400 ಸದಸ್ಯರ ಬಲ । 330 ಚಾಲಕರ ಮತ ಚಲಾವಣೆ
ಬೇಲೂರು: ಹೊಯ್ಸಳ ಆಟೋ ಮತ್ತು ಚಾಲಕರ ಸಂಘಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷರಾಗಿ ಬಿ.ಎನ್. ದಿವಾಕರ್ (ದೀಪು) ಭರ್ಜರಿಯಾಗಿ ಜಯ ಗಳಿಸಿದರು. ತಾಲೂಕಿನ ಹೊಯ್ಸಳ ಆಟೋ ಮತ್ತು ಚಾಲಕರ ಸಂಘಕ್ಕೆ ಈ ಹಿಂದೆ ಇದ್ದ ಜಯರಾಂ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಮೂರು ವರ್ಷಗಳ ಅವಧಿಗೆ ನಡೆದ ಚುನಾವಣೆಗೆ ಅಧ್ಯಕ್ಷಸ್ಥಾನಕ್ಕೆ ಮಾಜಿ ಅಧ್ಯಕ್ಷ ಲೊಕೇಶ್ (ರಾಮೇಗೌಡ) ಹಾಗೂ ದಿವಾಕರ್ (ದೀಪು) ಇಬ್ಬರು ನಾಮಪತ್ರ ಸಲ್ಲಿಸಿದ್ದರು.೪೦೦ ಜನ ಸದಸ್ಯರ ಬಲ ಇರುವ ಚಾಲಕರ ಸಂಘದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಜೂನಿಯರ್ ಕಾಲೇಜು ರಂಗಮಂದಿರದಲ್ಲಿ ಚುನಾವಣೆ ನಡೆದು ಒಟ್ಟು ೩೩೦ ಆಟೋ ಚಾಲಕರು ಮತ್ತು ಮಾಲೀಕರು ಮತ ಚಲಾಯಿಸಿದರು.
ನಂತರ ಮತ ಏಣಿಕೆಯಲ್ಲಿ ಲೊಕೇಶ್ ಅವರಿಗೆ ೧೪೯ ಮತಗಳು ಪಡೆದರೆ ದೀಪು ಅವರು ೧೭೮ ಮತಗಳನ್ನು ಪಡೆಯುವ ಮೂಲಕ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.ಇದರಲ್ಲಿ ಮೂರು ಮತಗಳು ನೋಟ ಮತಗಳಾಗಿದ್ದವು ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದೀಪು ಮಾತನಾಡಿ, ‘ಕಿರಿಯ ವಯಸ್ಸಿನವನಾದ ನನಗೆ ಬಹದೊಡ್ಡ ಸ್ಥಾನವನ್ನು ನನ್ನ ಮೇಲೆ ನಂಬಿಕೆ ಇಟ್ಟು ನನ್ನ ಹಿರಿಯರು ಹಾಗೂ ಸ್ನೇಹಿತರು ನೀಡಿದ್ದೀರಿ. ನಿಮ್ಮ ಆಶೋತ್ತರಗಳಿಗೆ ಸ್ಪಂದನೆ ನೀಡುವುದರ ಜತೆಗೆ ನಿಮ್ಮೆಲ್ಲರ ಸಹಕಾರ ಹಿರಿಯರ ಹಾಗೂ ಮಾಜಿ ಅಧ್ಯಕ್ಷರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಲ್ಲರೂ ಸಹ ಗೆಲುವಿಗೆ ಸಹಕರಿಸಿದ ಎಲ್ಲಾ ನನ್ನ ಆಟೋ ಚಾಲಕರ ಹಾಗೂ ಮಾಲೀಕರಿಗೆ ಚಿರ ಋಣಿಯಾಗಿದ್ದೇನೆ’ ಎಂದರು.ಈ ವೇಳೆ ಎಲ್ಲಾ ಆಟೋ ಚಾಲಕರು ಹಾಗೂ ಮಾಲಿಕರು ಆಟೋದಲ್ಲಿ ಮೆರವಣಿಗೆ ನೆಡೆಸಿದರು. ಈ ಸಂದರ್ಭದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಹೊಯ್ಸಳ ಆಟೋ ಮತ್ತು ಚಾಲಕರ ಸಂಘದ ನೂತನ ಅಧ್ಯಕ್ಷರನ್ನು ಸಂಘದ ಸದಸ್ಯರು ಅಭಿನಂದಿಸಿದರು.