ಪಶ್ಚಿಮ ಘಟ್ಟದ ಅಭಿವೃದ್ಧಿ ಯೋಜನೆಗೆ ಆನೆ ಕಾರಿಡಾರ್‌ ಬಲಿ!

KannadaprabhaNewsNetwork |  
Published : May 20, 2024, 01:41 AM ISTUpdated : May 20, 2024, 12:20 PM IST
ಶಿರಾಡಿ ಬಳಿ ಆನೆ ಕಾರಿಡಾರ್‌ಗಾಗಿ ಮೇಲ್ಭಾಗದಲ್ಲಿ ರಸ್ತೆ ಹಾದುಹೋಗುತ್ತಿರುವುದು | Kannada Prabha

ಸಾರಾಂಶ

ಆನೆ ಕಾರಿಡಾರ್‌ನ ಈ ಪ್ರದೇಶಗಳಲ್ಲಿ ಆನೆಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಈ ತಡೆಗೋಡೆಗಳನ್ನು ಹಾರಿ ಅಥವಾ ದಾಟಿ ಆನೆಗಳಿಗೆ ಹೆದ್ದಾರಿ ದಾಟಲು ಸಾಧ್ಯವಾಗುತ್ತಿಲ್ಲ. ಇದುವೇ ಆನೆಗಳ ಪಥ ಬದಲಾವಣೆಗೆ ಕಾರಣವಾಗಿದೆ.

ಆತ್ಮಭೂಷಣ್‌

 ಮಂಗಳೂರು :  ದ.ಕ.ಜಿಲ್ಲೆಯಲ್ಲಿ ಆನೆಗಳು ನಾಡಿಗೆ ದಾಂಗುಡಿ ಇಡುತ್ತಿರುವ ಹಿಂದೆ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ಜಲ ವಿದ್ಯುತ್‌ ಯೋಜನೆಗಳು ಆನೆ ಕಾರಿಡಾರ್‌ನ್ನು ಆಪೋಶನ ಮಾಡಿರುವುದು ಕಂಟಕವಾಗಿ ಪರಿಣಿಸಿತೇ?

ಎಲ್ಲರನ್ನು ಕಾಡಿರುವ ಈ ಪ್ರಶ್ನೆಗೆ ಪರಿಸರ ಸಂಘಟನೆಗಳು ಹೌದು ಎನ್ನುತ್ತಿವೆ. ಕಳೆದ 10-15 ವರ್ಷಗಳಲ್ಲಿ ಇಲ್ಲದ ಕಾಡಾನೆಗಳು ನಾಡಿಗೆ ಲಗ್ಗೆ ಇಡುತ್ತಿರುವ ಪ್ರಕರಣ ಕಳೆದ ಎರಡು ವರ್ಷಗಳಿಂದ ಜಾಸ್ತಿಯಾಗುತ್ತಿದೆ. ಇದರ ಹಿಂದೆ ಪರಿಸರ ಅಭಿವೃದ್ಧಿ ಯೋಜನೆಗಳ ಮಾರಕ ಪರಿಣಾಮಗಳನ್ನು ಇವು ಬೊಟ್ಟು ಮಾಡುತ್ತಿವೆ. ಕಳೆದ ವರ್ಷ ಆನೆ ದಾಳಿಗೆ ನೆಲ್ಯಾಡಿಯಲ್ಲಿ ಇಬ್ಬರು ಹಾಗೂ ಶಿರಾಡಿಯಲ್ಲಿ ಓರ್ವ ಮೃತಪಟ್ಟ ಘಟನೆ ನಡೆದಿದೆ. ಈ ನಡುವೆ ಪಶ್ಚಿಮ ಘಟ್ಟ ತಪ್ಪಲಿನ ಕೃಷಿ ತೋಟಗಳಿಗೆ ಆನೆಗಳ ಹಾವಳಿ ವಿಪರೀತ ಹಂತಕ್ಕೆ ತಲುಪಿದೆ.

