ಶಿವಾನಂದ ಅಂಗಡಿ
ಹುಬ್ಬಳ್ಳಿಹುಬ್ಬಳ್ಳಿ-ಧಾರವಾಡ ಸೇರಿದಂತೆ ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಶುಕ್ರವಾರ ಕಸದ ರಾಶಿ ಎತ್ತುವುದು, ಕಸ ಹೊಡೆಯುವುದು ಸೇರಿದಂತೆ ರಸ್ತೆಯಲ್ಲೇ ದೀಪಾವಳಿ ಕಳೆದಿದ್ದು ಕಂಡುಬಂತು.
ಇಲ್ಲಿಯ ಈದ್ಗಾ ಮೈದಾನ ಬಳಿ, ಜನತಾ ಬಜಾರ್, ದುರ್ಗದಬೈಲ್, ಹಳೆ ಹುಬ್ಬಳ್ಳಿ, ಅಮರಗೋಳ ಎಪಿಎಂಸಿ ಸೇರಿ ಆಯಾ ವಾರ್ಡ್‌ನ ಪ್ರಮುಖ ರಸ್ತೆ, ಧಾರವಾಡದ ಆಯುಕಟ್ಟಿನ ಜಾಗದಲ್ಲಿ ಬಾಳೆಕಂಬ, ಕಬ್ಬು, ತಳಿರು-ತೋರಣ, ರಾಶಿ ರಾಶಿ ಹೂವುಗಳ ಮಾರಾಟ ನಡೆಯಲಿದ್ದು, ಜನಜಂಗುಳಿಯೇ ಸೇರುತ್ತದೆ. ಹಬ್ಬಕ್ಕೆ ಒಂದೆರಡು ದಿನ ಮುಂಚಿತವಾಗಿಯೇ ವಿವಿಧ ಕಡೆಗಳಿಂದ ವ್ಯಾಪಾರಸ್ಥರು ಆಗಮಿಸಿದ್ದು, ಹಬ್ಬ ಮುಗಿಯುತ್ತಲೇ ಇವರು ತೆರಳಿದ ಮೇಲೆ ಎಲ್ಲೆಂದರಲ್ಲಿ ಹೂವು, ಬಾಳೆ ಕಂಬ, ಕಬ್ಬು ಕಸದ ರಾಶಿ ಬೀಳುತ್ತದೆ. ಮೂರು ದಿನಗಳಲ್ಲಿ ಮಾಮೂಲು ದಿನಕ್ಕಿಂತ ದುಪ್ಪಟ್ಟು ಕಸವನ್ನು ಇಲ್ಲಿಯ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತ, ಕಸದ ಗಾಡಿಗಳಿಗೆ ಹಾಕಿ ಮಹಾನಗರ ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಅಮಾವಾಸ್ಯೆ, ದೀಪಾವಳಿ ಪಾಡ್ಯ ದಿನಗಳಂದು ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನಡೆಯಲಿದ್ದು, ಪಟಾಕಿ ಸದ್ದು ಕಿವಿ ಗಡಚಿಕ್ಕುತ್ತವೆ. ಹಬ್ಬದ ಬಳಿಕ ಅಲ್ಲಿಯ ಬಾಳೆಕಂಬಗಳು, ಕಬ್ಬಿನ ಕಸ, ಹೂವುಗಳು ಹೀಗೆ ರಾಶಿ ರಾಶಿ ಕಸ ಮಾರುಕಟ್ಟೆಯಲ್ಲಿ ತುಂಬಿಕೊಳ್ಳಲಿದ್ದು, ಬೆಳ್ಳಂಬೆಳಗ್ಗೆ ಗಬ್ಬುನಾತ ಹೆಚ್ಚಿರುತ್ತದೆ. ಪೌರಕಾರ್ಮಿಕರು ಸಕಾಲದಲ್ಲಿ ಆಗಮಿಸಿ ಕಸ ಎತ್ತದಿದ್ದರೆ ಅದೇ ಮಾರುಕಟ್ಟೆಗಳಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗುತ್ತದೆ.
