ಪೊಲೀಸ್ ಪ್ರಸ್ತಾವನೆಯಂತೆ ಡಿಜೆ ನಿಷೇಧ: ಡಿಸಿ

KannadaprabhaNewsNetwork |  
Published : Sep 18, 2025, 01:10 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಶಾಂತಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಮೇರೆಗೆ ಜಿಲ್ಲಾ ಪೊಲೀಸ್ ಇಲಾಖೆ ಶಿಫಾರಸಿನಂತೆ ದಾವಣಗೆರೆ ಜಿಲ್ಲೆಯಲ್ಲಿ ಶ್ರೀ ಗಣೇಶೋತ್ಸವದ ವೇಳೆ ಡಿ.ಜೆ. ಸೌಂಡ್ಸ್‌ ಸಿಸ್ಟಂ ಬಳಕೆಗೆ ಅನುಮತಿ ನೀಡಲಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

- ಸಚಿವ, ಡಿಸಿ, ಪಾಲಿಕೆ ಆಯುಕ್ತರಿಂದ ವಿವಿಧ ವಾರ್ಡ್‌ ಪರಿಶೀಲನೆ: ಹೇಳಿಕೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಶಾಂತಿ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಮೇರೆಗೆ ಜಿಲ್ಲಾ ಪೊಲೀಸ್ ಇಲಾಖೆ ಶಿಫಾರಸಿನಂತೆ ದಾವಣಗೆರೆ ಜಿಲ್ಲೆಯಲ್ಲಿ ಶ್ರೀ ಗಣೇಶೋತ್ಸವದ ವೇಳೆ ಡಿ.ಜೆ. ಸೌಂಡ್ಸ್‌ ಸಿಸ್ಟಂ ಬಳಕೆಗೆ ಅನುಮತಿ ನೀಡಲಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಜೆ. ನಿಷೇಧಿಸಿದ್ದು ನಮ್ಮೊಬ್ಬರ ನಿರ್ಧಾರ ಅಲ್ಲ. ಅದು ಶಾಂತಿ ಸಭೆಯಲ್ಲಿ ವ್ಯಕ್ತವಾದ ಸಲಹೆ, ಮನವಿಗಳ ಆಧರಿಸಿ ನಿಷೇಧಿಸಲಾಗಿತ್ತು ಎಂದರು. ಸಾರ್ವಜನಿಕರು ಯಾರೂ ಬಂದು ಡಿಜೆ ಬಳಕೆಗೆ ಅನುಮತಿ ಕೊಡುವಂತೆ ಮನವಿ ನೀಡಿಲ್ಲ. ಡಿಜೆ ಸೌಂಡ್ಸ್‌ ಬೇಕು ಅಂತಾ ಹುಡುಗರು ಕೇಳಿದ್ದಾರೆ. ಡಿಜೆ ನಿಷೇಧಿಸಿದ್ದು ಪೊಲೀಸ್ ಇಲಾಖೆಯಿಂದ ಬಂದ ಪ್ರಸ್ತಾವನೆ ಕಾರಣಕ್ಕೆ. ಮಾಧ್ಯಮಗಳೂ ಸಮಾಜದ ಕಣ್ಣು, ಕಿವಿ ಇದ್ದಂತೆ. ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಇತರೆಡೆ ನಿಷೇಧವಿದ್ದರೂ ಡಿಜೆ ಬಳಸಿದ್ದ ಹಿನ್ನೆಲೆ ಕೇಸ್ ದಾಖಲು ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.

ಜಗಳೂರು ತಾಲೂಕಿನ ಗ್ರಾಮವೊಂದರಲ್ಲಿ ಸುಮಾರು 150 ಜನರು ಅಸ್ವಸ್ಥರಾಗಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ, ತುರ್ತಾಗಿ ಗ್ರಾಮಕ್ಕೆ ವೈದ್ಯರ ತಂಡವನ್ನು ಕಳಿಸಿ, ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುವಂತೆ ಸೂಚನೆ ನೀಡಿದ್ದೇವೆ. ಡಿಎಚ್‌ಒ, ಜಗಳೂರು ಟಿಎಚ್‌ಒಗೂ ಸೂಚನೆ ನೀಡಿದ್ದು, ವೈದ್ಯರ ತಂಡ ಗ್ರಾಮಕ್ಕೆ ಇಂದೇ ಭೇಟಿ ನೀಡುತ್ತಿದೆ ಎಂದು ಹೇಳಿದರು.