ಆನೆ ಕಾರಿಡಾರ್‌ ನಾಶ ಹೇಗೆ?: ಮಂಗಳೂರು-ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ.ರೋಡ್‌-ಗುಂಡ್ಯ ವರೆಗೆ ನಾಲ್ಕು ಪಥದ ಕಾಂಕ್ರಿಟೀಕರಣ ಕಾಮಗಾರಿ ನಡೆಯುತ್ತಿದೆ. ಇನ್ನೊಂದೆಡೆ ಶಿರಾಡಿ ಘಾಟ್‌ ಪೂರ್ತಿ ಜಲವಿದ್ಯುತ್‌ ಯೋಜನೆಗಳು ಆವರಿಸಿದೆ. ಇವರೆಡು ಯೋಜನೆಗಳು ಆನೆ ಕಾರಿಡಾರ್‌ನ್ನು ಹೊಸಕಿ ಹಾಕಿದೆ ಎಂಬುದು ಪರಿಸರ ಸಂಘಟನೆಗಳ ಆರೋಪ.

ಕಾಂಕ್ರಿಟೀಕರಣ ಕಾಮಗಾರಿ ವೇಳೆ ಗುಡ್ಡ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಶಿರಾಡಿ ಬಳಿಯ ಕೊಡ್ಯಕಲ್ಲು, ಉದನೆ ಬಳಿ ಪರರೊಟ್ಟಿ, ರೆಖ್ಯದ ನೇಲ್ಯಡ್ಕ ಬಳಿ, ಲಾವತ್ತಡ್ಕ, ಪೆರಿಯಶಾಂತಿ ಸೇರಿದಂತೆ 15ಕ್ಕೂ ಅಧಿಕ ಕಡೆಗಳಲ್ಲಿ ಕಾಂಕ್ರಿಟ್‌ ತಡೆಗೋಡೆ ರಚಿಸಲಾಗಿದೆ. ಕೆಲವು ಕಡೆಗಳಲ್ಲಿ ಆಳೆತ್ತರದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಆನೆ ಕಾರಿಡಾರ್‌ನ ಈ ಪ್ರದೇಶಗಳಲ್ಲಿ ಆನೆಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಈ ತಡೆಗೋಡೆಗಳನ್ನು ಹಾರಿ ಅಥವಾ ದಾಟಿ ಆನೆಗಳಿಗೆ ಹೆದ್ದಾರಿ ದಾಟಲು ಸಾಧ್ಯವಾಗುತ್ತಿಲ್ಲ. ಇದುವೇ ಆನೆಗಳ ಪಥ ಬದಲಾವಣೆಗೆ ಕಾರಣವಾಗಿದೆ.

ಜಲ ವಿದ್ಯುತ್‌ ಯೋಜನೆಗಳ ಕಂಟಕ: ರಾಷ್ಟ್ರೀಯ ಹೆದ್ದಾರಿ ಸಮೀಪವೇ ಗುಂಡ್ಯ ಹೊಳೆ, ಕೆಂಪು ಹೊಳೆಗಳು ಹೆಚ್ಚಾಗಿ ವರ್ಷಪೂರ್ತಿ ಹರಿಯುತ್ತಿರುತ್ತವೆ. ಶಿರಾಡಿ ಘಾಟಿಯುದ್ಧಕ್ಕೂ ಆನೆಗಳ ಕಾರಿಡಾರ್‌ ಈ ಹೊಳೆಯನ್ನು ದಾಟಿಯೇ ಸಾಗುತ್ತಿರುತ್ತದೆ. ಆದರೆ ಜಲ ವಿದ್ಯುತ್‌ ಯೋಜನೆಗಳು ಆನೆ ಕಾರಿಡಾರ್‌ನ್ನೇ ಮರೆ ಮಾಚಿವೆ.

