ಬೆಳಕಿನ ಹಬ್ಬ ದೀಪಾವಳಿ: ಪಟಾಕಿಗಳ ದ್ದೇವ್ಯಾಪಾರ ಜೋರು

KannadaprabhaNewsNetwork |  
Published : Oct 21, 2025, 01:00 AM IST
20ಕೆಆರ್ ಎಂಎನ್ 1.ಜೆಪಿಜಿಪಟಾಕಿ ಖರೀದಿಯಲ್ಲಿ ತೊಡಗಿರುವ ಜನರು. | Kannada Prabha

ಸಾರಾಂಶ

ರಾಮನಗರ: ಬೆಳಕಿನ ಹಬ್ಬ ದೀಪಾವಳಿಯ ಪ್ರಮುಖ ಆಕರ್ಷಣೆಯಾದ ಪಟಾಕಿಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ರಾಮನಗರ: ಬೆಳಕಿನ ಹಬ್ಬ ದೀಪಾವಳಿಯ ಪ್ರಮುಖ ಆಕರ್ಷಣೆಯಾದ ಪಟಾಕಿಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ.

ಪಟಾಕಿಗೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿರುವುದರಿಂದ ವ್ಯಾಪಾರಸ್ಥರು ಸಂತಸವಾಗಿದ್ದಾರೆ. ಪ್ರತಿ ವರ್ಷ ಪಟಾಕಿ ಬೆಲೆ ಹೆಚ್ಚಳವಾಗುತ್ತಿದ್ದರೂ ವ್ಯಾಮೋಹ ಮಾತ್ರ ದೂರವಾಗುತ್ತಿಲ್ಲ. ಪಟಾಕಿಗಳಿಂದ ಪರಿಸರ ಮಾಲಿನ್ಯ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ ಸುಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಪಟಾಕಿ ಮಳಿಗೆಗಳೆದುರು ಖರೀದಿಗೆ ಜನರು ಕಾದು ನಿಂತಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳ ಅನ್ವಯ ಜಿಲ್ಲೆಯಲ್ಲಿ ಜನನಿಬಿಡ ಪ್ರದೇಶದಿಂದ ಹೊರಗೆ ಪಟಾಕಿಗಳನ್ನು ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ ಪಟಾಕಿ ಅಂಗಡಿಗಳಲ್ಲಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜನ ವಸತಿ ಪ್ರದೇಶದಿಂದ ದೂರದಲ್ಲಿ ಪಟಾಕಿ ಸ್ಟಾಲ್‌ಗಳನ್ನು ತೆರೆಯಲಾಗಿದೆ.

ಪಟಾಕಿ ಮಾರಾಟಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ನಿರಾಪೇಕ್ಷಣ ಪತ್ರ ಕಡ್ಡಾಯವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕವಷ್ಟೇ ಪಟಾಕಿ ಸ್ಟಾಲ್ ತೆರೆಯಲು ಅನುಮತಿ ನೀಡಲಾಗಿದೆ. ಶನಿವಾರದಿಂದ ಜಿಲ್ಲಾ ಕೇಂದ್ರದಲ್ಲಿ ಪಟಾಕಿ ಮಾರಾಟ ಆರಂಭವಾಗಿದ್ದು, ಜನರು ತಮ್ಮ ಮಕ್ಕಳೊಂದಿಗೆ ಸ್ಥಳಕ್ಕೆ ಆಗಮಿಸಿ ಪಟಾಕಿಯನ್ನು ಖರೀದಿಸುತ್ತಿದ್ದು ದೃಶ್ಯ ಸಾಮಾನ್ಯವಾಗಿತ್ತು.

ಪಟಾಕಿ ಮಾರಾಟ ಎಲ್ಲೆಲ್ಲಿ ? :

ರಾಮನಗರದಲ್ಲಿ ಪಟ್ಟಣದ ಬೆಂ-ಮೈ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ಆರ್ಚ್ ಮುಂಭಾಗ ಖಾಲಿ ನಿವೇಶನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಚನ್ನಪಟ್ಟಣದಲ್ಲಿ ಜೂನಿಯರ್ ಕಾಲೇಜು ಮೈದಾನ, ಮಾಗಡಿಯಲ್ಲಿ ಕೆಂಪೇಗೌಡರ ಕೋಟೆ ಮೈದಾನ ಹಾಗೂ ಕನಕಪುರದಲ್ಲಿ ಮುನ್ಸಿಪಾಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಅಗ್ನಿ ಅವಘಡಗಳು ಸಂಭವಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮವನ್ನು ಪಟಾಕಿ ಮಾರಾಟ ಮಾಡುವ ಸ್ಥಳದಲ್ಲಿ ಕೈಗೊಳ್ಳಲಾಗಿದೆ.