ಜಿಲ್ಲಾ ಕೇಂದ್ರದಲ್ಲಿ ಸ್ವಚ್ಛತೆಗೆ ಒತ್ತು ನೀಡಲು, ಹಾಳಾದ ರಸ್ತೆಗಳ ಗುಂಡಿ ಮುಚ್ಚಿಸಲು, ಸ್ವಚ್ಛತೆ ಕಾಪಾಡುವ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದೇವೆ. ವಾರದಲ್ಲಿ 3 ದಿನ ನಗರದ ವಿವಿಧ ವಾರ್ಡ್‌ಗಳಿಗೆ ಬೆಳ್ಳಂಬೆಳಗ್ಗೆ ಅಥವಾ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ್‌, ನಾನು, ಪಾಲಿಕೆ ಆಯುಕ್ತರು, ಎಂಜಿನಿಯರ್‌ಗಳು, ಆರೋಗ್ಯಾಧಿಕಾರಿಗಳು, ಪರಿಸರ ಅಧಿಕಾರಿಗಳು ಸೇರಿದಂತೆ ಕಾಲ್ನಡಿಗೆಯಲ್ಲಿ ತೆರಳಿ, ಪರಿಶೀಲಿಸುತ್ತೇವೆಂದು ಅವರು ವಿವರಿಸಿದರು.

ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಬೊಗಳಿದಾಗ ಮಕ್ಕಳು, ಹಿರಿಯರು ಯಾರೇ ಆಗಿದ್ದರೂ ಓಡುವುದಾಗಲೀ, ಹೆದರುವುದಾಗಲೀ ಮಾಡಬಾರದು. ಇಂಥ ಸಂದರ್ಭ ನಾಯಿಗಳು ಬೆನ್ನುಹತ್ತಿ ಕಚ್ಚುವ ಸಾಧ್ಯತೆ ಹೆಚ್ಚು. ಹಂದಿಗಳ ಹಾವಳಿ ಮತ್ತೆ ಶುರುವಾಗುತ್ತಿದೆ. 6 ತಿಂಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು, ಹಂದಿಗಳನ್ನು ಜಿಲ್ಲಾ ಕೇಂದ್ರದಿಂದ ಹೊರಗೆ ಸ್ಥಳಾಂತರಿಸಲು ಹಂದಿಗಳ ಮಾಲೀಕರ ಸಭೆ ಮಾಡಿ, ಸೂಚನೆ ನೀಡಲಿದ್ದೇವೆ ಎಂದು ತಿಳಿಸಿದರು.

ನಾಯಿ ಕಚ್ಚಿದ ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿ, ಚುಚ್ಚುಮದ್ದು ಪಡೆಯಬೇಕು. ನಾಯಿಗಳನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ. ಅಪಾಯಕಾರಿ ನಾಯಿಗಳನ್ನು ಗುರುತಿಸಿ, ಶಾಶ್ವತವಾಗಿ ಅವುಗಳನ್ನು ಪಂಜರದಲ್ಲಿಡಬಹುದು. ಜಿಲ್ಲೆಯಲ್ಲಿ 5 ಸಾವಿರ ನಾಯಿ ಕಡಿತ ಪ್ರಕರಣ ವರದಿಯಾಗಿವೆ. ಈ ಪೈಕಿ ದಾವಣಗೆರೆ ನಗರ, ಹೊನ್ನಾಳಿಯಲ್ಲೇ ಹೆಚ್ಚು ಎಂದು ವಿವರಿಸಿದರು.

ಸೆ.25ರಂದು ಸ್ವಚ್ಛತೆ ಹೀ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾನು, ಜಿಪಂ ಸಿಇಒ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಕುಂದುವಾಡ ಕೆರೆ ಪ್ರದೇಶ ಹಾಗೂ 2 ಸರ್ಕಾರಿ ಶಾಲಾವರಣ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಲಿದ್ದೇವೆ. ಎಲ್ಲೆಂದರಲ್ಲಿ ಕಸ ತಂದು ಹಾಕುವವರು, ಸ್ವಚ್ಛತೆ ಕಾಪಾಡದವರಿಗೂ ಅರಿವು ಮೂಡಿಸುತ್ತೇವೆ. ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬ್ಲಾಕ್ ಸ್ಪಾಟ್‌ಗಳ ಮೇಲೆ ನಿಗಾ ಇಡಲಾಗುವುದು. ಸಿಕ್ಕಸಿಕ್ಕಲ್ಲಿ ಕಸ ಸುರಿಯುವವರ ಮನೆ ಮುಂದೆ ಡಂಗುರ ಹೊಡೆಸಲಾಗುವುದು. ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಸಿಕ್ಕಲ್ಲಿ ಕಸ ಎಸೆಯುವವರು ಎಂಬುದಾಗಿ ಫೋಟೋ ಸಮೇತ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.