ಕಳೆದ ಎಂಟತ್ತು ವರ್ಷಗಳಿಂದ ಈ ಹೊಳೆಗಳಿಗೆ ಜಲ ವಿದ್ಯುತ್‌ ಯೋಜನೆಗಳು ಧುಮ್ಮುಕ್ಕುತ್ತಿವೆ. ಆರಂಭದಲ್ಲಿ ಒಂದೆರಡಕ್ಕೆ ಸೀಮಿತವಾಗಿದ್ದ ಜಲ ವಿದ್ಯುತ್‌ ಯೋಜನೆಗಳು ಈಗ ಏಳೆಂಟು ತಲುಪಿವೆ. ಜಲ ವಿದ್ಯುತ್‌ಗೆ ಅಣೆಕಟ್ಟೆ ನಿರ್ಮಿಸಿದರೆ ಕನಿಷ್ಠ ಒಂದು ಕಿ.ಮೀ. ದೂರದ ವರೆಗೂ ಹೊಳೆಯಲ್ಲಿ ನೀರು ಸಂಗ್ರಹವಾಗಿರುತ್ತದೆ. ಮತ್ತೆ ವಿದ್ಯುತ್‌ ಕಂಪನಿಗಳ ಗೇಟು, ಅಲ್ಲಲ್ಲಿ ದೀಪಗಳು ಸದಾ ರಾತ್ರಿಯನ್ನು ಬೆಳಗುತ್ತಿರುತ್ತವೆ. ಹೀಗಾಗಿ ಬೇಸಗೆಯಲ್ಲೂ ಆನೆಗಳಿಗೆ ಹೊಳೆ ದಾಟಿ ಸಂಚರಿಸಲು ಆಗುತ್ತಿಲ್ಲ. ಪರ್ಯಾಯ ದಾರಿಯೂ ಸಿಗದೆ, ಬೇಕಾದಷ್ಟು ಆಹಾರವೂ ಸಾಧ್ಯವಾಗದೆ ಆನೆಗಳು ಸಹಜವಾಗಿ ನಾಡಿನತ್ತ ಮುಖ ಮಾಡುತ್ತಿವೆ ಎನ್ನುವುದು ಪರಿಸರ ಸಂಘಟನೆಗಳ ವಾದ.

ಕೃತಕ ಆನೆಕಾರಿಡಾರ್‌ ನಿರ್ಮಾಣ: ಆನೆ ಕಾರಿಡಾರ್‌ ನಾಶವಾದ ಹಿನ್ನೆಲೆಯಲ್ಲಿ ಹೆದ್ದಾರಿಯ ಕಾಮಗಾರಿ ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಐಎ)ಮೂರ್ನಾಲ್ಕು ಕಡೆ ಕೃತಕವಾಗಿ ಆನೆಕಾರಿಡಾರ್‌ ನಿರ್ಮಿಸಿದೆ.

ಪ್ರಸಕ್ತ ಹೆದ್ದಾರಿ ಹಾದುಹೋಗುವ ಅಡ್ಡಹೊಳೆ, ಪೆರಿಯಶಾಂತಿಯ ಮಣ್ಣಗುಂಡಿ ಹಾಗೂ ಉದನೆಯಲ್ಲಿ ಆನೆ ಕಾರಿಡಾರ್‌ ನಿರ್ಮಿಸುತ್ತಿದೆ. ಅಂದರೆ ಅಂತಹ ಕಡೆಗಳಲ್ಲಿ ಹೆದ್ದಾರಿಯನ್ನು ಮೇಲ್ಸೇತುವೆ ಮಾದರಿಯಲ್ಲಿ ಎತ್ತರದಲ್ಲಿ ನಿರ್ಮಿಸಿದೆ. ಆದರೆ ಈ ಕಾರಿಡಾರ್‌ನಲ್ಲಿ ಆನೆಗಳು ಸಂಚರಿಸಬೇಕಾದರೆ ಬಹಳವೇ ವರ್ಷ ಬೇಕು. ಯಾಕೆಂದರೆ, ತಮ್ಮ ಕಾರಿಡಾರ್‌ ಬಿಟ್ಟು ಬದಲಿ ಕಾರಿಡಾರ್‌ನ್ನು ಆನೆಗಳು ಸುಲಭದಲ್ಲಿ ಕಂಡುಕೊಳ್ಳುವುದಿಲ್ಲ. ಅಲ್ಲಿವರೆಗೆ ಆನೆಗಳ ನಾಡಿನ ದಾಳಿ ಸಹಿಸಿಕೊಳ್ಳಬೇಕಷ್ಟೆ ಎಂಬುದು ವನ್ಯಜೀವಿ ತಜ್ಞರ ಅಂಬೋಣ.

