ಜಿಲ್ಲಾ ಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿತು. ತೃತೀಯ ಸ್ಥಾನವನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ದಿ. ಮೇಕೆರಿರ ಕಾರ್ಯಪ್ಪ ಸ್ಮರಣಾರ್ಥ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೂಡಿಗೆಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡಕ್ಕೆ ದ್ವಿತೀಯ ಸ್ಥಾನ ಲಭಿಸಿತು. ತೃತೀಯ ಸ್ಥಾನವನ್ನು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ತಂಡ ಪಡೆದುಕೊಂಡಿತು.
ಸಮಾಧಾನಕರ ಬಹುಮಾನಗಳನ್ನು ಮೂರ್ನಾಡು ಕೋಡಂಬೂರಿನ ಜ್ಞಾನಜ್ಯೋತಿ ಎಜುಕೇಶನ್ ಸೊಸೈಟಿ ಹಾಗೂ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ಶಾಲಾ ತಂಡಗಳು ಪಡೆದುಕೊಂಡವು. ಸ್ಪರ್ಧೆಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು.
ಶಾಲಾ ಸಭಾಂಗಣದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಕೂಡಿಗೆಯ ಸೈನಿಕ್ ಶಾಲೆಯ ವಿದ್ಯಾರ್ಥಿಗಳಾದ ಶಿವಕಾಂತ್ ಯಾದವ್, ಓಂಕಾರ್ ಎಸ್. ಪಮ್ಮರ್ , ಅತುಲ್ ಕುಮಾರ್ ಹಾಗೂ ಋಷಿಕೇಶ್ ರೂಗಿ ವಿದ್ಯಾರ್ಥಿಗಳ ತಂಡ 142 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿತು. ವಿಜೇತ ತಂಡಕ್ಕೆ 5000 ರು.ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಹರ್ಷ್ ಕಾರಿಯಪ್ಪ, ಸಹನ ಪಿ.ಎಸ್.,ಮಿಶ್ಬ ವಿ.ಯು ಹಾಗೂ ಹ್ನಪಿ.ವೈ. ವಿದ್ಯಾರ್ಥಿಗಳ ತಂಡ 81 ಅಂಕ ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡವು. ಈ ತಂಡಕ್ಕೆ 4000 ರು.ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಧೃತಿ ಎಸ್, ಧೃತಿ ಕೆ.ಎ, ರಸ್ತಜ್ಞ ಮಾದಪ್ಪ ಹಾಗೂ ಮಹಮ್ಮದ್ ಶಾದಿನ್ ವಿದ್ಯಾರ್ಥಿಗಳ ತಂಡ 67 ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿತು. ಈ ತಂಡಕ್ಕೆ 2000 ರು.ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಭಾಗಮಂಡಲದ ಶ್ರೀ ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜೆ.ದಿವಾಕರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ರಸಪ್ರಶ್ನೆ ಸ್ಪರ್ಧೆಗಳು ಸಹಕಾರಿ ಎಂದರು.
ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮ ಉದ್ಘಾಟನೆಗೊಳಿಸಿ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನೆರವಂಡ ಸುನಿಲ್ ಬೋಪಯ್ಯ, ನಿರ್ದೇಶಕರಾದ ಪ್ರೊ. ಕಲ್ಯಾಟಂಡ ಪೂಣಚ್ಚ, ಮಕ್ಕಿ ಸುಬ್ರಹ್ಮಣ್ಯ ಭಟ್, ಚೌರಿರ ಮಂದಣ್ಣ, ನಾಯಕಂಡ ದೀಪಕ್ ಚಂಗಪ್ಪ, ಬೊಳ್ಳಚೆಟ್ಟಿರ ಸುರೇಶ್ ಮತ್ತಿತರರಿದ್ದರು.
ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ 16 ತಂಡಗಳು ಪಾಲ್ಗೊಂಡಿದ್ದವು. ಅಂತಿಮ ಸುತ್ತಿಗೆ ಐದು ತಂಡಗಳನ್ನು ಆಯ್ಕೆ ಮಾಡಲಾಯಿತು. ನೇತಾಜಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್..ಸುರೇಶ್ ಹಾಗೂ ಮಡಿಕೇರಿ ಬಿಆರ್‌ಸಿ ಕೇಂದ್ರದ ಕಂಪ್ಯೂಟರ್ ಪ್ರೊಗ್ರಾಮರ್ ಡಿ.ಎಸ್.ಪ್ರಸಾದ್ ಕ್ವಿಝ್ ಮಾಸ್ಟರ್‌ಗಳಾಗಿ ನಿರ್ವಹಿಸಿದರು.
ಶಿಕ್ಷಕರಾದ ಕಾಳಯ್ಯ, ಚಂದ್ರಕಲಾ, ಸ್ಮಿತಾ ರಸಪ್ರಶ್ನೆ ಸ್ಪರ್ಧೆ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.