ರಾಮನಗರ: ಕಾವೇರಿ ನದಿ ನೀರಿನ ವಿಷಯದಲ್ಲಿ ಕಾನೂನು ಮತ್ತು ಎರಡು ರಾಜ್ಯಗಳ ನಡುವಿನ ನೀರಾವರಿ ತಜ್ಞರು ಗಂಭೀರ ಚಿಂತನೆ, ಕಾನೂನು ಹೋರಾಟ ಹಾಗೂ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ. ಮೇಕೆದಾಟು ನಿರ್ಮಾಣ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಅಧ್ಯಕ್ಷ ಧರಣೀಶ್ ರಾಂಪುರ ಹೇಳಿದರು. ನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ "ಕಾವೇರಿಗಾಗಿ ನಮ್ಮ ಕೂಗು ಚಿಂತನಾ ಗೋಷ್ಠಿ " ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ನಡೆಸುವ ಸರ್ಕಾರ ಮತ್ತು ಜನಪ್ರತಿನಿಧಿಗಳಲ್ಲಿ ನಮ್ಮ ಜನ ಕುಡಿಯುವ ನೀರು ಮತ್ತು ಮೂಲ ಸೌಲಭ್ಯ ನೀಡುವಂತೆ ಪ್ರಶ್ನೆ ಮಾಡುವ ಪ್ರವೃತ್ತಿ ಇಲ್ಲದಂತಾಗಿದೆ. ಕಾವೇರಿ ನೀರಿನ ಸಮಸ್ಯೆ ಬಗ್ಗೆ ಗಭೀರ ಚಿಂತನೆ ಅಗತ್ಯವಿದೆ ಎಂದರು. ನಮ್ಮ ರಾಜ್ಯದಲ್ಲಿ ಬಳಕೆ ಮತ್ತು ಅಚ್ಚುಕಟ್ಟು ಪ್ರದೇಶ ಕಡಿಮೆಯಾಗಿದ್ದು, ತಮಿಳು ನಾಡಿನಲ್ಲಿ ಹೆಚ್ಚಾಗಿದೆ. ಮಳೆಯ ಕೊರತೆ ಜೊತೆಗೆ ಸರ್ಕಾರದಲ್ಲಿ ಆಡಳಿತ ನಡುಸುವ ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಕೊರತೆಯಿಂದ ಹಲವು ವರ್ಷಗಳಿಂದ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಎರಡು ರಾಜ್ಯಗಳ ನಡುವೆ ರೈತರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಹೇಳಿದರು. ಅಭಿಯಂತರ ಎಸ್.ಭರತ್ ಮಾತನಾಡಿ, ಇಂದಿನ ಪರಿಸ್ಥತಿಯಲ್ಲಿ ಕಾವೇರಿ ನೀರು ಕೇವಲ ತಮಿಳುನಾಡು ಮತ್ತು ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸೀಮಿತವಾಗುತ್ತಿದೆ. ಜೀವನದಿ ಕಾವೇರಿಯಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಚೆಕ್ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿ, ಸ್ಥಳೀಯವಾಗಿ ಬೇಸಾಯದ ಜೊತೆ ಮೀನುಗಾರಿಕೆಗೆ ರೈತರನ್ನು ಉತ್ತೇಜಿಸಬೇಕು ಎಂದರು. ಅಭಿಯಂತರ ಕೆ.ಎಂ.