ಕನ್ನಡಪ್ರಭ ವಾರ್ತೆ ಮಂಗಳೂರು
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಭ್ರಮ ಮನೆಮಾಡಿದೆ. ಒಂದೆಡೆ ದೀಪಾವಳಿಗೆ ಹಸಿರು ಪಟಾಕಿಗಳ ಖರೀದಿ ಭರಾಟೆ ಜೋರಾಗಿದ್ದರೆ, ಇನ್ನೊಂದೆಡೆ ಗೂಡುದೀಪಗಳು, ಹಣತೆಗಳು ಎಲ್ಲೆಡೆ ರಾರಾಜಿಸುತ್ತಿವೆ.ಹಬ್ಬದ ಹಿನ್ನೆಲೆಯಲ್ಲಿ ಹೂ ಹಣ್ಣು, ತರಕಾರಿ, ದಿನಸಿ ಪದಾರ್ಥಗಳ ವ್ಯಾಪಾರ ಗರಿಗೆದರಿದ್ದರೆ, ವಾಹನ ಖರೀದಿ, ಗೃಹೋಪಯೋಗಿ ವಸ್ತುಗಳ ಖರೀದಿ ಕೂಡ ಹೆಚ್ಚಳವಾಗಿದೆ.
ವೈವಿಧ್ಯಮಯ ಗೂಡುದೀಪಗಳು:ನಗರದ ಮಾರುಕಟ್ಟೆಗೆ ತರಹೇವಾರಿ ಗೂಡುದೀಪಗಳು ಬಂದಿದ್ದು, ಈಗಾಗಲೇ ಬಹುತೇಕ ಮಂದಿ ಖರೀದಿ ಮಾಡಿ ಮನೆಗಳಲ್ಲಿ ಬೆಳಗಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿಶೇಷತೆಯಿಂದ ಕೂಡಿದ ಗೂಡು ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸ್ಥಳೀಯ ಸೇರಿದಂತೆ ಮುಂಬೈ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ಕಡೆಗಳಿಂದ ಗೂಡು ದೀಪಗಳು ಮಾರಾಟಕ್ಕೆ ಲಭ್ಯ.ಬಟ್ಟೆ ಗೂಡುದೀಪಗಳಿಗೆ ಬೇಡಿಕೆ:
ಈ ಬಾರಿ ಬಟ್ಟೆಯ ಗೂಡುದೀಪಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಬಟ್ಟೆಯ ಎಂಬ್ರಾಯ್ಡರಿ ಕಸೂತಿಯ ಗೂಡುದೀಪಗಳೂ ಮಾರುಕಟ್ಟೆಗೆ ಬಂದಿವೆ. ವಿಶೇಷವೆಂದರೆ ಈ ಬಾರಿ ಪ್ಲಾಸ್ಟಿಕ್ ಗೂಡುದೀಪಗಳಿಗೆ ಬೇಡಿಕೆ ಕಡಿಮೆ ಇದೆ ಎಂದು ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.ಸುಮಾರು 20 ರು.ನಿಂದ ಸಾವಿರಗಟ್ಟಲೆ ರುಪಾಯಿವರೆಗಿನ ಗೂಡುದೀಪಗಳು ಮಾರುಕಟ್ಟೆಯಲ್ಲಿವೆ. ವೈವಿಧ್ಯಮಯ ಹಣತೆ:ಗೂಡುದೀಪದ ಜತೆ ಹಣತೆಗೂ ಬೇಡಿಕೆ ಕಂಡುಬಂದಿದೆ. ವಿವಿಧ ನಮೂನೆಯ, ಗಾತ್ರದ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಮಣ್ಣಿನ ಹಣತೆಗಳ ಬೆಲೆ ಕಡಿಮೆ ಇದ್ದರೆ, ಪಿಂಗಾಣಿ ಹಣತೆಗಳು ತುಸು ದುಬಾರಿ. ಮಣ್ಣಿನ ಹಣತೆಯಲ್ಲೂ ವಿವಿಧ ಡಿಸೈನ್‌ಗಳು ಬಂದಿದ್ದು, ಜನರನ್ನು ಆಕರ್ಷಿಸುತ್ತಿವೆ.
ಸಾದಾ ಹಣತೆ ಒಂದು ಹಣತೆ 3 ರು.ನಿಂದ ಶುರುವಾಗಿ ಒಂದು ಡಜನ್‌ಗೆ ಸುಮಾರು 40 ರು.ವರೆಗೂ ದರ ಇದೆ. ಕೆಲವೊಂದು ಹಣತೆಗೆ 100 ರು.ಗೂ ಅಧಿಕ ದರ ಇದೆ.