ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಇಂದು

KannadaprabhaNewsNetwork |  
Published : Dec 04, 2025, 02:45 AM IST
ನಿಗದಿಪಡಿಸಲಾಯಿತು. | Kannada Prabha

ಸಾರಾಂಶ

ಈ ಬಾರಿ ಡಿ. 4 ಹುಣ್ಣಿಮೆಯ ದಿನ ಕೊಡಗಿನ ಹುತ್ತರಿ ಹಬ್ಬ ಸಂಭ್ರಮ.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಹುತ್ತರಿ ಹಬ್ಬದ ಸಂಭ್ರಮಕ್ಕೆ ನಾಡು ಸಜ್ಜಾಗಿದೆ. ಈ ಬಾರಿ ಡಿ. 4 ರಂದು (ಇಂದು ಗುರುವಾರ ) ಹುಣ್ಣಿಮೆಯ ದಿನ ಕೊಡಗಿನ ಹುತ್ತರಿ (ಪುತ್ತರಿ) ಹಬ್ಬದ ಸಂಭ್ರಮ.ಕೊಡಗಿನಾದ್ಯಂತ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಹಬ್ಬ ಹುತ್ತರಿ ಹಬ್ಬ. ಕೊಡಗಿನಲ್ಲಿ ಬತ್ತದ ಬೆಳೆ ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತಿದ್ದರೆ ನಡುಕ ಹುಟ್ಟಿಸುವ ಚಳಿಯ ನಡುವೆ ಕೊಡಗಿನ ಹುತ್ತರಿ ಹಬ್ಬದ ಆಚರಣೆ, ಗಡಚಿಕ್ಕುವ ಪಟಾಕಿಗಳ ಸದ್ದು, ಮನೆಯಲ್ಲಿ ವಿಶೇಷ ತಿನಿಸುಗಳು, ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಮನೆ ಮಂದಿಯೆಲ್ಲಾ ಸಂಭ್ರಮದಿಂದ ಪಾಲ್ಗೊಂಡು ಆಚರಿಸುವ ಹುತ್ತರಿ ಹಬ್ಬ ಕೊಡಗಿನ ವಿಶೇಷ. ಕೊಡವ ನುಡಿಯ ಪುತ್ತರಿ(ಪುದಿಯ ಅರಿ) ಅಂದರೆ ಹೊಸ ಅಕ್ಕಿ. ಇದು ಕನ್ನಡದಲ್ಲಿ ಹುತ್ತರಿ ಎಂದಾಗಿದೆ. ವ್ಯವಸಾಯವನ್ನೇ ಮಾಡಿ ಬದುಕುವ ಬಹುತೇಕ ರೈತಾಪಿ ವರ್ಗ ಪೈರುಗಳು ಬೆಳೆದಾಗ ಶಾಸ್ತ್ರೋಕವಾಗಿ ಕುಯ್ದು ತಂದು ಮನೆಯನ್ನು ತುಂಬಿಸಿಕೊಳ್ಳುವುದೇ ಈ ಹುತ್ತರಿ ಹಬ್ಬದ ವೈಶಿಷ್ಟ್ಯ. ಮೊದಲು ಕುಟುಂಬದ ಹಿರಿಯ ಮನೆಮಂದಿಯೊಂದಿಗೆ ನೆರೆ ಕಟ್ಟುವ ಕಾರ್ಯದಲ್ಲಿ ತೊಡಗುತ್ತಾರೆ. ಆ ಬಳಿಕ ನಿಗದಿ ಪಡಿಸಿದ ಸಮಯಕ್ಕೆ ಗದ್ದೆಗೆ ತೆರಳಿ ಬತ್ತದ ಕದಿರುಗಳನ್ನು ಪೂಜಿಸಿ ಅದಕ್ಕೆ ಹಣ್ಣು ಕಾಯಿ, ಹಾಲು ಜೇನುಗಳನ್ನು ಸಮರ್ಪಿಸುತ್ತಾನೆ. ಆ ಬಳಿಕ "ಪೊಲಿ ಪೊಲಿಯೇ ದೇವಾ " ಎಂದು ಕೂಗುತ್ತಾ ಶಾಸ್ತ್ರೋಕ್ತವಾಗಿ ಬತ್ತದ ತೆನೆಗಳನ್ನು ಕತ್ತರಿಸಿ ತಂದು ದೇವಾಲಯವನ್ನು, ಮನೆಯನ್ನು ತು೦ಬಿಕೊಳ್ಳುತ್ತಾರೆ. ಮತ್ತೊಂದೆಡೆ ಮಕ್ಕಳು, ಯುವಕರು ಪಟಾಕಿ ಸಿಡಿಸುವುದರಲ್ಲಿ ತಲ್ಲೀನರಾಗುತ್ತಾರೆ. ಒಟ್ಟಿನಲ್ಲಿ ಎಲ್ಲೆಲ್ಲೂ ಪಟಾಕಿ, ಬಾಣಬಿರುಸುಗಳ ಸಂಭ್ರಮ ಹುತ್ತರಿಯ ರಾತ್ರಿ ಸಮಯದ ಪರಿವೆಯೇ ಇಲ್ಲದೆ ವಿಶೇಷ ಊಟೋಪಚಾರಗಳು ನಡೆಯುತ್ತವೆ. ಹುತ್ತರಿಯಂದು ಅಡುಗೆ ವೈವಿಧ್ಯಮಯವಾಗಿದ್ದು. ಬಾಳೇಹಣ್ಣಿನಿಂದ ತಯಾರಿಸಿದ ''''''''ತಂಬಿಟ್ಟು'''''''' ಸವಿಯುತ್ತಾರೆ.

