ಕನ್ನಡಪ್ರಭ ವಾರ್ತೆ ಭದ್ರಾವತಿ
ದಾಂಪತ್ಯದಲ್ಲಿ ಹಿಂದಿನ ಪದ್ಧತಿಗಳ ಅನುಸರಣೆಯಿಂದ ಹೊಂದಾಣಿಕೆ ಸಾಧ್ಯ. ಆದರೆ ಆಧುನಿಕತೆ ಹೆಸರಿನಿಂದ ಅವಾಂತರ ಸೃಷ್ಟಿಯಾಗಿ ವಿಚ್ಛೇದನ ಹೆಚ್ಚುತ್ತಿದ್ದು, ವಿವಾಹ ವಿಚ್ಛೇದನ ಎಂಬುದು ಸಮಾಜದ ಅನಿಷ್ಟ ಪದ್ಧತಿ. ಹಿಂದೂ ಧರ್ಮದ ವಿವಾಹ ಪದ್ಧತಿಗಳ ಆಶಯವನ್ನು ದಂಪತಿಗಳು ಅರಿಯಬೇಕೆಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಹೇಳಿದರು.ವಿಶ್ವ ಹಿಂದೂ ಪರಿಷತ್ ಹಾಗೂ ವಿಶ್ವಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ನಗರದ ಸಿದ್ಧಾರೂಡನಗರದ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ೪೦ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.ವಿಶ್ವ ಹಿಂದೂ ಪರಿಷತ್ ಉಚಿತ ಸಾಮೂಹಿಕ ವಿವಾಹಗಳ ಕಳೆದ ೪೦ ವರ್ಷದಿಂದ ನಿರಂತರ ಆಯೋಜಿಸುತ್ತಿದ್ದು, ಈ ಮೂಲಕ ಹಿಂದೂ ಧರ್ಮದ ಆಚರಣೆಗಳ ಎತ್ತಿ ಹಿಡಿಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ವ ಧರ್ಮ, ಜಾತಿ, ಜನಾಂಗದ ಆಶೀರ್ವಾದ ಲಭ್ಯ:ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಬಿ.ಕೆ.ಜಗನ್ನಾಥ್, ಕುಟುಂಬಗಳು ಕೂಡಿ ನಡೆಸುವ ವಿವಾಹಗಳಿಗಿಂತ ಸಾಮೂಹಿಕ ವಿವಾಹಗಳು ಹೆಚ್ಚು ಶಕ್ತಿಶಾಲಿಯಾದ್ದು. ಸಾಮೂಹಿಕ ವಿವಾಹಗಳಿಂದ ಸರ್ವ ಧರ್ಮ ಮತ್ತು ಸರ್ವ ಜಾತಿ, ಜನಾಂಗದವರ ಆರ್ಶೀರ್ವಾದ ಲಭಿಸುತ್ತದೆ. ಆದ್ದರಿಂದ ಸಾಮೂಹಿಕ ವಿವಾಹಗಳು ಹೆಚ್ಚೆಚ್ಚು ನಡೆಸಬೇಕಾದ ಅಗತ್ಯವಿದೆ. ಸಾಮೂಹಿಕ ವಿವಾಹಗಳು ಬಡವರು- ಶ್ರೀಮಂತರು ಎಂಬ ತಾರತಮ್ಯವಿಲ್ಲದೆ ಎಲ್ಲರೂ ಸಾಮೂಹಿಕ ವಿವಾಹಗಳಿಗೆ ಆದ್ಯತೆ ನೀಡುವುದರಿಂದ ಸಮಾಜದಲ್ಲಿ ಪರಸ್ಪರ ಅನ್ಯೋನ್ಯತೆ ಮೂಡಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಮಾತನಾಡಿ, ವಿವಾಹ ಸಮಾರಂಭ ನಡೆಸುವುದು ಸುಲಭವಲ್ಲ. ಸಾಮೂಹಿಕ ವಿವಾಹಗಳಿಂದ ವೆಚ್ಚಕ್ಕೆ ಕಡಿವಾಣ ಬೀಳುತ್ತದೆ ಎಂಬುದಕ್ಕಿಂತಲೂ ಸಮಾಜದ ಸಕಲರ ಆರ್ಶೀವಾದದೊಂದಿಗೆ ದಾಂಪತ್ಯ ಜೀವನಕ್ಕೆ ಪ್ರವೇಶಿಸುವುದು ದಂಪತಿಗಳಿಗೆ ಶುಭವಾದ್ದು ಎಂದರು.ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ, ಸಮಾಜ ಸೇವಕ ವೆಂಕಟರಮಣ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಉಚಿತ ಸಾಮೂಹಿಕ ವಿವಾಹ ಸಮಿತಿ ಸಲಹೆಗಾರ ಡಾ. ಬಿ.