ವಿಚ್ಛೇದನದಿಂದ ಮಕ್ಕಳ ಮೇಲೆ ದುಷ್ಟರಿಣಾಮ

KannadaprabhaNewsNetwork |  
Published : Jun 23, 2025, 11:50 PM IST
ಫೋಟೋ22ಕೆಎಸಟಿ2: ಕುಷ್ಟಗಿ ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಕಮ್ಮಟದಲ್ಲಿ ಬೆಂಗಳೂರಿನ ಪ್ಲಮ್ ಬೆನಿಫಿಟ್ಸ್ ಸಂಸ್ಥೆಯ ಮಕ್ಕಳ ಮನೋವೈಜ್ಞಾನಿಕ ತಜ್ಞೆ ಎಸ್ ರಮ್ಯಾ ಅವರು ಮಾತನಾಡಿದರು. | Kannada Prabha

ಸಾರಾಂಶ

ದಾಂಪತ್ಯದಲ್ಲಿನ ಬಿರುಕು ಹಾಗೂ ವಿಚ್ಛೇದನ ಪ್ರಕರಣಗಳು ಮಕ್ಕಳಲ್ಲಿ ಕಲಿಕೆಯಲ್ಲಿ ಹಿಂದುಳಿಯುವಿಕೆ, ಹಿಂಸಾತ್ಮಕ ಪ್ರವೃತ್ತಿ ಹಾಗೂ ಮಾನಸಿಕ ರೋಗಗಳಿಗೆ ಕಾರಣವಾಗುತ್ತಿವೆ. ಇಂತಹ ಸಮಸ್ಯೆಗಳನ್ನು ಎದುರಿಸಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗಣವಾಗುತ್ತಿದ್ದಾರೆ.

ಕುಷ್ಟಗಿ:

ಪಾಲಕರಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಕಲಿಕೆಯಲ್ಲಿರುವ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಶೈಕ್ಷಣಿಕ ರಂಗಕ್ಕೆ ಸವಾಲಾಗಿದೆ ಎಂದು ಬೆಂಗಳೂರಿನ ಪ್ಲಮ್ ಬೆನಿಫಿಟ್ಸ್ ಸಂಸ್ಥೆಯ ಮಕ್ಕಳ ಮನೋವೈಜ್ಞಾನಿಕ ತಜ್ಞೆ ಎಸ್. ರಮ್ಯಾ ಹೇಳಿದರು.

ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆಯಲ್ಲಿ ಮನೋವೈಜ್ಞಾನಿಕ ವಿಷಯದನ್ವಯ ಆಯೋಜಿಸಿದ್ದ ಕಮ್ಮಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾಂಪತ್ಯದಲ್ಲಿನ ಬಿರುಕು ಹಾಗೂ ವಿಚ್ಛೇದನ ಪ್ರಕರಣಗಳು ಮಕ್ಕಳಲ್ಲಿ ಕಲಿಕೆಯಲ್ಲಿ ಹಿಂದುಳಿಯುವಿಕೆ, ಹಿಂಸಾತ್ಮಕ ಪ್ರವೃತ್ತಿ ಹಾಗೂ ಮಾನಸಿಕ ರೋಗಗಳಿಗೆ ಕಾರಣವಾಗುತ್ತಿವೆ. ಇಂತಹ ಸಮಸ್ಯೆಗಳನ್ನು ಎದುರಿಸಿರುವ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗಣಗೊಳ್ಳುತ್ತಿರುವುದು ಆತಂಕಕಾರಿ. ಈ ಕುರಿತು ಪಾಲಕರು ಹಾಗೂ ಶಿಕ್ಷಕರಿಗೆ ತಿಳಿವಳಿಕೆ ಇಲ್ಲದಿರುವುದು ಪರಿಸ್ಥಿತಿಯನ್ನು ಬಿಗಡಾಯಿಸಿದ್ದು ಇದು ಮುಂದುವರಿದರೆ ಶಾಶ್ವತವಾಗಿ ಚಿಕ್ಕ ಮಕ್ಕಳನ್ನು ಕಳೆದುಕೊಳ್ಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿ ಪ್ರಕಾರ ದೇಶದ 13% ಮಕ್ಕಳ ವರ್ತನೆ, ಭಾವನೆಗಳಲ್ಲಿ ಆತಂಕಕಾರಿ ಬದಲಾವಣೆಯಾಗಿದೆ. ಯಾರೊಂದಿಗೂ ಮಾತನಾಡದಿರುವುದು, ಖಿನ್ನತೆ, ತಾತ್ಸಾರ, ಹಿಂಸಾತ್ಮಕತೆ, ಅನಿಯಂತ್ರಿತ ಚಟುವಟಿಕೆ ಮಕ್ಕಳಲ್ಲಿ ಹೆಚ್ಚುತ್ತಿದೆ. ಇಂತಹ ಮಕ್ಕಳನ್ನು ನಿರ್ವಹಿಸುವಲ್ಲಿ ಶಿಕ್ಷಕರು ವಿಶೇಷ ತರಬೇತಿ ಪಡೆಯಬೇಕು. ಇಂತಹ ಮಕ್ಕಳ ಭದ್ರ ಭವಿಷ್ಯಕ್ಕಾಗಿ ವಿಚ್ಛೇದನ ಪಡೆದ ಪಾಲಕರ ಪಾತ್ರವೂ ನಿರ್ಣಾಯಕವಾಗಿದೆ ಎಂದು ಹೇಳಿದರು.

ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು ಆಪ್ತಸಮಾಲೋಚಕರ ಸಲಹೆ ಪಡೆಯುವುದು ಅನಿವಾರ್ಯವಾಗಿದೆ. ಶಿಕ್ಷಣ ಸಂಸ್ಥೆಗಳು ಮನೋವೈಜ್ಞಾನಿಕ ತಜ್ಞರನ್ನು ಹೊಂದುವುದು ಅಗತ್ಯ. ಮಕ್ಕಳ ಸಮಸ್ಯೆಗಳು ನೇರವಾಗಿ ಶಿಕ್ಷಕರ ಗಮನಕ್ಕೆ ಬರುವುದರಿಂದ ಶಿಕ್ಷಕರು ವಿಶೇಷ ತರಬೇತಿ ಪಡೆಯುವುದು ಅಪೇಕ್ಷಣೀಯ ಎಂದರು.

ಸಮಸ್ಯೆಗಳ ಗುರುತಿಸುವಿಕೆ, ಮಕ್ಕಳಿಗೆ ಸ್ಪಂದನೆ ಹಾಗೂ ಪರಿಹಾರಕ್ಕಾಗಿ ತಜ್ಞರ ಹತ್ತಿರ ಕಳುಹಿಸುವುದು ಶಿಕ್ಷಕರ ಜವಾಬ್ದಾರಿಯಾಗಬೇಕು. ಮನೋವೈಜ್ಞಾನಿಕ ಸಮಸ್ಯೆಯಿಂದ ಬಳಲುತ್ತಿರುವ ಪಾಲಕರು ಹಾಗೂ ಮಕ್ಕಳನ್ನು ನಿರ್ವಹಿಸುವ ಕುರಿತು ಸೂತ್ರಗಳನ್ನು ಶಿಕ್ಷಕರಿಗೆ ತಿಳಿಸಿಕೊಟ್ಟರು.

ಈ ವೇಳೆ ಎಸ್‌ವಿಸಿ ಶಿಕ್ಷಣ ಸಂಸ್ಥೆಗಳ ಸಿಇಒ ಡಾ. ಜಗದೀಶ ಅಂಗಡಿ, ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಮಹದೇವ ಮಧಾಲೆ, ಶೈಕ್ಷಣಿಕ ನಿರ್ದೇಶಕ ಭೀಮರಾವ್ ಕುಲಕರ್ಣಿ, ಪ್ರಾಚಾರ್ಯ ಭೀಮಸೇನ ಆಚಾರ್ಯ ಹಾಗೂ ಪಿಯು ವಿಭಾಗದ ಯೋಜನಾ ನಿರ್ದೇಶಕ ಅರುಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