ಪುನೀತ್ ಕುಮಾರ್ ಮಾತನಾಡಿ, ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಯಾವುದೇ ರಾಜಕೀಯ ಪಕ್ಷಗಳಿಗೆ ಬದ್ಧತೆ ಇಲ್ಲ. ಕೇವಲ ಅಧಿಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದು, ಬರಿ ಮಾತಿನಿಂದ ಪರಿಹಾರ ಸಾಧ್ಯವಿಲ್ಲ. ನದಿ ಜೋಡಣೆ, ಅವಶ್ಯಕತೆಗೆ ತಕ್ಕಂತೆ ಏತ ನೀರಾವರಿ ಯೋಜನೆಗಳು ಜಾರಿಯಾಗಬೇಕು. ಇಸ್ರೇಲ್ ಮಾದರಿಯಂತೆ ಜನರಲ್ಲಿ ನೀರಿನ ಬಳಕೆ ಪ್ರಜ್ಞೆ, ಸಮರ್ಪಕ ನಿರ್ವಹಣೆ, ಮಿಶ್ರಬೆಳೆ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು. ಅಭಿಯಂತರ ಎ.ಅರುಣ್ ಕುಮಾರ್ ಮಾತನಾಡಿ, ಕಾವೇರಿ ನೀರಿನ ವಿಷಯದಲ್ಲಿ ಸಮಸ್ಯೆ ಬಗೆಹರಿಸುವಲ್ಲಿ ಶತಮಾನ ಕಂಡರು ಪರಿಹಾರ ಕಂಡುಕೊಳ್ಳುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ನಿರಂತರ ಹೋರಾಟ ನಡೆದರೂ ಹಲವು ವರ್ಷಗಳಿಂದ ತಮಿಳುನಾಡಿನ ನೀರಿನ ಬೇಡಿಕೆ ಮನವಿಗೆ ಕಾವೇರಿ ನದಿ ನೀರಿನ ಸಂಗ್ರಹ ಮಟ್ಟ ಮತ್ತು ಕುಡಿಯುವ ನೀರು ಬಳಕೆ ಹಾಗೂ ಬೇಸಾಯದ ಅಚ್ಚುಕಟ್ಟ ಪ್ರದೇಶದ ಅಂಕಿ ಅಂಶದ ಬಗ್ಗೆ, ಪ್ರಾಧಿಕಾರದ ಬಳಿ ವಾದ ಮಂಡಿಸುವಲ್ಲಿ ಕಾನೂನು ಅಸಮರ್ಥ, ವೈಫಲ್ಯದಿಂದ ಸಮಸ್ಯಯಾಗಿಯೇ ಉಳಿದಿದೆ. ತಂತ್ರಜ್ಞಾನ ಬಳೆಸಿಕೊಂಡು ಕಾವೇರಿ ಕೊಳ್ಳದಲ್ಲಿ ಬರುವ ಎಲ್ಲ ನದಿಗಳ ಜೋಡಣೆ ಮೂಲಕ ಕೆರೆಗಳ ತುಂಬಿಸಿ ಸಮರ್ಪಕ ನೀರಿನ ನಿರ್ವಹಣೆ ಮತ್ತು ಬಳಕೆ ಮಾಡಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ , ತಾಲೂಕು ಅಧ್ಯಕ್ಷ ಬಿ.ಟಿ. ದಿನೇಶ್, ನಿವೃತ್ತ ಪ್ರಾಧ್ಯಾಪಕ ಜಿ.ಎಚ್.ರಾಮಯ್ಯ, ಪ್ರೊ.ಕರೀಗೌಡ, ನಿವೃತ್ತ ಪ್ರಿನ್ಸಿಪಾಲ್ ವನರಾಜು, ಜಾನಪದ ಹಿರಿಯ ಕಲಾವಿದ ಚೌ.ಪು.ಸ್ವಾಮಿ, ಕಸಾಪ ಪದಾಧಿಕಾರಿ ಬಿಳಗುಂಬ ರಾಜೇಂದ್ರ, ಹೋಬಳಿ ಘಟಕದ ದೇವರಾಜು, ಸುರೇಶ್, ಕುಮಾರ್, ಸಂತೋಷ್, ರವಿಕುಮಾರ್ ಉಪಸ್ಥಿತರಿದ್ದರು. ಕೋಟ್..... ಕಾವೇರಿ ನೀರಿನ ಬಳಕೆ ವಿಚಾರದಲ್ಲಿ ರಾಜ್ಯಕ್ಕೆ ಸ್ವಾತಂತ್ರ್ಯ ಬರುವ ಮೊದಲು ಮತ್ತು ನಂತರದಲ್ಲೂ ಅನ್ಯಾಯವಾಗಿದೆ. ಇಂತಹ ಚರ್ಚೆಗಳ ಮೂಲಕ ಕಾನೂನು ಚೌಕಟ್ಟಿನಲ್ಲಿ ಕನ್ನಡಿಗರಾದ ನಾವು ಪಕ್ಷಬೇದ ಮರೆತು ಇಂದು ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. -ಸು.ಚಿ.ಗಂಗಾಧರಯ್ಯ, ಹಿರಿಯ ಸಾಹಿತಿ 20ಕೆಆರ್ ಎಂಎನ್ 2.ಜೆಪಿಜಿ ರಾಮನಗರದ ಜಿಲ್ಲಾ ಕಸಾಪ ಕಚೇರಿಯಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕಾವೇರಿಗಾಗಿ ನಮ್ಮ ಕೂಗು ಚಿಂತನಾ ಗೋಷ್ಠಿ ನಡೆಯಿತು.