ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಯೊಧ್ಯೆಯಲ್ಲಿ ಸೋಮವಾರ ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶಿವಮೊಗ್ಗ ಜಿಲ್ಲಾದ್ಯಂತ ವಿಶೇಷ ಪೂಜೆ, ಪುನಸ್ಕಾರದ ಮೂಲಕ ಭಕ್ತರು ರಾಮನಾಮ ಜಪವನ್ನು ಮೊಳಗಿಸಿದರು.ನಗರದಲ್ಲಿ ಗಲ್ಲಿ ಗಲ್ಲಿಯಲ್ಲಿಯೂ ರಾಮೋತ್ಸವ ನಡೆಯಿತು. ಬೆಳಗ್ಗಿನಿಂದಲೇ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಭಕ್ತಿ ಹಾಗೂ ಸಂಭ್ರಮ ಜಿಲ್ಲೆಯಲ್ಲೂ ಮುಗಿಲುಮುಟ್ಟಿತ್ತು. ನಗರದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ಬಹುತೇಕ ದೇವಾಲಯಗಳಲ್ಲಿ ರಾಮತಾರಕ ಹವನ, ಜಪಯಜ್ಞ ಮತ್ತು ಕಲಾವಿದರಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ಸಂಘ ಸಂಸ್ಥೆಗಳು, ಬೀದಿ ಬೀದಿಗಳಲ್ಲಿ ಕೇಸರಿ ಬಾವುಟಗಳನ್ನು ಹಾರಿಸಿ, ಬೃಹತ್ ರಾಮಲಲ್ಲಾನ ಕಟೌಟ್‌ಗಳನ್ನು ಸ್ಥಾಪಿಸಿ ಬೆಳಗ್ಗೆಯಿಂದಲೇ ಸಾರ್ವಜನಿಕರಿಗೆ ಪಾನಕ, ಕೋಸಂಬರಿ ಮತ್ತು ಉಪಾಹಾರ ವಿತರಿಸಿದರು.
ಎಲ್ಲ ದೇವಾಲಯಗಳಲ್ಲೂ ಭಕ್ತರ ದಂಡು ಸಾಲುಗಟ್ಟಿ ನಿಂತು ದೇವರ ದರ್ಶನ ಪಡೆದರು. 10ಕ್ಕೂ ಹೆಚ್ಚು ಕಡೆ ಅಯೋಧ್ಯೆ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಅನೇಕ ಪೋಷಕರು ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸದೇ ರಾಮ, ಲಕ್ಷ್ಮಣ ಸೀತೆಯ ಪೋಷಾಕುಗಳನ್ನು ಹಾಕಿ, ದೇವಾಲಯಗಳಿಗೆ ಕರೆದುಕೊಂಡು ಬಂದರು.ಎಲ್ಲೆಡೆ ರಾಮ ಭಜನೆ ಹಮ್ಮಿಕೊಳ್ಳಲಾಗಿತ್ತು. ಜಯನಗರ ರಾಮಮಂದಿರದಲ್ಲಿ ಶ್ರೀ ರಾಮ ದೇವರಿಗೆ ಬೆಳ್ಳಿಯ ಕಿರೀಟವನ್ನು ಅರ್ಪಿಸಲಾಯಿತು. ಅನೇಕ ಆಟೋ ನಿಲ್ದಾಣಗಳಲ್ಲಿ ಆಟೋ ಚಾಲಕರ ಸಂಘ ಉಪಾಹಾರ ಹಂಚಿಕೆ ನಡೆದಿತ್ತು. ರಂಗೋಲಿ, ಹೂವಿನ ಅಲಂಕಾರ, ಸಿಹಿ ಹಂಚಿಕೆ ಹಮ್ಮಿಕೊಳ್ಳಲಾಗಿತ್ತು.
