ಕನ್ನಡಪ್ರಭ ವಾರ್ತೆ ಮೈಸೂರುಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕವನ್ನು ಹಿಂಪಡೆದು ಹಾಲಿ ಇರುವ ಆಡಳಿತ ಮಂಡಳಿಯನ್ನೇ ಮುಂದುವರೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಜಿಲ್ಲಾ ಘಟಕದವರು ಜಿಪಂ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.ಗ್ರಾಪಂಗಳ ಆಡಳಿತ ಅಂತಿಮವಾಗಲಿದ್ದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಸರ್ಕಾರ ಆದೇಶಿಸಿದೆ. ಗ್ರಾಪಂಗಳು ತಳ ಹಂತದ ಗ್ರಾಮಗಳ ಆಡಳಿತ ಕೇಂದ್ರವಾಗಿವೆ. ಸಂವಿಧಾನದ ಆಶಯ ಜಾರಿಗೊಳಿಸುವಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹಿಂದುಳಿದ ವರ್ಗ, ಶೋಷಿತ ಸಮುದಾಯಗಳು ಹಾಗೂ ಮಹಿಳೆಯರು ರಾಜಕೀಯ ಅಧಿಕಾರ ಬಳಸುವ ಅವಕಾಶ ನೀಡಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಸಕಾಲಕ್ಕೆ ಚುನಾವಣೆ ನಡೆಯದೆ 5 ಸಾವಿರಕ್ಕೂ ಹೆಚ್ಚು ಗ್ರಾಮೀಣ ನಾಯಕತ್ವದ ಅವಕಾಶವನ್ನು ಕಸಿದು ಅಧಿಕಾರಶಾಹಿಗಳ ಮುಖಾಂತರ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೋವಿಡ್ ಸಂದರ್ಭದಲ್ಲಿ ಗ್ರಾಪಂ ಸದಸ್ಯರು ಎರಡು ವರ್ಷಗಳ ಕಾಲ ನಿರಂತರವಾಗಿ ಜೀವ ಭಯವಿದ್ದರೂ ಜನರ ಕಷ್ಟಗಳಿಗೆ ಸ್ಪಂದಿಸಿದ ಇತಿಹಾಸ ಇರುವುದರಿಂದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಗ್ರಾಮೀಣ ನಾಯಕತ್ವದ ಪ್ರತಿಭೆಗಳನ್ನು ಉಳಿಸುವ ಅತ್ಯಮೂಲ್ಯ ಜವಾಬ್ದಾರಿ ರಾಜ್ಯ ವಿಧಾನಸಭೆಯ ಮೇಲಿದೆ. ಕ್ಷೇತ್ರ ವಿಂಗಡಣೆ ಹೊಸ ಹೊಸ ಆಲೋಚನೆಗಳು ಚುನಾವಣೆಯನ್ನು ಮುಂದಕ್ಕೆ ಹಾಕುವ ಅನಿವಾರ್ಯತೆಯನ್ನು ಸರ್ಕಾರದಲ್ಲಿ ತಂದೊಡ್ಡಬಹುದು ಎಂದು ಅವರು ಆರೋಪಿಸಿದರು.ಹೀಗಾಗಿ, ಆಡಳಿತಾಧಿಕಾರಿ ನೇಮಕ ಮಾಡುವ ಪ್ರಸ್ತಾವನೆ ಕೈಬಿಟ್ಟು, ಗ್ರಾಪಂ ಸದಸ್ಯರ ಆಡಳಿತಾವಧಿ ಮುಗಿದ ನಂತರ ರಾಜ್ಯ ಚುನಾವಣಾ ಆಯೋಗ ಗ್ರಾಪಂ ಚುನಾವಣೆಯ ಅಧಿಸೂಚನೆ ಹೊರಡಿಸುವವರೆಗೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಪಂ ಸದಸ್ಯರ ಆಡಳಿತ ಮಂಡಳಿಯನ್ನು ಯಥಾವತ್ ಮುಂದುವರಿಸಬೇಕು. ಈ ಸಂಬಂಧ ತಿದ್ದುಪಡಿ ಮಾಡುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಉಳಿಸಬೇಕು ಎಂದು ಅವರು ಒತ್ತಾಯಿಸಿದರು.ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಆಡಳಿತಾವಧಿ ಮುಕ್ತಾಯವಾಗಿದ್ದರೂ 15 ತಿಂಗಳು ಕಾಲ ಹಾಲಿ ಸಮಿತಿಯನ್ನೇ ಮುಂದುವರಿಸಿದ ಉದಾಹರಣೆ ಇದೆ. ಹೀಗಾಗಿ, ಈ ಅಂಶವನ್ನು ಪರಿಗಣಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ಯದುನಾಡು ನಾಗರಾಜು, ಪ್ರಧಾನ ಕಾರ್ಯದರ್ಶಿ ಎಡತೊರೆ ಮಹೇಶ್, ರಾಜು ಹುಣಸೂರು, ನಿಶಾಂತ್, ನಂದಕುಮಾರ್, ರಾಮೇಗೌಡ, ರವಿಚಂದ್ರ, ನಟರಾಜು, ಚಂದ್ರಶೇಖರ್, ದ್ರಾಕ್ಷಾಯಿಣಿ, ಬೃಂದಾ ಕೃಷ್ಣೇಗೌಡ, ಸೌಮ್ಯಾ ಮೊದಲಾದವರು ಇದ್ದರು.