲಾತಿ ಜಾರಿ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದು, ಎಲ್ಲ ವರ್ಗದವರಿಗೂ ಸಮಾನ ಅವಕಾಶ ಸಿಗುವಂತೆ ನೋಡಿಕೊಳ್ಳಲಾಗಿದೆ ಎಂದರು.

ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜನಪರ ಯೋಜನೆಗಳನ್ನು ತಲುಪಿಸಲು ಸರ್ಕಾರ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ಮೂಲ ಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಗ್ಯಾರಂಟಿ ಸಮಿತಿಯ ಅಶೋಕ ಮಂದಾಲಿ, ಉಮರ್ ಫಾರೂಕ್ ಹುಬ್ಬಳ್ಳಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾಲನೆ
2024ರ ಕನಕಗಿರಿ ಉತ್ಸವದ ಸ್ಮರಣಿಕೆ, ಗಂಧದ ಹಾರಗಳಿಗೆ ಧೂಳು