ದಾಂಡೇಲಿಯಲ್ಲಿ ಡಿ. 13ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಬಿ.ಎನ್. ವಾಸರೆ

KannadaprabhaNewsNetwork |  
Published : Dec 04, 2025, 02:45 AM IST
ಜಿಲ್ಲಾಧಿಕಾರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 13, 14, ಮತ್ತು 15ರಂದು ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಮೂರು ದಿನಗಳ ಕಾಲ ವಿಜೃಂಭಣೆಯ ಕಾರ್ಯಕ್ರಮ । ಬೆಳ್ಳಿ ಹಬ್ಬದ ಸಂಭ್ರಮ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 25ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 13, 14, ಮತ್ತು 15ರಂದು ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದರು. ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ ಯಾವುದೇ ಜಿಲ್ಲೆಯಲ್ಲಿ 25 ಸಮ್ಮೇಳನಗಳು ನಡೆದಿಲ್ಲ. ಹೀಗಾಗಿ, ಅತಿ ಹೆಚ್ಚು ಸಮ್ಮೇಳನಗಳನ್ನು ಮಾಡಿದ ಹಿರಿಮೆ ಉತ್ತರ ಕನ್ನಡ ಜಿಲ್ಲೆಗೆ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.ಈ 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ್ ಆಯ್ಕೆಯಾಗಿದ್ದಾರೆ. ಸಮ್ಮೇಳನದ ಪೂರ್ವಭಾವಿ ಸಿದ್ಧತೆಗಳು ಈಗಾಗಲೇ ಭಾಗಶಃ ಮುಗಿದಿದ್ದು, ಆ ಭಾಗದ ಶಾಸಕರೂ ಮತ್ತು ಸ್ವಾಗತ ಸಮಿತಿಯ ಗೌರವಾಧ್ಯಕ್ಷರೂ ಆದ ಆರ್.ವಿ. ದೇಶಪಾಂಡೆ ಸಿದ್ಧತೆಗಳಿಗೆ ಚಾಲನೆ ನೀಡಿದ್ದಾರೆ. ಸಮ್ಮೇಳನವನ್ನು ನಾಡಿನ ಹೆಸರಾಂತ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ ಎಂದರು.25ನೇ ವರ್ಷದ ಸಂಭ್ರಮದ ಕಾರಣದಿಂದ ಸಮ್ಮೇಳನವನ್ನು ಈ ಬಾರಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಬೆಳ್ಳಿ ಹಬ್ಬದ ನೆನಪಿಗಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ 25ನೇ ವರ್ಷದ ನೆನಪಿಗೆ 25 ಪುಸ್ತಕಗಳ ಬಿಡುಗಡೆ ಮಾಡಲಾಗುತ್ತಿದೆ. ಹಾಗೆಯೇ, ಈ ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದವರನ್ನು ಆಹ್ವಾನಿಸಿ ಗೌರವಿಸಲಾಗುತ್ತದೆ. ಎರಡನೇ ದಿನ ಸಮ್ಮೇಳನದ ಭಾಗವಾಗಿ 25 ಜನ ಸಾಧಕರಿಗೆ ಕಸಾಪ ಪುರಸ್ಕಾರ ಮತ್ತು ಗೌರವವನ್ನು ನೀಡಲಾಗುತ್ತಿದೆ. ಮೂರನೇ ದಿನದ ಕಾರ್ಯಕ್ರಮದಲ್ಲಿ ಜಿಲ್ಲೆಯ 25 ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ರಜತ ಗೌರವ ನೀಡಲಾಗುತ್ತದೆ ಎಂದರು.ಸಮ್ಮೇಳನದಲ್ಲಿ ಸನ್ಮಾನ, ಸಂವಾದ ಹೊರತುಪಡಿಸಿ ಒಟ್ಟು ಹತ್ತು ವಿಶೇಷ ಗೋಷ್ಠಿ ನಡೆಯಲಿವೆ. ಇದರಲ್ಲಿ ಉತ್ತರ ಕನ್ನಡ ಸಾಹಿತ್ಯ: ಅಸ್ಮಿತೆ ಮತ್ತು ಆಶಯ, ಅಳಿದು ಉಳಿದವರು ಹಿರಿಯ ಸಾಹಿತಿಗಳ ಸ್ಮರಣೆ ಹಾಗೂ ದಾಂಡೇಲಿಗೆ ಸಂಬಂಧಿಸಿದ ಕಾಳಿ ಕಣಿವೆ ಸುತ್ತ ಗೋಷ್ಠಿಗಳು ಪ್ರಮುಖವಾಗಿವೆ. ಸಂಘಟಕರು ಈ ಬಾರಿ ಹೊಸತನವನ್ನು ಅಳವಡಿಸಲು ನಿರ್ಧರಿಸಿದ್ದು, ಜಿಲ್ಲೆಗೆ ಒಳಪಟ್ಟ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ನೈತಿಕತೆಯ ರಾಜನೀತಿ ಮತ್ತು ಉತ್ತರ ಕನ್ನಡ ಎನ್ನುವ ಶೀರ್ಷಿಕೆಯಡಿಯಲ್ಲಿ ವಿಶೇಷ ಗೋಷ್ಠಿ ಹಾಕಿಕೊಳ್ಳಲಾಗಿದೆ.ಮೂರನೇ ದಿನ, ನನ್ನ ಉತ್ತರ ಕನ್ನಡ ಕಾಲು ಶತಮಾನ ನಡಿಗೆ ಎಂಬ ವಿಶೇಷ ಗೋಷ್ಠಿ ನಡೆಯಲಿದೆ. ಇದರ ಜೊತೆಗೆ, ಕನ್ನಡ ಪ್ರಾಧಿಕಾರದ ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಈ ನಾಲ್ವರು ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುವ ರಾಜ್ಯಮಟ್ಟದ ವಿಚಾರ ಸಂಕೀರ್ಣ ಆಯೋಜಿಸಲಾಗಿದೆ ಎಂದರು.ಮೂರು ದಿನಗಳ ಕಾಲ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ಬಿಗ್ ಬಾಸ್ ಖ್ಯಾತಿ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕ ರವಿ ಮೂರೂರು ಅವರಿಂದ ಭಾವ ಸಂಗಮ ಮತ್ತು ದರ್ಶನ್ ಶೆಟ್ಟಿ, ವರ್ಷಿಣಿ ಶೆಟ್ಟಿ ಅವರಿಂದ ಗಾನ ಮಧುರ ಕಾರ್ಯಕ್ರಮವಿರುತ್ತದೆ. ಮೂರನೇ ದಿನ, ಜಿಲ್ಲೆಯ ಗಣಮೆಟ್ಟಿನ ಕಲೆಯಾದ ಯಕ್ಷಗಾನ ಪ್ರದರ್ಶನ ಇರಲಿದೆ. ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರೂ ಭಾಗವಹಿಸಬೇಕು ಎಂದು ವಾಸರೆ ಅವರು ಮನವಿ ಮಾಡಿದರು.ಈ ಸಂದರ್ಭ ಜಿಲ್ಲಾ ಕಸಾಪ. ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಕಾರವಾರ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಕಾರ್ಯದರ್ಶಿ ಬಾಬು ಶೇಖ್, ದಾಂಡೇಲಿ ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪ್ರಮುಖರಾದ ಜಿ.ಡಿ. ಮನೋಜ್, ಎನ್.ಜಿ. ನಾಯ್ಕ, ಎಮ್.ಜಿ. ಖತೀಬ, ಖೈರುನ್ನಿಸಾ ಶೇಖ್ ಸೇರಿ ಹಲವು ಗಣ್ಯರಿದ್ದರು.