ರಾಮಲಲ್ಲಾನ ಪ್ರತಿಷ್ಠಾ ಮಹೋತ್ಸವ ಜನರಲ್ಲಿ ಉತ್ಸಹ ತಂದಿತ್ತು. ಎಲ್ಲೆಡೆ ಹಬ್ಬದ ವಾತಾವರಣ ಕಾಣುತ್ತಿತ್ತು. ಯುವಕರು ಕೇಸರಿ ಧ್ವಜ ನೆಟ್ಟು, ಬೈಕಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ರ‍್ಯಾಲಿ ನಡೆಸಿದರು.- - - ಎಲ್ಲರನ್ನು ಪ್ರೀತಿಯಿಂದ ಕಾಣುವುದೇ ರಾಮರಾಜ್ಯ ಪರಿಕಲ್ಪನೆ ಶಿವಮೊಗ್ಗ: ಸಮಾಜದ ಎಲ್ಲ ಜಾತಿ- ಧರ್ಮದವರನ್ನು ಪ್ರೀತಿಯಿಂದ ಕಾಣುವುದೇ ರಾಮರಾಜ್ಯದ ಪರಿಕಲ್ಪನೆ ಎಂದು ಬೆಕ್ಕಿನ ಕಲ್ಮಠದ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನಲೆ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಹಿಂದೂ ಪರ ಸಂಘಟನೆಗಳಿಂದ ಸಿಹಿ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಐತಿಹಾಸಿಕ ಕ್ಷಣ. ಈ ಸನ್ನಿವೇಶದ ದಿನವನ್ನು ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಎಂದು ಬಣ್ಣಿಸಿದರು.ಭಾರತ ಸಂಸ್ಕೃತಿಭರಿತ ದೇಶ. ಇದಕ್ಕೆ ಈ ಹೆಸರು ಬರಲು ಕಾರಣ ಇಲ್ಲಿನ ಸಂಸ್ಕೃತಿ- ಆಚಾರ ವಿಚಾರಗಳಿಂದ. ರಾಮ ರಾಜ್ಯ ಅಂದರೆ ಎಲ್ಲರನ್ನೂ ಪ್ರೀತಿಯಿಂದ ಕಾಣುವುದಾಗಿದೆ ಎಂದರು.
ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಪ್ರಮುಖ ಪಟ್ಟಾಭೀರಾಮ್ ಮಾತನಾಡಿ, ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಗಿದೆ. ರಾಮ ಮಂದಿರ ಕೇವಲ ಮಂದಿರವಲ್ಲ. ರಾಷ್ಟ್ರ ಮಂದಿರ. ಶ್ರೀರಾಮ ಹಿಂದೂ ಸಮಾಜದ ಸಂಸ್ಕೃತಿಯ ಪ್ರತೀಕ. ಭಾರತ ಹಿಂದೂ ರಾಷ್ಟ್ರ. ದೇಶದ ಎಲ್ಲ ಧರ್ಮ, ಜಾತಿ, ಪಂಥಕ್ಕೆ ಸೇರಿದ ಇತಿಹಾಸ ಪುರುಷ ಶ್ರೀರಾಮ. ಇಲ್ಲಿ ಅಖಂಡ ಭಾರತ ನಿರ್ಮಾಣವಾಗಬೇಕು. ನೂರಕ್ಕೆ ನೂರು ರಾಮ ರಾಜ್ಯ ಆಗಬೇಕು ಎಂದರು.ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಅಯೋಧ್ಯೆಯ ರೀತಿಯಲ್ಲೇ ಕಾಶಿ ಮತ್ತು ಮಥುರಾದಲ್ಲಿ ಮಸೀದಿಗಳ ಜಾಗದಲ್ಲಿ ದೇವಾಲಯಗಳ ನಿರ್ಮಾಣ ಕಾರ್ಯ ಆಗಲಿದೆ. ಶ್ರೀರಾಮ ರಾಮ ಮಂದಿರ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ ಜನನಾಯಕ. ರಾಜ್ಯದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳನಾಯಕ ಎಂದು ವ್ಯಂಗವಾಡಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇಡೀ ದೇಶವೇ ಇಂದು ಕೇಸರಿಮಯವಾಗಿದೆ. ಕರಸೇವಕರ ಪ್ರಾಣತ್ಯಾಗಕ್ಕೆ ನ್ಯಾಯ ದೊರಕಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಸುರೇಖಾ ಮುರುಳೀಧರ್ ಇದ್ದರು.- - - ವಿಶೇಷ ಪೂಜಾ ಕಾರ್ಯಕ್ರಮಗಳು
ಹೊಳೆಹೊನ್ನೂರು: ಗ್ರಾಮಾಂತರ ಕ್ಷೇತ್ರದ ಹಳ್ಳಿಗಳ ದೇವಸ್ಥಾನಗಳಲ್ಲಿ ರಾಮೋತ್ಸವ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಮುಖ ದೇವಸ್ಥಾನಗಳಲ್ಲಿ ಗ್ರಾಮ ಸಮೀತಿಗಳೆ ಮುಂದೆ ನಿಂತು ಪೂಜಾ ಕಾರ್ಯಕ್ರಮ ಸೇರಿದಂತೆ ಅನ್ನ ಸಂತಪರ್ಣೆ ನಡೆಸಿಕೊಟ್ಟರು. ಆಂಜನೇಯ ದೇವಾಸ್ಥಾನಗಳಲ್ಲಿ ವಿಶೇಷವಾಗಿ ರಾಮಾ ತಾರಕ ಅಷ್ಟೋತ್ತರ ಪಠಣದೊಂದಿಗೆ ಭಜನಾ ಕಾರ್ಯಕ್ರಮಗಳನ್ನು ಅಮ್ಮಿಕೊಳ್ಳಲಾಗಿತ್ತು. ಗ್ರಾಮೀಣದ ಬಹುತೇಕ ದೇವಸ್ಥಾನಗಳಲ್ಲಿ ಪಾನಕ ಕೋಸಂಬರಿ ವಿತರಿಸಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು.ಹೊಳೆಹೊನ್ನೂರಿನ ನೃಪತುಂಗ ವೃತ್ತದಲ್ಲಿ ಶ್ರೀರಾಮ ಪೊಟೊಗೆ ಪುಷ್ಪಾರ್ಚನೆ ನೆರವೇರಿಸಿ ಪಾನಕ ಕೊಸಂಬರಿ ವಿತರಿಸಲಾಯಿತ್ತು. ಯಡೇಹಳ್ಳಿಯಲ್ಲಿ ಚಂಡೆ ಮೇಳದೊಂದಿಗೆ ಮಹಿಳೆಯರು ಪ್ರಮುಖ ಬೀದಿಗಳಲ್ಲಿ ಕುಂಭಮೇಳ ಮೆರವಣಿಗೆ ನಡೆಸಿ, ನಂದಿ ಬಸವೇಶ್ವರ ಹಾಗೂ ಕರಿಬಸವೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಹೊಳಿಗೆ ಊಟ ಸವಿದರು. ಮೈದೊಳಲಿನಲ್ಲಿ ಆಂಜನೇಯಸ್ವಾಮಿಗೆ ಬೆಳ್ಳಿ ಅಲಂಕಾರ ನೆರವೇರಿಸಿ ಗ್ರಾಮಸ್ಥರಿಗೆ ಲಾಡು, ಪಾಯಸದ ಭೋಜನ ವ್ಯವಸ್ಥೆ ಮಾಡಿದರು. ಮಲ್ಲಾಪುರದ ಗುಡ್ಡದ ಮಲ್ಲೇಶ್ವರಸ್ವಾಮಿ ದೇವಾಸ್ಥಾನದಲ್ಲಿ ದೊಡ್ಡ ಪರದೆ ಅಳವಡಿಸಿ ನೇರಪ್ರಸಾರ ವೀಕ್ಷಿಸಿಲು ಅನುವು ಮಾಡಿ ಕೊಡಲಾಗಿತ್ತು. ಆನವೇರಿಯ ಆಂಜನೇಯ ಹಾಗೂ ಹಿರಿಮಾವುರದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅರಹತೊಳಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಬರುವಂತಹ ಭಕ್ತರಿಗೆ ಮೊಸರು ಅನ್ನ, ಪಾಯಸ, ಕೋಸಂಬರಿ, ಪಾನಕ ಹಾಗೂ ಮಜ್ಜಿಗೆಯನ್ನು ವಿತರಿಸಲಾಯಿತು. ಸೈದರಕಲ್ಲಹಳ್ಳಿಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ಫಲ- ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಹೊಳಲೂರಿನ ಆಂಜನೇಯ ಸ್ವಾಮಿಗೆ ಫಂಚಾಮೃತ ಅಭಿಷೇಕ ನೆರವೇರಿಸಲಾಯಿತ್ತು. ಹೊಸಕೊಪ್ಪದ ಪಿಳ್ಳಮ್ಮ ದೇವಾಸ್ಥಾನ ಆವರಣದಲ್ಲಿ ಪಾನಕ ಕೋಸಂಬರಿ ವಿತರಿಸಲಾಯಿತು. ಆಲದಹಳ್ಳಿ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈ ಕಾರ್ಯಗಳು ನಡೆದವು. ಶಿವಮೊಗ್ಗ– ಚಿತ್ರದುರ್ಗ ರಾಷ್ಟ್ರೀಯಾ ಹೆದ್ದಾರಿಯ ಅರಹತೊಳಲು ಕೈಮರ ವೃತ್ತದಲ್ಲಿ ಯುವಕರು ಪಾನಕ ಕೋಸಂಬರಿ ಹಂಚಿದರು. ಹೆದ್ದಾರಿಯ ವಾಹನ ಸಾವರರು ವಾಹನಗಳನ್ನು ನಿಲ್ಲಿಸಿ ಬಂದು ಪಾನಕ ಕೊಸಂಬರಿ ಸೇವಿಸಿದ್ದು ವಿಶೇಷವಾಗಿತ್ತು. - - -ರಾಘವ ಶಾಖೆಯಲ್ಲಿ ರಾಮತಾರಕ ಮಂತ್ರಶಿವಮೊಗ್ಗ: ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ಪಟ್ಟಾಭಿಷೇಕದ ಪ್ರಯುಕ್ತ ಶಿವಮೊಗ್ಗ ನಗರದ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಮೂಲಕ 108 ತಾರಕ ಮಂತ್ರ ಪಠಣೆ ನಡೆಸಲಾಯಿತು.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದೇಶಾದ್ಯಂತ ಶ್ರೀ ರಾಮನಿಗೆ ವಿಶೇಷ ಪೂಜೆ, ರಾಮಮಂತ್ರ ಪಠಣೆ, ಭಜನೆ, ವಿವಿಧ ಪೂಜೆಗಳ ಆಚರಣೆ ನಡೆಸುತ್ತಿದ್ದು, ಶಿವಮೊಗ್ಗದಲ್ಲಿಯೂ ರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಯೋಗ ನಮನ ಹಾಗೂ 108 ರಾಮ ತಾರಕ ತಾರಕ ಮಂತ್ರ ಪಠಿಸಲಾಯಿತು.ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕುರಿತು ಯೋಗ ಕಲಿಕಾರ್ಥಿಗಳು ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯುವ ಕೇಂದ್ರದ ಕಾರ್ಯದರ್ಶಿ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಮಾತನಾಡಿದರು.
