ಎಲೆಮರೆಯ ಕಾಯಿಯಂತೆ ಕೆಲವರು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಿರುತ್ತಾರೆ. ಅವರನ್ನು ಗುರುತಿಸಿ ಗೌರವಿಸುವ ಸಂಸ್ಕೃತಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದಂತೆ ಉಳಿದವರು ಮಾಡಬೇಕು.
ಧಾರವಾಡ:
ಸಂಘ-ಸಂಸ್ಥೆಗಳು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಗುರುತಿಸಿ ಗೌರವಿಸುವ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಲಿ ಎಂದು ನಿವೃತ್ತ ಶಿಕ್ಷಕಿ, ದತ್ತಿ ದಾನಿ ಲೂಸಿ ಸಾಲ್ಡಾನಾ ಹೇಳಿದರು.
ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘವು ಬುಧವಾರ ಇಲ್ಲಿಯ ಆಲೂರು ಭವನದಲ್ಲಿ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಹೆಮ್ಮೆಯ ಧಾರವಾಡಿಗ ಗೌರವ ಸ್ವೀಕರಿಸಿದ ಅವರು, ಎಲೆಮರೆಯ ಕಾಯಿಯಂತೆ ಕೆಲವರು ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಿರುತ್ತಾರೆ. ಅವರನ್ನು ಗುರುತಿಸಿ ಗೌರವಿಸುವ ಸಂಸ್ಕೃತಿ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದಂತೆ ಉಳಿದವರು ಮಾಡಬೇಕೆಂದರು.
ಗೌರವ ಪುರಸ್ಕೃತ ಪರಿಸರವಾದಿ ಪಂಡಿತ ಮುಂಜಿ ಮಾತನಾಡಿ, ಒಂದು ಸಮಾಜದ ಅಳಿವು-ಉಳಿವು ಪರಿಸರದ ಮೇಲೆ ನಿಂತಿದೆ. ಹೀಗಾಗಿ ಪರಿಸರ ಬಿಟ್ಟು ಮನುಷ್ಯ ಜೀವಿ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರ ಸ್ನೇಹಿ ಜೀವನ ನಡೆಸಲು ಸಲಹೆ ನೀಡಿದರು. ಪತ್ರಕರ್ತ ಬಸವರಾಜ ಹಿರೇಮಠ ಅವರಿಗೂ ಹೆಮ್ಮೆಯ ಧಾರವಾಡಿಗ ಗೌರವ ಸಮರ್ಪಣೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಅನಿಲ ಕಲಾಲ, ಪ್ರತಿಯೊಂದು ಶುಭ ಸಮಾರಂಭಕ್ಕೆ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಅಗತ್ಯ. ತಮ್ಮ ಆರೋಗ್ಯ ನಿರ್ಲಕ್ಷಿಸಿ ಸಮಾರಂಭಗಳನ್ನು ಯಶಸ್ವಿ ಮಾಡುವ ಅವರ ಬಗ್ಗೆ ಸಮಾಜದಲ್ಲಿ ಇನ್ನೂ ಹೆಚ್ಚಿನ ಗೌರವ ಸ್ಥಾನ ಇರಲಿ. ಈ ನಿಟ್ಟಿನಲ್ಲಿ ಸಂಘವು ಸದಸ್ಯರ ಹಿತಕ್ಕಾಗಿ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಸಂಘದ ಸಂಚಾಲಕರಾದ ಸುದೀಪಸಿಂಗ್ ಸಾಂಗ್ಲೀಕರ, ಚಂದ್ರಕಾಂತ ವರ್ಣೇಕರ, ಚಂದ್ರಶೇಖರ ಪಾಟೀಲ, ಓಂಕಾರ ಹೇಮಣ್ಣವರ, ಪ್ರಸನ್ ಬಿಜಾಪುರ ಅವರುಗಳಿಗೆ ವಿವಿಧ ಬಿರುದುಗಳನ್ನು ನೀಡಲಾಯಿತು. ಜತೆಗ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಹ ಪ್ರದಾನ ಮಾಡಲಾಯಿತು. ಆಜೀವ ಸದಸ್ಯರಾದ ಪೃಥ್ವಿರಾಜ್ ಮಿಸ್ಕೀನ್, ಮುರುಳಿ ಮಲಜಿ, ಶ್ರೀನಿವಾಸ ಮಲಜಿ, ಸುರೇಶ ಪೂಜಾರ, ಗುರುಸಿದ್ದೇಶ ಹಿರೇಮಠ ವೇದಿಕೆ ಮೇಲಿದ್ದರು. ಸಂಘದ ಕಾರ್ಯದರ್ಶಿ ರವಿ ಯಾಲಕ್ಕಿಶೆಟ್ಟರ, ಖಜಾಂಚಿ ಮಿಥುನ್ ಜಮದಾಳೆ, ಬಸವರಾಜ ಹೊಯಗುದ್ದಿ, ಲಕ್ಷ್ಮಣಗೌಡ ದಾನಪ್ಪಗೌಡರ, ಮಲ್ಲಿಕ ಮೇಸ್ತ್ರೀ, ಮಂಜುನಾಥ ಇಟಗಿ ನಿರ್ವಹಿಸಿದರು. ಅಮಿತ ಡ್ಯಾನಿಯಲ್ ನಿರೂಪಿಸಿದರು. ನಂತರ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.