ಮೊದಲೆಲ್ಲ ಹುತ್ತರಿ ಹಬ್ಬವೆಂದರೆ ವಾರಗಟ್ಟಲೆ ಸಂಭ್ರಮ, ಹಬ್ಬ ಒಂದು ದಿನವಾದರೂ ಅದಕ್ಕೆ ಸಂಬಂಧಿಸಿ ಆಚರಣೆಗಳೂ ವಾರ ಗಟ್ಟಲೆ ಜರಗುತ್ತಿದ್ದವು. ಹುತ್ತರಿಯ ನಂತರ ದಿನಗಳಲ್ಲಿ ಮಂದ್ ಎಂಬ ಊರ ಕ್ರೀಡಾಂಗಣದಲ್ಲಿ ಊರವರೆಲ್ಲರೂ ಸೇರಿ ಹಾಡುತ್ತಾ, ನೃತ್ಯ, ಕುಣಿತ ಮತ್ತು ಶೌರ್ಯ ಪ್ರದರ್ಶನ ಹೋರಾಟಗಳಲ್ಲಿ ನಿರತರಾಗಿರುತ್ತಿದ್ದರು. ಎರಡೂ ಕೈಗಳಲ್ಲಿ ಬೆತ್ತದ ಬಾರು ಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಕ್ರಮಬದ್ಧವಾಗಿ ಬೀಸುತ್ತಾ ಕುಣಿಯುವ ಕೋಲಾಟ ''''''''ಹುತ್ತರಿ ಕೋಲಾಟ''''''''ವೆಂದೇ ಪ್ರಸಿದ್ಧಿ ಪಡೆದಿದೆ. ನಾಪೋಕ್ಲುವಿನ ಬಿದ್ದಾಟಂಡ ವಾಡೆಯಲ್ಲಿ ಜನಪ್ರಿಯ ಹುತ್ತರಿ ಕೋಲಾಟ ನಡೆಯುತ್ತದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಹುತ್ತರಿ ಕೋಲಾಟ ನಡೆಯುತ್ತದೆ. ಕ್ರೀಡೆ, ಕುಣಿತಗಳು ವರ್ಷದಿಂದ ವರ್ಷಕ್ಕೆ ಗ್ರಾಮಾಂತರ ಪ್ರದೇಶಗಳಿಂದ ಮರೆಯಾಗತೊಡಗಿದೆ. ಕೊಡಗಿನಲ್ಲಿ ಮಾತ್ರವೇ ಕಾಣಬಹುದಾದ ಹುತ್ತರಿ ಹಬ್ಬವು ಅಲ್ಲಿನ ಸಂಪ್ರದಾಯ ಕೃಷಿ ಚಟುವಟಿಕೆಯ ಮೇಲಿನ ಆಸಕ್ತಿ ಇತ್ಯಾದಿಗಳ ಪ್ರತಿರೂಪವಾಗಿದೆ. ಪೊಯಲೆ ಪೊಯಿಲೇ ಎಂಬ ಕರೆಯ ಮೂಲಕ ನಾಡಿನೆಲ್ಲೆಡೆ ಹುತ್ತರಿ ಸಂಭ್ರಮ ಮುಗಿಲು ಮುಟ್ಟುತ್ತದೆ.

ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದ ಆವರಣದಲ್ಲಿ ನಾಡಿನ ಹದಿಮೂರು ತಕ್ಕಮುಖ್ಯಸ್ಥರು, ದೇಗುಲದ ತಕ್ಕಮುಖ್ಯಸ್ಥರು ಭಕ್ತಜನ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಅಮ್ಮಂಗೇರಿ ಜ್ಯೋತಿಷ್ಯರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಣೆಯ ಸಮಯವನ್ನು ನಿಗದಿಪಡಿಸಿದ್ದಾರೆ.ಕೊಡಗಿನ ಸುಗ್ಗಿಯ ಹಬ್ಬ ‘ಹುತ್ತರಿ’ಯನ್ನು ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ಡಿ. 4 ರಂದು ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನ ಹುತ್ತರಿ ಹಬ್ಬ ಆಚರಣೆ. ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು. ಅನ್ನಪ್ರಸಾದಕ್ಕೆ 10.10 ಗಂಟೆಗೆ ಮುಹೂರ್ತ ನಿಗದಿಪಡಿಸಲಾಯಿತು.ಸಾರ್ವಜನಿಕರಿಗೆ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು, ಭೋಜನಕ್ಕೆ ರಾತ್ರಿ 10.40 ಗಂಟೆಗೆ ಮುಹೂರ್ತ ನಿಗದಿಪಡಿಸಲಾಯಿತು.ಇದಕ್ಕೂ ಮುನ್ನ ಡಿಸೆಂಬರ್ 4 ರಂದು ಗುರುವಾರ ಹಗಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತ ಚಂದನ ಸಾಗಿಸುತ್ತಿದ್ದಅಪ್ರಾಪ್ತ ಸೇರಿ ನಾಲ್ವರ ಸೆರೆ
ಹಾಸಿಗೆ ಹಿಡಿದ ಪತ್ನಿಯ ಕೊಂದುಆತ್ಮಹತ್ಯೆ ಮಾಡಿಕೊಂಡ ಪತಿ