500 ವರ್ಷಗಳ ಕನಸು ಇಂದು ನನಸಾಗುತ್ತಿದ್ದು, ಹಿಂದುಗಳ ಜೀವನದಲ್ಲಿ ಒಂದು ಪವಿತ್ರವಾದ ದಿನ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾದ ದಿನ. ಬಹಳ ದಿನಗಳಿಂದ ರಾಮರಾಜ್ಯ ಅಂತ ಮಾತಾಡುತ್ತಿದ್ದೆವು. ಅದು ಇವತ್ತು ನೆನಪಾಗಿದ್ದು, ಇವತ್ತು ನಮ್ಮ ಶಿವಗಂಗಾ ಯೋಗ ಕೇಂದ್ರದ ಎಲ್ಲಾ ಶಾಖೆಗಳಲ್ಲಿ ವಿಶೇಷವಾಗಿ ರಾಮನ ಪೂಜೆ ಭಜನೆ ಹಾಗೂ ರಾಮ ತಾರಕ ಮಂತ್ರಗಳನ್ನು ಸಾವಿರಾರು ಯೋಗ ಕಲಿಕಾರ್ಥಿಗಳು ಪಠಿಸಿದ್ದಾರೆ ಎಂದು ತಿಳಿಸಿದರು.ಯೋಗಗುರು ವಿಜಯ ಕೃಷ್ಣ ಮಾತನಾಡಿ, ರಾಮನ ಭಜನೆ, ತಾರಕ ಮಂತ್ರಗಳಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ. ಪ್ರತಿ ದಿನ ನಾವು ನೀವೆಲ್ಲರೂ ಭಜನೆಯಲ್ಲಿ ಪಾಲ್ಗೊಳ್ಳಬೇಕು. ಇಂದು ಎಲ್ಲ ಜಾತಿ ಮತ್ತು ಧರ್ಮದವರು ರಾಮನ ಪೂಜೆ ಭಜನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಒಂದು ತಿಂಗಳಿಂದ ನಾವು ರಾಮ ತಾರಕ ಮಂತ್ರಗಳನ್ನ ಘಟನೆ ಮಾಡುತ್ತಿದ್ದು, ರಾಮನಿಗೆ ವಿಶೇಷ ಗೌರವವನ್ನು ಸಲ್ಲಿಸುತ್ತಿದ್ದೇವೆ. ವಿಶೇಷ ಸಂದರ್ಭದಲ್ಲಿ ಎಲ್ಲರಿಂದ ರಾಮ ಭಜನೆ ನೆರವೇರಿಸುವುದರ ಮುಖಾಂತರ ಭಕ್ತಿ ಗೌರವಗಳಿಂದ ರಾಮನ ಪೂಜೆಯನ್ನು ಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಆನಂದ್, ದೀಪಕ್, ನರಸೋಜಿರಾವ್, ಕಾಟನ್ ಜಗದೀಶ್, ಶ್ರೀನಿವಾಸ್, ಮಣಿವಣ್ಣನ್, ಸುಜಾತಾ ಮಧುಕೇಶ್ವರ್, ಗಾಯತ್ರಿ, ರಮೇಶ್, ವಸುಂಧರಾ ಜಗದೀಶ್, ಸುಜಾತ ಮಧುಕೇಶ್, ಗಾಯತ್ರಿ, ವನಿತಾ, ಉಷಾ, ವಸುಂದರ, ರೇಣುಕಾ, ವೀಣಾ, ಸುಮಾ, ಗಾಯತ್ರಿ ರಮೇಶ ಮತ್ತಿತರರು ಉಪಸ್ಥಿತರಿದ್ದರು.
