ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ । ಸಾವಯವ ಕೃಷಿಗೆ ಒಲವು ತೋರಲು ರೈತರಲ್ಲಿ ಚಲುವರಾಯಸ್ವಾಮಿ ಮನವಿ
ತಾಲೂಕಿನ ಕೊತ್ತನೂರು ಗ್ರಾಮದ ಪ್ರಗತಿಪರ ರೈತ ಮಹಿಳೆ ಗೌರಮ್ಮ ಅವರ ಜಮೀನಿಗೆ ಬುಧವಾರ ಭೇಟಿ ನೀಡಿ, ಅವರೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಸಗೊಬ್ಬರಗಳು ತಾತ್ಕಾಲಿಕ ಇಳುವರಿಗೆ ಕಾರಣವಾಗಿರಬಹುದಷ್ಟೇ. ಆದರೆ ಭವಿಷ್ಯದಲ್ಲಿ ದೀರ್ಘಕಾಲೀನ ಸಮಸ್ಯೆಗಳಿಗೆ, ತೊಂದರೆಗಳಿಗೆ ಕಾರಣವಾಗುತ್ತವೆ. ಈ ಹಿನ್ನೆಲೆಯಲ್ಲಿ ರೈತರು ರಸಗೊಬ್ಬರಗಳಿಗೆ ಹೊರತಾದ ಸಾವಯವ ಗೊಬ್ಬರಕ್ಕೆ ಆದ್ಯತೆ ನೀಡುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.ಸಾವಯವ ಕೃಷಿಯಲ್ಲಿ ತೊಡಗಿರುವ ಪ್ರಗತಿಪರ ರೈತ ಮಹಿಳೆ ಗೌರಮ್ಮ ಬಹುಬೆಳೆಗಳನ್ನು ಬೆಳೆದು ಮಾದರಿ ರೈತರಾಗಿದ್ದಾರೆ. ಕೊತ್ತನೂರು ಗ್ರಾಮದ ಗೌರಮ್ಮ ಅವರು ಕೇವಲ 2 ಎಕರೆ ಸ್ವಂತ ಜಮೀನಿನಲ್ಲಿ ಸಾವಯವ ಕೃಷಿ ಕೈಗೊಂಡು ಮಹತ್ತರ ಹೆಸರು ಗಳಿಸಿ ನೆಮ್ಮದಿಯ ಜೀವನ ರೂಪಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿ ಮಹಿಳೆಯಾಗಿದ್ದಾರೆ ಎಂದು ಸಚಿವರು ಗೌರಮ್ಮರಿಗೆ ಅಭಿನಂದನೆ ತಿಳಿಸಿದರು.
ನಂತರ ಕೃಷಿ ಸಚಿವರು ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ಗ್ರಾಮದ ನರಸಮ್ಮ, ಯಲುವಹಳ್ಳಿ ಗ್ರಾಮದ ಮುನಿಶಾಮಪ್ಪ ಅವರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರೈತ ಕುಟುಂಬದ ಶ್ರಮದ ಸಾಧನೆಗೆ ಮೆಚ್ಚಿ ಅಭಿನಂದನೆ ಸಲ್ಲಿಸಿದರು. ಸಾವಯವ ಸಮಗ್ರ ಕೃಷಿಯ ಸವಾಲು, ಅನುಕೂಲಗಳು ಮತ್ತು ಸಾಧನೆಗೆ ಪ್ರೇರಣೆಗಳ ಅನುಭವ ಕುರಿತು ಸಂವಾದ ನಡೆಸಿದರು.
ಕೃಷಿ ಸಚಿವರು ನೇರವಾಗಿ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣಕ್ಕೆ ತೆರಳಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಸಿರೆಲೆ ಗೊಬ್ಬರಕ್ಕಾಗಿ ಈ ವರ್ಷ 15 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದ ಎಲ್ಲಾ ತಾಲೂಕುಗಳಿಗೆ ಕೃಷಿ ಭಾಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ. ಬೆಳೆ ವಿಮೆ ಮಾಡಿಸಿದ ರಾಜ್ಯದ 17 ಲಕ್ಷ ರೈತರಿಗೆ 1,911 ಕೋಟಿ ರು. ಬೆಳೆ ವಿಮೆ ಪರಿಹಾರ ನೀಡಲಾಗಿದೆ. ಜೊತೆಗೆ ಈ ಬಾರಿಯೂ ಬೆಳೆ ವಿಮೆಗೆ ರೈತರು ನೋಂದಾಯಿಸಿಕೊಳ್ಳಿ, ಈ ಕುರಿತು ಹೋಬಳಿ ಮಟ್ಟದಲ್ಲಿ ನೋಂದಣಿಗೆ ರೈತರಲ್ಲಿ ಅರಿವು ಮೂಡಿಸಲು ಹಾಗೂ ನಿಗದಿತವಾಗಿ ಮಣ್ಣಿನ ಪರೀಕ್ಷೆಯನ್ನು ಕೈಗೊಂಡು ರೈತರಿಗೆ ಸಲಹೆಗಳನ್ನು ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲಾ ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಕೆ.ಎಚ್. ಪುಟ್ಟಸ್ವಾಮಿಗೌಡ, ಕೃಷಿ ಇಲಾಖೆ ಆಯುಕ್ತ ವೈ.ಎಸ್ ಪಾಟೀಲ್, ಜಲಾನಯನ ಇಲಾಖೆ ಆಯುಕ್ತ ಮಹೇಶ್ ಶಿರೂರು, ನಿರ್ದೇಶಕ ಪದ್ಮಯ್ಯ ನಾಯಕ್, ಕೃಷಿ ನಿರ್ದೇಶಕ ಡಾ.ಜಿ.ಟಿ ಪುತ್ರ, ಸಾವಯವ ಕೃಷಿ ಅಪರ ಕೃಷಿ ನಿರ್ದೇಶಕ ವೆಂಕಟರೆಡ್ಡಿ ಜೆ. ಪಾಟೀಲ್, ಕೃಷಿ ಇಲಾಖೆ ಉಪ ಕಾರ್ಯದರ್ಶಿ ಆರ್. ಮಹೇಶ್, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಎಡಿಸಿ ಡಾ.ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಜಾವಿದಾ ನಾಸೀಮಾ ಖಾನಂ, ಕೃಷಿ ಉಪನಿರ್ದೇಶಕ ಚಂದ್ರಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
------------ನೂತನವಾಗಿ ನಿರ್ಮಿಸಿರುವ ಸೆಂಟರ್ ಆಫ್ ಎಕ್ಸಲೆನ್ಸಿ ಕಟ್ಟಡವನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಲೋಕಾರ್ಪಣೆಗೊಳಿಸಿದರು.