ಅನೇಕ ಸಾಧು- ಸಂತರು ತಾವು ಕಹಿ ಉಂಡು ಜಗತ್ತಿಗೆ ಸಿಹಿ ನೀಡಿದ್ದಾರೆ. ವಚನಕಾಲದ ಶ್ರೇಷ್ಠ ದಾರ್ಶನಿಕ ವಚನಕಾರರಲ್ಲಿ ಸರ್ವಜ್ಞನು ಒಬ್ಬರಾಗಿದ್ದರು.
ಬಳ್ಳಾರಿ: ತ್ರಿಪದಿಗಳ ಬ್ರಹ್ಮ ಎಂದೇ ಹೆಸರಾದ ಸರ್ವಜ್ಞ ತನ್ನ ಮೂರು ಸಾಲಿನ ವಚನಗಳಲ್ಲಿನ ತತ್ವಗಳ ಮೂಲಕ ಸಮಾಜಕ್ಕೆ ದಾರಿದೀಪವಾದವರು ಎಂದು ಬಳ್ಳಾರಿ ಆಕಾಶವಾಣಿಯ ಉದ್ಘೋಷಕ ಹಾಗೂ ಆಧ್ಯಾತ್ಮಿಕ ಚಿಂತಕ ಅಮಾತಿ ಬಸವರಾಜ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಾಂಸ್ಕೃತಿಕ ಸಮುಚ್ಛಯ ಹೊಂಗಿರಣ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಾಧು- ಸಂತರು ತಾವು ಕಹಿ ಉಂಡು ಜಗತ್ತಿಗೆ ಸಿಹಿ ನೀಡಿದ್ದಾರೆ. ವಚನಕಾಲದ ಶ್ರೇಷ್ಠ ದಾರ್ಶನಿಕ ವಚನಕಾರರಲ್ಲಿ ಸರ್ವಜ್ಞನು ಒಬ್ಬರಾಗಿದ್ದರು. ಗಾದೆಮಾತಿನಂತೆ ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞರು ರಚಿಸದ ವಚನಗಳಿಲ್ಲ. 21ನೇ ಶತಮಾನದಲ್ಲಿಯೂ ಸರ್ವಜ್ಞನ ವಚನಗಳು ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಸರ್ವಜ್ಞನ ಕಾಲ 16ನೇ ಶತಮಾನದ ಆದಿಭಾಗ. ಇಂದಿನ ಹಾವೇರಿ ಜಿಲ್ಲೆಯ ಹಿರೇಕೇರೂರ ತಾಲ್ಲೂಕಿನ (ಅಂಬಲೂರು) ಮಾಸನೂರು ಹುಟ್ಟೂರು ಗ್ರಾಮ. ತಂದೆ ಕುಂಬಾರಮಲ್ಲಪ್ಪ, ತಾಯಿ ಮಳಲಾದೇವಿ ಮಗನಾಗಿದ್ದರು ಎಂದು ತಿಳಿಸಿದರು.
ಸರ್ವಜ್ಞರ ತ್ರಿಪದಿ ವಚನಗಳು ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಿದೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವುಗಳಾಗಿವೆ. ಸುಮಾರು 1,000 ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ತಮ್ಮ ವಚನಗಳ ಮೂಲಕ ಜನರು ಒಗ್ಗಟ್ಟು, ಒಮ್ಮತ, ಐಕ್ಯತೆ ಭಾವನೆಯಿಂದ ಕೂಡಿ ಬಾಳ್ವೆ ನಡೆಸಬೇಕು ಎಂದು ತಿಳಿಸಿಕೊಟ್ಟವರು ಎಂದರು.
ಜಾತಿ ವ್ಯವಸ್ಥೆ, ಅಂಧಶ್ರದ್ಧೆ, ದೌರ್ಜನ್ಯ, ಕಂದಾಚಾರ, ದಬ್ಬಾಳಿಕೆ , ಶೋಷಣೆ, ಮೌಢ್ಯತೆಗಳೆಂಬ ಅನಿಷ್ಟ ಪದ್ಧತಿಯನ್ನು ಧಿಕ್ಕರಿಸಿ ಸಮ ಸಮಾಜದ ಪರಿಕಲ್ಪನೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ತಮ್ಮ ತ್ರಿಪದಿ ವಚನಗಳ ಮೂಲಕ ಸರ್ವಜ್ಞರು ಮಾಡಿದ್ದರು. ಅವರ ವಚನಗಳನ್ನು ಇಂದಿನ ಪೀಳಿಗೆಗೆ ತಲುಪಿಸಲು ರಾಜ್ಯ ಸರ್ಕಾರ ಜಯಂತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಣ್ಯರು ಸಂತಕವಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಬಳ್ಳಾರಿಯ ಎಂ.ನಾಗಭೂಷಣ ಬಾಪುರೆ ತಂಡ ಭಕ್ತಿ ಸಂಗೀತ ಗಾಯನ ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕರ್ನಾಟಕ ಜನಸೈನ್ಯ ಸಂಘದ ರಾಜ್ಯಾಧ್ಯಕ್ಷ ಎರ‍್ರಿಸ್ವಾಮಿ, ಸರ್ವಜ್ಞ ಮಹಿಳಾ ಸಂಘದ ಉಪಾಧ್ಯಕ್ಷೆ ಗೌರಮ್ಮ, ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಕೆ.ಗುರುರಾಜ, ಸಮಾಜದ ಮುಖಂಡರಾದ ಕೆ.ನರಸಯ್ಯ, ಕೆ.ರಂಗಸ್ವಾಮಿ, ಸತ್ಯನಾರಾಯಣ ಸ್ವಾಮಿ, ಶ್ರೀನಿವಾಸುಲು, ಗೋವಿಂದಸ್ವಾಮಿ ಸೇರಿದಂತೆ ಸಮಾಜದ ಹಿರಿಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.