ಹುಬ್ಬಳ್ಳಿಯಲ್ಲಿ ಪ್ರತಿ ದಿನ 300 ಟನ್, ಧಾರವಾಡದಲ್ಲಿ-120 ಟನ್ ಸೇರಿ 420 ಟನ್ ಕಸ ಸಂಗ್ರಹಣೆಯಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಕಸದ ಪ್ರಮಾಣ ಡಬಲ್ ಆಗುತ್ತದೆ. ಹೀಗಾಗಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿರುವಾಗ ಪೌರಕಾರ್ಮಿಕರು ಕಾಯಕದಲ್ಲಿ ತೊಡಗಿರುತ್ತಾರೆ.ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ 2000 ಅಧಿಕ ಪೌರಕಾರ್ಮಿಕರಿದ್ದಾರೆ. ಅವರಲ್ಲಿ 360 ಕಾಯಂ, 1001 ಪೌರಕಾರ್ಮಿಕರು ನೇರ ವೇತನ ಪಾವತಿಗೆ ಒಳಪಟ್ಟಿದ್ದಾರೆ. 799 ಗುತ್ತಿಗೆ ಪೌರಕಾರ್ಮಿಕರು ಇದ್ದಾರೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇವರೆಲ್ಲ ಕೆಲಸವನ್ನು ಆರಂಭಿಸಲಿದ್ದು, ಮಧ್ಯಾಹ್ನ 2.30ರ ವರೆಗೂ ಸ್ವಚ್ಛತೆ ಸೇರಿದಂತೆ ಕಸ ಸಂಗ್ರಹಣೆ ಕೆಲಸ ಮಾಡುತ್ತಾರೆ. ಅನಿವಾರ್ಯತೆ ಸಂದರ್ಭದಲ್ಲಿ ಸಂಜೆವರೆಗೂ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಪೌರಕಾರ್ಮಿಕರು.
ಆಯಾ ವಾರ್ಡ್‌ಗಳಲ್ಲಿ ಕಸದ ಗಾಡಿಗಳು ಆಗಮಿಸಲಿದ್ದು, ರಸ್ತೆಗಳಲ್ಲಿ ಆಗಮಿಸಿ ಮನೆ ಮನೆಗಳಿಂದ ಕಸ ಸಂಗ್ರಹಿಸುತ್ತಾರೆ.ಪೌರ ಕಾರ್ಮಿಕರಿಗೆ ವಾರದಲ್ಲಿ ಒಮ್ಮೆ ಪೂರ್ತಿ ರಜೆ ನೀಡಲು ಆದೇಶವಾಗಿದ್ದು, ಇನ್ನು ಅನುಷ್ಠಾನವಾಗಿಲ್ಲ. ಹೀಗಾಗಿ ಸಾವಿರಾರು ಪೌರಕಾರ್ಮಿಕರು ಭಾನುವಾರ, ಬುಧವಾರ ಅರ್ಧದಿನ ಮಾತ್ರ ರಜೆ ಪಡೆಯುತ್ತಾರೆ. ಉಳಿದಂತೆ ಯಾವುದೇ ಪ್ರಮುಖ ಹಬ್ಬಗಳು ಇರಲಿ ಅವರು ಕಸ ಹೊಡೆಯುವುದು, ಗಟಾರ ಸ್ವಚ್ಛತೆ, ಗಟಾರದ ಗಲೀಜು ನಿಗದಿತ ಸ್ಥಳಕ್ಕೆ ಮುಟ್ಟಿಸುವುದು ಮಾಡುತ್ತಾರೆ.
ಸುರಕ್ಷಾ ಸಾಧನಗಳು, ಕೆಲಸದ ಪರಿಕರಗಳು ಸರಿಯಾದ ಹ್ಯಾಂಡ್ ಗ್ಲೌಸ್, ಗಮ್‌ಬೂಟ್, ಮಾಸ್ಕ್, ಪೊರಕೆ, ಗುದ್ದಲಿ, ಬುಟ್ಟಿಗಳನ್ನು ಮಹಾನಗರ ಪಾಲಿಕೆ ಸರಿಯಾಗಿ ಪೂರೈಸುತ್ತಿಲ್ಲ. ಇದ್ದಿದ್ದರಲ್ಲೇ ಕೆಲಸ ಮಾಡುತ್ತಿದ್ದು, ಸುರಕ್ಷತಾ ಸಾಮಗ್ರಿಗಳಿಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಪೌರಕಾರ್ಮಿಕರು.ದೀಪಾವಳಿ ಸೇರಿದಂತೆ ಹಬ್ಬ ಯಾವುದೇ ಇರಲಿ. ರಜೆ ಇಲ್ಲದೇ ಇರುವುದರಿಂದ ಪೌರಕಾರ್ಮಿಕರು ಕೆಲಸ ಮಾಡಬೇಕಾದ ಅನಿವಾರ್ಯ ಇದೆ. ಹೀಗಾಗಿ ರಸ್ತೆಯಲ್ಲಿ ಕಸ ಹೊಡೆಯುವುದು, ಕಸ ತುಂಬುವುದರಲ್ಲಿಯೇ ಹಬ್ಬ ಮುಗಿದಿರುತ್ತದೆ. ಮಾಸ್ಟರ್ ಚೆಕಪ್ ಆಗುತ್ತಿಲ್ಲ. ಸರಿಯಾಗಿ ಸುರಕ್ಷತಾ ಸಾಮಗ್ರಿಗಳು ಇಲ್ಲದೇ ಪೌರಕಾರ್ಮಿಕರ ಆರೋಗ್ಯ ಕುರಿತಂತೆ ಆತಂಕವಿದೆ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ ಹೇಳಿದರು.