ಜಿ ಧನಂಜಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಷತ್ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಹಾ. ರಾಮಪ್ಪ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ:ಎರಡು ಜೊತೆ ಸಾಮೂಹಿಕ ವಿವಾಹದಲ್ಲಿ ಡಾ. ಆರ್. ಅಮೂಲ್ಯ ಮತ್ತು ಸಿ.ಎಂ.ಅಭಿಷೇಕ್ ಹಾಗೂ ಎ.ಅಶ್ವಿತಾ ಮತ್ತು ಆರ್. ರವಿಕುಮಾರ್ ನೂತನ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಸರ್ಕಾರಿ ಶಾಲೆ ಹಾಗೂ ಕಾಲೇಜಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನಿಸಿ ಅಭಿನಂದಿಸಲಾಯಿತು. ಅಲ್ಲದೆ ಸಾಮೂಹಿಕ ವಿವಾಹಕ್ಕೆ ಸಹಕರಿಸಿದ ದಾನಿಗಳು, ಗಣ್ಯರ ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ಸದಸ್ಯ ಚನ್ನಪ್ಪ, ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ಗೌರವಾಧ್ಯಕ್ಷ ಕೃಷ್ಣಮೂರ್ತಿ ಸೋಮಯಾಜಿ, ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್, ತರುಣಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಶಿವಕುಮಾರ್, ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಚಂದ್ರಶೇಖರ್, ನಾರಾಯಣ ಜಿ. ವರ್ಣೀಕರ್, ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಪಿ. ಮಂಜುನಾಥ ರಾವ್ ಪವಾರ್, ಎನ್.ಎಸ್ ಮಹೇಶ್ವರಪ್ಪ, ಬಜರಂಗದಳ ಜಿಲ್ಲಾ ಸಂಚಾಲಕ ರಾಘವನ್ ವಡಿವೇಲು, ಉದ್ಯಮಿ ಸುಧಾಕರ ಶೆಟ್ಟಿ ಸೇರಿ ಇನ್ನಿತರರಿದ್ದರು. ಸಂಸ್ಕಾರಕ್ಕೆ ಆದ್ಯತೆ ನೀಡಿಸತಿ ಮತ್ತು ಪತಿ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ದಂಪತಿ ಆಯ್ಕೆಯಲ್ಲಿ ಸಂಸ್ಕಾರಕ್ಕಿಂತ ಹಣ-ಅಂತಸ್ತು ಪ್ರಮುಖ ಪಾತ್ರವಹಿಸುತ್ತಿದೆ. ಅನೇಕ ದಾಂಪತ್ಯ ಕೆಲವೇ ವರ್ಷಗಳಲ್ಲಿ ಮುರಿದು ಬೀಳುತ್ತಿರುವುದರಿಂದ ಲಕ್ಷಾಂತರ ರುಪಾಯಿ ವೆಚ್ಚ ಮಾಡುವ ಪೋಷಕರಿಗೂ ನೆಮ್ಮದಿ ಇರುವುದಿಲ್ಲ. ದಂಪತಿಗೂ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಸಂಸ್ಕಾರಕ್ಕೆ ಆದ್ಯತೆ ಹೆಚ್ಚಾಗಬೇಕು.
ಶ್ರೀ ರಾಚೋಟೇಶ್ವರ ಸ್ವಾಮೀಜಿ, ಬಿಳಿಕಿ ಹಿರೇಮಠ