ಗದಗ: ಚಿರತೆ ಬಗ್ಗೆ ಅಂಜಿಕೆ ಬೇಡ. ಸಾರ್ವಜನಿಕರು ಭಯಮುಕ್ತರಾಗಿ ಸಂಚರಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ನ. 25 ಹಾಗೂ 26ರಂದು ಪಂಚಾಕ್ಷರಿ ನಗರದ ಬುರಬುರೆ ಲೇಔಟ್‌ನ 6ನೇ ಕ್ರಾಸ್ ಹಾಗೂ ಎಪಿಎಂಸಿ ಬರದೂರ ಟ್ರೇಡಿಂಗ್ ಕಂಪನಿ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಓಡಾಟ ಕಂಡುಬಂದಿರುವುದು ದೃಢವಾಗಿದೆ. ಈ ವಿಷಯ ತಿಳಿದ ಅರಣ್ಯ ಇಲಾಖೆಯು ಅದೇ ದಿನದಿಂದ ಸ್ಥಳ ಹಾಗೂ ನಗರದ ವಿವಿಧ ಕಡೆ ಹುಡುಕಾಡಿದರೂ ಕುರುಹು ಪತ್ತೆಯಾಗಿಲ್ಲ.
ಅಲ್ಲದೇ ರಾತ್ರಿ ಗಸ್ತು ಕೂಡಾ ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಚಿರತೆಯ ಯಾವುದೇ ಚಲನವಲನ, ಹೆಜ್ಜೆ ಗುರುತಿನ ಕುರುಹು ಸಹಿತ ಪತ್ತೆ ಆಗಿಲ್ಲ. ಚಿರತೆಯು ತನ್ನ ಜಾಡು ಹಿಡಿದು ಅರಣ್ಯದ ಕಡೆಗೆ ಹೋಗಿರಬಹುದೆಂದು ಅರಣ್ಯ ಇಲಾಖೆಯು ನಂಬಿದೆ. ಆದ್ದರಿಂದ ಸಾರ್ವಜನಿಕರು ನಿರ್ಭೀತಿಯಿಂದ ತಮ್ಮ ಕಾರ್ಯಗಳನ್ನು ಕೈಗೊಳ್ಳಬಹುದು.ಚಿರತೆಯನ್ನು ಬೆಟಗೇರಿ ಭಾಗದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಮಂಗಳವಾರ ಬೆಳಗ್ಗೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆದರೆ, ಚಿರತೆ ಪತ್ತೆಯಾಗಿಲ್ಲ. ಯಾವುದೇ ವನ್ಯಜೀವಿ ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ...ಚಿರತೆಯನ್ನು ಸೆರೆ ಹಿಡಿಯಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಅಪರಾಧ. ಭಾರತೀಯ ನ್ಯಾಯ ಸಂಹಿತೆ 2023 ಸೆಕ್ಷನ್ 240ರ ಪ್ರಕಾರ ಸುಳ್ಳು ಸುದ್ದಿ ಹರಡಿಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು. ಕಾಡುಪ್ರಾಣಿಗಳು ಕಂಡುಬಂದಲ್ಲಿ ಸಹಾಯವಾಣಿ 8151020753, 6362718315 ಸಂಪರ್ಕಿಸಿ.