ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನ್‌ ಬಂದ್, ರೋಗಿಗಳ ಪರದಾಟ

KannadaprabhaNewsNetwork |  
Published : Feb 21, 2026, 02:15 AM IST
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನಿಂಗ್ ಎದುರು ಕಾಯುತ್ತ ಕುಳಿತಿರುವ ರೋಗಿಗಳು. | Kannada Prabha

ಸಾರಾಂಶ

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನಿಂಗ್ ಎದುರು ಕಾಯುತ್ತ ಕುಳಿತಿರುವ ರೋಗಿಗಳು.

ಹಾವೇರಿ: ರಾಜ್ಯ ಸರ್ಕಾರ ಸಿಟಿ ಸ್ಕ್ಯಾನ್‌ ನಿರ್ವಹಿಸುವ ಸಂಸ್ಥೆಗೆ ಹಣ ಬಿಡುಗಡೆ ಮಾಡದ ಕಾರಣ ಇಲ್ಲಿಯ ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನ್‌ ಬಂದ್ ಆಗಿದ್ದು ಬಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಕೃಷ್ಣಾ ಡಯಾಗ್ನೋಸ್ಟಿಕ್‌ ಲಿಮಿಟೆಡ್ ಸಂಸ್ಥೆಯಯಡಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣಾ ಸಿಟಿ ಸ್ಕ್ಯಾನ್‌ ಸೆಂಟರ್‌ ಮೂರು ದಿನಗಳಿಂದ ತಾತ್ಕಾಲಿಕ ಬಂದ್ ಮಾಡಲಾಗಿದ್ದು, ನಿತ್ಯ ಆಸ್ಪತ್ರೆಗೆ ಬರುವ ಬಡ ರೋಗಿಗಳು ಹೊರಗಡೆ 2200 ರು. ಕೊಟ್ಟ ಸ್ಕ್ಯಾನ್ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಿಗಾಗಿ, ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ಆರಂಭಿಸಿದ್ದ ಈ ಸೇವೆ ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದು, ನಿತ್ಯ ಆಸ್ಪತ್ರೆಗೆ ಬರುವ ನೂರಾರು ರೋಗಿಗಳು ಸ್ಕ್ಯಾನಿಂಗ್‌ ಮಾಡಿಸಲು ಸಾಧ್ಯವಾಗದೇ ಅಸಹಾಯಕರಾಗಿ ನಿಲ್ಲುವಂತಾಗಿದೆ. ಅನಾರೋಗ್ಯ ಸಮಸ್ಯೆಯಿಂದ ಸ್ಕ್ಯಾನ್‌ ಮಾಡಿಸಲು ಬಂದಿದ್ದೆವು. ಆದರೆ, ಇಲ್ಲಿನ ಸಿಬ್ಬಂದಿ ಸರ್ಕಾರ ಹಣ ಕೊಡ್ತಿಲ್ಲ, ನೀವೇ ಹಣ ಕೊಟ್ಟು ಸ್ಕ್ಯಾನ್‌ ಮಾಡಿಸಿ ಎಂದು ಹೇಳುತ್ತಿದ್ದಾರೆ. ಬಡವರು ಎಲ್ಲಿಂದ ಹಣ ತರಬೇಕು, ಅಷ್ಟಿದ್ದರೆ ನಾವೇಕೆ ಜಿಲ್ಲಾಸ್ಪತ್ರೆಗೆ ಬರಬೇಕು ಎಂದು ಅಸಮಾಧಾನ ಹೊರಹಾಕಿದರು. ಆಸ್ಪತ್ರೆಗೆ ಬಂದ ರೋಗಿಗಳು ಸ್ಕ್ಯಾನ್‌ ಸೆಂಟರ್ ಬಳಿ ದಿನಗಟ್ಟಲೆ ಕಾದು ಕುಳಿತುಕೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸಿಟಿ ಸ್ಕ್ಯಾನಿಂಗ್‌ ಗುತ್ತಿಗೆ ಪಡೆದ ಸಂಸ್ಥೆಗೆ ಆರೋಗ್ಯ ಇಲಾಖೆಯು ₹ 143 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಿಟಿ ಸ್ಕ್ಯಾನ್‌ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ನಮ್ಮ ಕೇಂದ್ರ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಸ್ಪತ್ರೆಯ ಸಿಟಿ ಸ್ಕ್ಯಾನಿಂಗ್‌ ಸಿಬ್ಬಂದಿಯೊಬ್ಬರು ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನಿಂಗ್ ಸೆಂಟರ್ ಬಂದ್ ಆಗಿದ್ದರಿಂದ ದೂರದ ಹಳ್ಳಿಗಳಿಂದ ಬರುವ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಹೆಚ್ಚಾಗಿ ಬಡ ರೋಗಿಗಳೇ ಜಿಲ್ಲಾಸ್ಪತ್ರೆಗೆ ಬರುವುದಿಂದ ಇಲ್ಲಿನ ಸ್ಕ್ಯಾನಿಂಗ್ ಸೆಂಟರ್ ಬಂದ್ ಆಗಿರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಬಡರೋಗಿಗಳು ಆಗಿದ್ದರಿಂದ ಹೊರಗಡೆ ಸಾವಿರಾರು ರು. ಕೊಟ್ಟು ಸ್ಕ್ಯಾನಿಂಗ್‌ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಿ ಬಡರೋಗಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ರೋಗಿಯ ಸಂಬಂಧಿಕರಾದ ಸತೀಶ ಕೊರವರ ಹೇಳಿದರು.

ಹಾವೇರಿ ಸೇರಿದಂತೆ ರಾಜ್ಯದ 12 ಜಿಲ್ಲಾಸ್ಪತ್ರೆಗಳಲ್ಲಿ ಕೃಷ್ಣಾ ಸಂಸ್ಥೆಯವರು ಸ್ಕ್ಯಾನಿಂಗ್ ಬಂದ್ ಮಾಡಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಹಾವೇರಿ ಮೆಡಿಕಲ್ ಕಾಲೇಜ್‌ನಿಂದಲೇ ಪ್ರತ್ಯೇಕ ಎಂಆರ್‌ಐ, ಸಿಟಿ ಸ್ಕ್ಯಾನ್‌ ಸೆಂಟರ್ ಆರಂಭಿಸುವ ಕುರಿತು ಪ್ರಯತ್ನ ನಡೆದಿದೆ ಎಂದು ಹಿಮ್ಸ್‌ ಡೀನ್ ಪ್ರದೀಪಕುಮಾರ ಎಂ.ವಿ. ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಾಫ್‌-ಪಿಂಜಾರ ಸಮುದಾಯ ಒಪ್ಪಿಕೊಳ್ಳದ ಮುಸ್ಲಿಂ ಸಮುದಾಯ
ಜೈಲಲ್ಲಿ ಜಿಹಾದಿ: ಶಂಕಿತನ ಸುಳಿವಿಗೆ ₹5 ಲಕ್ಷ