ಲಾಭದ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು :

ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಟಾಕಿ ಖರೀದಿಗೆ ಮುಂದಾಗಿರುವುದರಿಂದ ವ್ಯಾಪಾರಸ್ಥರು ಈ ವರ್ಷ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದಾರೆ. ಪ್ರತಿ ಬಾರಿ ಮಕ್ಕಳ ಪಟಾಕಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತಿತ್ತು. ಈ ಬಾರಿ ಮಕ್ಕಳ ಪಟಾಕಿಗಳ ಜೊತೆಗೆ ಇತರೆ ಪಟಾಕಿಗಳಿಗೂ ಭಾರೀ ಡಿಮ್ಯಾಂಡ್ ಕೇಳಿಬರುತ್ತಿದೆ. ಮಕ್ಕಳ ಜೊತೆಗೆ ಯುವಕರೂ ಪಟಾಕಿ ಸಿಡಿಸುವುದಕ್ಕೆ ಮುಂದಾಗಿದ್ದಾರೆ.

ಪಟಾಕಿಗಳ ಆಕರ್ಷಣೆಯಿಂದ ಜನರು ದೂರವಾಗುತ್ತಿದ್ದಾರೆಂಬ ಭಾವನೆ ಇತ್ತೀಚಿನ ಕೆಲವು ವರ್ಷಗಳಿಂದ ಮೂಡಿತ್ತಾದರೂ ಈ ವರ್ಷ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಭರ್ಜರಿಯಾಗೇ ನಡೆದಿದೆ. ಪಟಾಕಿಗಳನ್ನು ಜನರು ಮುಗಿಬಿದ್ದು ಕೊಂಡುಕೊಳ್ಳುತ್ತಿರುವ ದೃಶ್ಯ ನಗರದಲ್ಲಿ ಕಂಡುಬರುತ್ತಿದೆ.

ಜೈನರಿಂದಲೂ ಅದ್ಧೂರಿ ಆಚರಣೆ :

ದೀಪಾವಳಿಯಿಂದಲೇ ಜೈನರಿಗೆ ಹೊಸ ವರ್ಷ ಆರಂಭವಾಗುತ್ತದೆ. ಹಬ್ಬದಿಂದಲೇ ಹೊಸ ಲೆಕ್ಕ ಆರಂಭಿಸುವುದು ಅವರ ಸಂಪ್ರದಾಯ. ಚಿನ್ನದ ಬೆಲೆ ಗಗನಮುಖಿಯಾದಂತೆಲ್ಲಾ ಹೆಚ್ಚು ಲಾಭ ಗಳಿಸಿರುವ ಖುಷಿಯಲ್ಲಿರುವ ಜೈನರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಪಟಾಕಿಗಳನ್ನು ಹೆಚ್ಚು ಖರೀದಿಸುವುದರೊಂದಿಗೆ ಸಮುದಾಯದವರ ಜೊತೆಗೂಡಿ ಕುಟುಂಬ ಸಮೇತರಾಗಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಫ್ಯಾನ್ಸಿ ಪಟಾಕಿಗಳಿಗೂ ಭರ್ಜರಿ ಬೇಡಿಕೆ ಇದ್ದು ಅವು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸುವಂತಹವಾಗಿವೆ. ಸಾಮಾನ್ಯವಾಗಿ ಇಂತಹ ಫ್ಯಾನ್ಸಿ ಪಟಾಕಿಗಳ ಖರೀದಿಗೆ ಜೈನ ಸಮುದಾಯದವರು ಹೆಚ್ಚು ಆಸಕ್ತಿ ತೋರುತ್ತಿದ್ದುದು ಕಂಡುಬಂದಿತು.

ಬಾಕ್ಸ್‌............