ಅನುದಾನ ನಿರೀಕ್ಷಿಸದೇ ಜವಾಬ್ದಾರಿಯಿಂದ ಆಯೋಜನೆ

ಅನುದಾನದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಅನುದಾನದ ನಿರೀಕ್ಷೆ ಇಲ್ಲದೇ ಸಮ್ಮೇಳನ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಸಮ್ಮೇಳನಕ್ಕೆ ₹5 ಲಕ್ಷ ಮತ್ತು ತಾಲೂಕು ಸಮ್ಮೇಳನಕ್ಕೆ ₹1 ಲಕ್ಷ ಬರಬೇಕು. ಆದರೆ, ಮಾರ್ಚ್‌ನಿಂದ ಇಲ್ಲಿಯವರೆಗೆ ಜಿಲ್ಲಾ ಸಮಿತಿಗೆ ನಿರ್ವಹಣಾ ಅನುದಾನ ಸಹ ಬಂದಿಲ್ಲ. ಪರಿಷತ್ತಿನ ಜವಾಬ್ದಾರಿ ಹೊತ್ತ ಮೇಲೆ ಕಾರ್ಯಕ್ರಮ ಮಾಡಬೇಕು ಎಂಬ ಕಾರಣಕ್ಕಾಗಿ ಸಮ್ಮೇಳನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ

ದಾಂಡೇಲಿಯಲ್ಲಿ ನಡೆಯಲಿರುವ ಬೆಳ್ಳಿಹಬ್ಬದ ಸಂಭ್ರಮದ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಂಗಳವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭ ಶುಭ ಹಾರೈಸಿ ಮಾತನಾಡಿದ ಅವರು, 25ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ದಾಂಡೇಲಿ ನಡೆಯುತ್ತಿರುವುದು ನಿಜಕ್ಕೂ ಕೂಡ ಸಂತಸದ ಸಂಗತಿ. ಈ ಸಮ್ಮೇಳನವನ್ನ ಯಶಸ್ವಿಗೊಳಿಸುವುದು ಎಲ್ಲರ ಜವಾಬ್ದಾರಿ. ಈ ನುಡಿ ಹಬ್ಬದಲ್ಲಿ ಜಿಲ್ಲೆಯ ಎಲ್ಲ ಜನತೆ ಭಾಗವಹಿಸುವಂತಾಗಬೇಕು. ಆ ಮೂಲಕ ಕನ್ನಡ ಕಟ್ಟುವ ಹಾಗೂ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ, ಸಾಂಸ್ಕೃತಿಕ ಮನಸ್ಥಿತಿಯನ್ನು ರೂಪಿಸುವ ಕೆಲಸವಾಗಬೇಕಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾಡಳಿತದ ವಿರುದ್ಧ ಅಂಗವಿಕಲರ ಆಕ್ರೋಶ
ಮಾದಕ ದ್ರವ್ಯ ಸೇವನೆ ಬದುಕಿನ ವಿನಾಶಕ್ಕೆ ದಾರಿ; ಮೋಹನ್ ರಾಜಣ್ಣ