ವೈವಿಧ್ಯ ವೇಷಭೂಷಣ ಭಾರತ ಸಂಸ್ಕೃತಿ, ಪರಂಪರೆ ವಿಶೇಷ: ಪ್ರೊ. ಮಮತಾ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

‘ಮೇರಾ ಮಿಟ್ಟಿ ಮೇರಾ ದೇಶ್’ ಅಭಿಯಾನವು ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ದೇಶದ ವಿವಿಧ ರಾಜ್ಯಗಳಲ್ಲಿ ಜನರು ತೊಡುವ ಉಡುಪುಗಳು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಶ್ರೇಷ್ಠ ಸಂಸ್ಕೃತಿ ಪರಂಪರೆ ಹೊಂದಿರುವ ದೇಶ ಭಾರತ ಎಂದು ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಹೇಳಿದರು. ನಗರದ ಎಟಿಎನ್‌ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮೇರಾ ಮಿಟ್ಟಿ ಮೇರಾ ದೇಶ್’ ಅಭಿಯಾನವು ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಭಾರತ 75ನೇ ಸ್ವಾತಂತ್ರ್ಯ ವರ್ಷದ ಸಂಭ್ರಮ ಆಚರಣೆ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವ ನಡೆಸುತ್ತಿದ್ದು, ಇದರ ಭಾಗವಾಗಿ ‘ನನ್ನ ಮಣ್ಣು ನನ್ನ ದೇಶ’ ( ಮೇರಾ ಮಿಟ್ಟಿ ಮೇರಾ ದೇಶ ) ಅಭಿಯಾನ ನಡೆಸಲಾಗುತ್ತಿದ್ದು, ದೇಶದ ಪ್ರತಿಯೊಬ್ಬರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಆಗಸ್ಟ್ ತಿಂಗಳಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಲಾದ ಮಣ್ಣನ್ನು ಬಳಸಿಕೊಂಡು ದೆಹಲಿಯಲ್ಲಿ ಕರ್ತವ್ಯ ಪಥದ ಉದ್ದಕ್ಕೂ ಅಮೃತ ವಾಟಿಕಾ ಎನ್ನುವ ಹೆಸರಿನಲ್ಲಿ ಉದ್ಯಾನವನ ಅಭಿವೃದ್ಧಿಪಡಿಸುವ ಗುರಿ ಅಭಿಯಾನ ಒಳಗೊಂಡಿದೆ ಎಂದು ತಿಳಿಸಿದರು. ಪಂಚಾಯಿತಿ, ಗ್ರಾಮ, ಬ್ಲಾಕ್, ಪಟ್ಟಣ, ನಗರ ಸ್ಥಳೀಯ ಸಂಸ್ಥೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ರಕ್ಷಣಾ ಸಿಬ್ಬಂದಿ ಸೇರಿ ಅತ್ಯುನ್ನತ ತ್ಯಾಗ ಮಾಡಿದವರ ಹೆಸರನ್ನು ಹೊಂದಿರುವ ಸ್ಮಾರಕ ಫಲಕವನ್ನು ಸ್ಥಾಪಿಸುವುದು ಸಹ ಇರಲಿದೆ ಎಂದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ. ವಿಜಯ್‌ಕುಮಾರ್, ಎಟಿಎನ್‌ಸಿಸಿ ಕಾಲೇಜಿನ ಪ್ರೊ. ಎಸ್. ಜಗದೀಶ್, ಪ್ರೊ. ಕೆ.ಎಂ. ನಾಗರಾಜು, ಪ್ರೊ. ಮಂಜುನಾಥ್ ಎನ್. ಮತ್ತಿತರರು ಉಪಸ್ಥಿತರಿದ್ದರು. - - - -ಫೋಟೋ: ಶಿವಮೊಗ್ಗ ನಗರದ ಎಟಿಎನ್‌ಸಿಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ದೇಶದ ವಿವಿಧ ಭಾಗಗಲ್ಲಿ ತೊಡುವ ವೈವಿಧ್ಯಮಯ ಉಡುಪು ಧರಿಸಿ ಪ್ರದರ್ಶಿಸಿದರು.

Share this article