ನವೀನ ಮಾದರಿಯ ಪಟಾಕಿಗಳ ಆಕರ್ಷಣೆ :

ನವೀನ ಮಾದರಿಯ ಹೊಸ ವಿನ್ಯಾಸದ ಹಲವಾರು ಪಟಾಕಿಗಳು ಜನರ ಗಮನಸೆಳೆಯುತ್ತಿವೆ. ಕತ್ತಿ, ಡ್ರೋನ್, ಹೆಲಿಕಾಪ್ಟರ್, ನವಿಲು ಪಟಾಕಿ ಸೇರಿದಂತೆ ಹಲವಾರು ಪಟಾಕಿಗಳು ಸೇರಿವೆ. ಬಾಹುಬಲಿ ಸಿನಿಮಾದ ಕತ್ತಿಯಂತಹ ಪಟಾಕಿ ಹಚ್ಚಿದರೆ 15 ಮೀಟರ್ ಎತ್ತರಕ್ಕೆ ವೇಗವಾಗಿ ಚಿಮ್ಮುವಂತೆ ವಿನ್ಯಾಸಗೊಳಿಸಿದೆ. ಡ್ರೋನ್ ಮತ್ತು ಹೆಲಿಕಾಪ್ಟರ್ ಪಟಾಕಿಗಳನ್ನೂ ಅತ್ಯಾಕರ್ಷಕವಾಗಿ ಮೂಡುವಂತೆ ಮಾಡಲಾಗಿದೆ. ಮಕ್ಕಳಿಗಾಗಿ 15 ಮಾದರಿಯ ಹೊಸ ವಿನ್ಯಾಸದ ಪಟಾಕಿಗಳನ್ನು ತಯಾರಿಸಲಾಗಿದೆ. ಮಕ್ಕಳನ್ನು ಸೆಳೆಯುವುದಕ್ಕಾಗಿ ಪಟಾಕಿ ಮತ್ತು ಪಟಾಕಿ ಬಾಕ್ಸ್‌ಗಳ ಮೇಲೆ ಪಾವ್ ಪಟ್ರೋಲ್, ಮೋಟು-ಪತ್ಲು ಸೇರಿದಂತೆ ಕಾರ್ಟೂನ್ ಮಾದರಿಯ ಹಲವಾರು ಪಟಾಕಿಗಳು ಮಾರುಕಟ್ಟೆಗೆ ಬಂದಿರುವುದರಿಂದ ಅವುಗಳಿಗೂ ಬೇಡಿಕೆ ಹೆಚ್ಚಿದೆ.

ಬಾಕ್ಸ್‌.................

ಪಟಾಕಿಗಳ ಬೆಲೆಯಲ್ಲಿ ಶೇ.20ರಷ್ಟು ಹೆಚ್ಚಳ:

ಪ್ರತಿ ವರ್ಷ ಪಟಾಕಿಗಳ ಬೆಲೆ ಶೇ.15 ರಿಂದ 20ರಷ್ಟು ಹೆಚ್ಚಳವಾಗುತ್ತಲೇ ಇದೆ. ಅದೇ ರೀತಿ ಈ ಬಾರಿಯೂ ಪಟಾಕಿಗಳ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ. ಬೆಲೆ ಹೆಚ್ಚಳವಾಗಿದ್ದರೂ ಪಟಾಕಿಗಳನ್ನು ಖರೀದಿ ಭರ್ಜರಿಯಾಗಿಯೇ ನಡೆದಿದೆ. ಕನಿಷ್ಠ 300 ರು. ನಿಂದ 4 ಸಾವಿರ ರು.ವರೆಗೆ ಬಾಕ್ಸ್ ಪಟಾಕಿಗಳು ಮಾರಾಟವಾಗುತ್ತಿವೆ.

ಆಗಸದಲ್ಲಿ ಸಿಡಿಯುವಂತಹ ವೈವಿಧ್ಯಮಯ ಬಣ್ಣ ಬಣ್ಣದ ಚಿತ್ತಾರದ ಪಟಾಕಿಗಳು 1 ಸಾವಿರ ರು.ನಿಂದ 5 ಸಾವಿರ ರು.ವರೆಗೂ ಮಾರಾಟವಾಗುತ್ತಿದ್ದವು. ಬಿಡಿ ಪಟಾಕಿಗಳನ್ನು ಕೊಳ್ಳುವವರ ಸಂಖ್ಯೆ ವಿರಳವಾಗಿತ್ತು. ಬೆಲೆ ಹೆಚ್ಚೆಂಬ ಕಾರಣಕ್ಕೆ ಬಿಡಿ ಪಟಾಕಿಗಳಿಗಿಂತ ಬಾಕ್ಸ್ ಪಟಾಕಿಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮೊರೆ ಹೋಗಿದ್ದರು.

20ಕೆಆರ್ ಎಂಎನ್ 1.ಜೆಪಿಜಿ

ಪಟಾಕಿ ಖರೀದಿಯಲ್ಲಿ ತೊಡಗಿರುವ ಜನರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