ಹಾನಗಲ್ಲ ಪಟ್ಟಣದಲ್ಲಿ ಬುಧವಾರ ಶ್ರೀ ಗ್ರಾಮದೇವಿಯ (ದ್ಯಾಮವ್ವ) ನೂತನ ಕಲ್ಲಿನ ದೇವಸ್ಥಾನ ಲೋಕಾರ್ಪಣೆ, ಶ್ರೀ ಗ್ರಾಮದೇವಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಿತು.
ಹಾನಗಲ್ಲ: ದೇವರ ದೈವತ್ವವು ಭಕ್ತರ ಭಕ್ತಿಯಿಂದ ಹೊರಹೊಮ್ಮುತ್ತದೆ. ಎಲ್ಲಿ ನಿಷ್ಕಲ್ಮಶ ಭಕ್ತಿ ಇರುತ್ತದೆಯೋ ಅಲ್ಲಿ ದೇವರ ಸಾನ್ನಿಧ್ಯ ಮತ್ತು ದೈವಿಕ ಶಕ್ತಿ ಜಾಗ್ರತಗೊಳ್ಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಶ್ರೀ ಗ್ರಾಮದೇವಿಯ (ದ್ಯಾಮವ್ವ) ನೂತನ ಕಲ್ಲಿನ ದೇವಸ್ಥಾನ ಲೋಕಾರ್ಪಣೆ, ಶ್ರೀ ಗ್ರಾಮದೇವಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಾವು ಸಾಮಾನ್ಯವಾಗಿ ದೇವಾಲಯಗಳಿಗೆ ಹೋದಾಗ ದೇವರೆದುರು ಏನನ್ನಾದರೂ ಬೇಡಿಕೊಳ್ಳುತ್ತೇವೆ. ಆದರೆ ಯಾವುದೇ ಷರತ್ತುಗಳಿಲ್ಲದೆ, ಏನನ್ನೂ ಅಪೇಕ್ಷಿಸದೆ ಭಗವಂತನನ್ನು ಪ್ರೀತಿಸುವುದೇ ನಿಜವಾದ ಭಕ್ತಿ. ದೇವರೊಂದಿಗೆ ನಮ್ಮ ಮನಸ್ಸು, ಹೃದಯ ಒಂದಾಗಿ ಸಂಭಾಷಣೆ ನಡೆಸಿದಾಗ ಭಕ್ತಿಯ ಅಮೃತಧಾರೆ ಹರಿಯುತ್ತದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಮ್ಮ ಮನಸ್ಸು ಮತ್ತು ಹೃದಯ ಒಂದೇ ಕಡೆ ಏಕಾಗ್ರತೆಯಿಂದ ಭಗವಂತನತ್ತ ನೆಲೆಸಿದಾಗ ಆ ಗಳಿಗೆ ಅಮೃತ ಗಳಿಗೆಯಾಗುತ್ತದೆ. ಇಂತಹ ಭಕ್ತಿಯ ಸಾಗರವನ್ನು ಉಂಟುಮಾಡುವ ನಮ್ಮ ಆರಾಧ್ಯ ದೈವ ಗ್ರಾಮದೇವತೆಯ ಕೃಪೆ ಪ್ರತಿಯೊಬ್ಬರ ಮೇಲಿರಲಿ ಎಂದು ಅವರು ಹಾರೈಸಿದರು.
ಭಕ್ತಿಯ ಸುಧೆ ಹರಿಸಿದ ದೇವಸ್ಥಾನ ನಿರ್ಮಾಣ: ಭಕ್ತರೆಲ್ಲರೂ ಸೇರಿ ನಿರ್ಮಿಸಿರುವ ಈ ಭವ್ಯ ದೇವಸ್ಥಾನದ ಕಾರ್ಯ ನಿಜಕ್ಕೂ ಪ್ರಶಂಸನೀಯ ಹಾಗೂ ಎಲ್ಲರಿಗೂ ಮೆಚ್ಚುಗೆಯಾಗುವಂತಹದ್ದು. ದೇವಸ್ಥಾನ, ಸಾರ್ವಜನಿಕ ಕೆಲಸಗಳು, ನೀರಾವರಿ ಹಾಗೂ ಇತರ ಯೋಜನೆಗಳು ಸರ್ವರಿಗೂ ಸೇರಿದಾಗ ಮಾತ್ರ ಅವುಗಳ ಮಹತ್ವ ಇಮ್ಮಡಿಯಾಗುತ್ತದೆ. ವಿರಾಟನಗರವಾಗಿರುವ ಹಾನಗಲ್‌ನಲ್ಲಿ ಭಕ್ತಿಯ ಸುಧೆಯನ್ನು ಹರಿಸಲು ಗವಿ ಸಿದ್ಧೇಶ್ವರ ಮಹಾಸ್ವಾಮಿಗಳ ಮಾತುಗಳು ಮತ್ತು ಅವರ ಸಾನ್ನಿಧ್ಯ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಅರಿವಿನ ಮಹತ್ವ: ಹಸಿದವನಿಗೆ ಅನ್ನ, ಹಸಿದಿರುವ ಮೆದುಳಿಗೆ ವೈಚಾರಿಕತೆ ಹಾಗೂ ಹೃದಯಕ್ಕೆ ಅರಿವು ಮೂಡಿಸುವುದೇ ನಿಜವಾದ ಜಗದ್ಗುರುತ್ವ ಎಂದು ಬೊಮ್ಮಾಯಿ ಬಣ್ಣಿಸಿದರು. ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರು, ಸದಸ್ಯರು ಹಾಗೂ ಉದಾರವಾಗಿ ದೇಣಿಗೆ ನೀಡಿದ ಎಲ್ಲಾ ದಾನಿಗಳಿಗೆ ಈ ಸಂದರ್ಭದಲ್ಲಿ ಅವರು ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ, ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕುಷ್ಟಗಿ ಬಿಜಕಲ್ಲ ವಿರಕ್ತಮಠದ ಶಿವಲಿಂಗ ಮಹಾಸ್ವಾಮೀಜಿ, ಅಗಡಿ ಶ್ರೀ ಕ್ಷೇತ್ರ ಆನಂದವನದ ವಿಶ್ವನಾಥ ಚಕ್ರವರ್ತಿಗಳು, ಹೂವಿನ ಹಡಗಲಿಯ ಡಾ. ಹಿರಿಯ ಶಾಂತಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶ್ರೀ ಗ್ರಾಮದೇವಿ ಜಾತ್ರಾ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಶಾಸಕರಾದ ಶ್ರೀನಿವಾಸ ಮಾನೆ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.