ಕಳೆದ 15 ವರ್ಷಗಳಿಂದ ಗುಂಡ್ಯ-ಮಾರನಹಳ್ಳಿ ವ್ಯಾಪ್ತಿಯಲ್ಲಿ ಜಲವಿದ್ಯುತ್‌ ಯೋಜನೆಗಳು ಆರಂಭವಾಗಿ ಅಪಾರ ಪ್ರಮಾಣದ ನೀರನ್ನು ಹೊಳೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದ ಅಲ್ಲಿ ಆನೆಗಳಿಗೆ ಹೊಳೆ ದಾಟಲು ಸಾಧ್ಯವಾಗುತ್ತಿಲ್ಲ. ಆಗ ಆನೆಗಳು ಪಥ ಬದಲಿಸಿ ನಾಡಿಗೆ ಬರುತ್ತಿವೆ. ಇದಲ್ಲದೆ ಹೆದ್ದಾರಿ ಕಾಮಗಾರಿ ವೇಳೆ ರಕ್ಷಣಾತ್ಮಕ ಕಾರಣಕ್ಕೆ ತಡೆಗೋಡೆ ನಿರ್ಮಿಸಿರುವುದೂ ಆನೆಗಳ ಸಹಜ ಸಂಚಾರಕ್ಕೆ ತೊಡಕಾಗಿದೆ. ಇದಕ್ಕೆ ಪರಿಸರ ವಿರೋಧಿ ಯೋಜನೆಗಳಿಗೆ ಅವಕಾಶ ನೀಡದೇ ಇರುವುದೇ ಪರಿಹಾರ.

-ಕಿಶೋರ್‌ ಶಿರಾಡಿ, ಸಂಚಾಲಕರು, ಮಲೆನಾಡು ಜನಹಿತರಕ್ಷಣಾ ವೇದಿಕೆಪಶ್ಚಿಮ ಘಟ್ಟಗಳಲ್ಲಿ ಕೈಗೊಳ್ಳುತ್ತಿರುವ ಅಭಿವೃದ್ಧಿ ಯೋಜನೆಗಳು ಸಹಜ ಆನೆ ಕಾರಿಡಾರ್‌ಗೆ ಅಡ್ಡಿ ಉಂಟುಮಾಡಿದೆ. ಈಗಾಗಲೇ ಎನ್‌ಎಚ್‌ಐಎ ಮೂರು ಆನೆಕಾರಿಡಾರ್‌ ರಚಿಸಿದರೂ, ಮತ್ತೆ ಎರಡು ಆನೆ ಕಾರಿಡಾರ್‌ ರಚಿಸುವಂತೆ ನಾವು ಕೋರಿದ್ದೆವು. ಆದರೆ ಮೂಲ ವಿನ್ಯಾಸ ಪ್ರಕಾರವೇ ಕಾಮಗಾರಿ ನಡೆಯುವುದರಿಂದ ನಮ್ಮ ಕೋರಿಕೆಯನ್ನು ಎನ್‌ಎಚ್‌ಐಎ ತಿರಸ್ಕರಿಸಿದೆ. ಪರ್ಯಾಯ ಮಾರ್ಗ ಅಂದರೆ ಹೊಸ ಕಾರಿಡಾರ್‌ ಮೂಲಕ ಆನೆಗಳು ಸಂಚರಿಸಬೇಕಾದರೆ ವರ್ಷಗಳೇ ಬೇಕಾದೀತು.

-ಆ್ಯಂಟನಿ ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!