- - - ಹೊಸನಗರದಲ್ಲೂ ಹೋಮ, ವೇದಘೋಷಣೆ, ಭಜನೆಹೊಸನಗರ: ಅಯೋಧ್ಯೆಯಲ್ಲಿ ಸೋಮವಾರ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾನ ಅಂಗವಾಗಿ ಹೊಸನಗರದ ಗಣಪತಿ ದೇವಸ್ಥಾನದಲ್ಲಿ ಹವನ ಹೋಮಗಳು, ವೇದ ಘೋಷಣೆಯೂಂದಿಗೆ ನಡೆಯಿತು.ಊರಿನ ಪ್ರಮುಖ ಬೀದಿಗಳಲ್ಲಿ ಜೈ ಶ್ರೀರಾಮ ಭಜನೆಯೊಂದಿಗೆ ಮೆರವಣಿಗೆ ಸಾಗಿತು. ತಾಲೂಕಿನ ವಿವಿಧ ಕಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೇರವೇರಿತು. ಸಾರ್ವಜನಿಕರಿಗೆ ಪಾನಕ ಕೋಸಂಬರಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು ಕೇಂದ್ರ ಸರ್ಕಾರದ ಕಚೇರಿಗಳಿಗೆ ರಜೆ ಇದ್ದು , ಅಂಗಡಿ, ಹೋಟೆಲ್‌ಗಳ ಮಾಲೀಕರು ಸ್ವಯಂ ಬಂದ್ ಮಾಡಿದ್ದರು.- - - -22ಎಸ್‌ಎಂಜಿಕೆಪಿ02: ಶಿವಮೊಗ್ಗದಲ್ಲಿ ಸೋಮವಾರ ಆಯೊಧ್ಯೆಯಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶರಾವತಿ ನಗರದ ಬಡಾವಣೆ ಮಹಿಳೆಯರು ವಿಶೇಷ ರಂಗೋಲಿ ಹಾಕಿ ಸಂಭ್ರಮಿಸಿದರು.
- - --22ಎಸ್‌ಎಂಜಿಕೆಪಿ03: ಶಿವಮೊಗ್ಗದಲ್ಲಿ ಸೋಮವಾರ ಆಯೊಧ್ಯೆಯಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶಿವಪ್ಪ ನಾಯಕ ವೃತ್ತದ ಬಳಿ ಸಾರ್ವಜನರಿಗೆ ಪಾನಕ, ಕೊಸಂಬರಿ ವಿತರಿಸಲಾಯಿತು.
- - --22ಎಸ್‌ಎಂಜಿಕೆಪಿ04: ಅಯೋಧ್ಯೆಯಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಸೋಮವಾರ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಅಯೋಧ್ಯೆಯ ನೇರಪ್ರಸಾರ ವೀಕ್ಷಿಸಲು ಎಲ್‌ಇಡಿಯನ್ನು ಅಳವಡಿಸಲಾಗಿತ್ತು.
- - --22ಎಸ್‌ಎಂಜಿಕೆಪಿ05: ಅಯೋಧ್ಯೆಯಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಬಳಿ ನಿರ್ಮಿಸಿದ್ದ ಶ್ರೀರಾಮ ಕಟೌಟ್.
- - --22ಎಸ್‌ಎಂಜಿಕೆಪಿ06: ಅಯೋಧ್ಯೆಯಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮ ಪ್ರತಿಷ್ಠಾಪನೆ ಸಮಾರಂಭ ಹಿನ್ನೆಲೆ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದ ಬಳಿ ಹಿಂದು ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ. ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಸೇರಿದಂತೆ ಹಿಂದು ಮುಖಂಡರು ಭಾಗಿಯಾಗಿದ್ದರು.
- - --22ಎಸ್‌ಒಎಸ್01: ಹೊಸನಗರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ದೇವರ ಮೆರವಣಿಗೆ ನಡೆಯಿತು.
- - --22ಎಚ್‍ಎಚ್‍ಆರ್ಪಿ6: ಹೊಳೆಹೊನ್ನೂರು ಸಮೀಪದ ಮೈದೊಳಲಿನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮೋತ್ಸವದ ಪ್ರಯುಕ್ತ ಗ್ರಾಮಾಭಿವೃದ್ದಿ ಸಮಿತಿ ವಿಶೇಷ ಪೂಜೆಯನ್ನು ಆಯೋಜಿಸಿತ್ತು.
- - -