ಕಟ್ಟಡಗಳ ಅವಶೇಷಗಳು (ಸಿಎನ್‌ಡಿ) ಇರುವ ಬಗ್ಗೆ ಮಾಹಿತಿ ನೀಡಿದರೆ ಕನಿಷ್ಠ ಶುಲ್ಕ ಪಡೆದು, ಅದನ್ನು ತೆರವುಗೊಳಿಸಲಾಗುವುದು. ಇಲ್ಲದಿದ್ದರೆ ಕಟ್ಟಡಗಳ ಅವಶೇಷಗಳನ್ನು ಜಿಲ್ಲಾಡಳಿತ, ಪಾಲಿಕೆ ನಿಗದಿಪಡಿಸಿದ ನಿರ್ದಿಷ್ಟ ಸ್ಥಳಕ್ಕೆ ಒಯ್ದು ಸುರಿಯಬೇಕು. ಇನ್ನು 25-30 ವರ್ಷಕ್ಕೆ ಆಗುವಷ್ಟು ಗುಂಡಿ ಇರುವ ಜಾಗಕ್ಕೆ ಅದನ್ನು ಹಾಕಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

100 ಕ್ವಿಂಟಲ್ ಅಕ್ಕಿ ಜಪ್ತಿ:

ಕೊಪ್ಪಳ, ಬೀದರ್‌ನಲ್ಲಿ ಪಡಿತರ ಅಕ್ಕಿ ದುರ್ಬಳಕೆಯಾದ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲೂ 100 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಪಡಿತರ ದುರ್ಬಳಕೆ ತಡೆಗೆ ಜಿಲ್ಲಾಡಳಿತವೂ ಒತ್ತು ನೀಡಿದ್ದು, ಸಾರ್ವಜನಿಕರಿಗೂ ಹೀಗೆ ಪಡಿತರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಇದ್ದರೆ ನೀಡಬೇಕು ಎಂದು ಡಿಸಿ ಹೇಳಿದರು.

- - -

(ಬಾಕ್ಸ್‌)

* ವಿದ್ಯಾರ್ಥಿ ಭವನ ಬಳಿ ರಸ್ತೆ, ಹೋಟೆಲ್‌ ಹಾವಳಿ ದಾವಣಗೆರೆ ವಿದ್ಯಾರ್ಥಿ ಭ‍ವನದಿಂದ ಹದಡಿ ರಸ್ತೆಯ ಎರಡೂ ಬದಿ ನಾನ್ ವೆಜ್‌, ವೆಜ್‌ ಹೋಟೆಲ್‌ಗಳಿಗೆ ಬರುವವರಿಂದ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ನಿತ್ಯ ಅಡ್ಡಿಯಾಗುತ್ತಿದೆ. ಈ ಬಗ್ಗೆ ದೂರುಗಳಿವೆ. ಇದೇ ಪ್ರದೇಶದಲ್ಲಿ ಬೀದಿನಾಯಿಗಳೂ ಹೋಟೆಗಳಲ್ಲಿ ಅಳಿದುಳಿದ ಮಾಂಸಾಹಾರ ತಿಂದು, ವ್ಯಗ್ರವಾಗಿ ಜನರ ಮೇಲೆ ದಾಳಿ ಮಾಡುತ್ತಿರುವ ದೂರು ಕೇಳಿಬರುತ್ತಿವೆ. ಖುದ್ದಾಗಿ ಅಲ್ಲಿ ಪರಿಶೀಲಿಸುತ್ತೇವೆ. ವಾಹನ ನಿಲುಗಡೆ, ಅಲ್ಲಿನ ಬಾರ್‌ ಅಂಡ್ ರೆಸ್ಟೋರೆಂಟ್‌ನಿಂದ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸುತ್ತೇವೆ.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

- - -

(ಟಾಪ್ ಕೋಟ್‌)

ಹೊನ್ನಾಳಿ ತಾಲೂಕು ಆಸ್ಪತ್ರೆ ಶೌಚಾಲಯದಲ್ಲಿ ನವಜಾತ ಶಿಶು ಮಂಗಳವಾರ ಪತ್ತೆಯಾಗಿದೆ. ಕೂಸಿನ ತಾಯಿ ಯಾರೆಂಬ ಬಗ್ಗೆ ಶೋಧ ನಡೆದಿದೆ. ಮಗುವಿನ ಹೆತ್ತವರು ಯಾರೆಂಬ ಬಗ್ಗೆ ಮಾಹಿತಿ ಇಲ್ಲ. ಅ‍ಥವಾ ಅವಿವಾಹಿತೆ ಮಗುವಿಗೆ ಜನ್ಮ ನೀಡಿರಬಹುದು. ಸದ್ಯಕ್ಕೆ ಮಗು ಆರೋಗ್ಯವಾಗಿದ್ದು, ದಾವಣಗೆರೆ ಆರೈಕೆ ಕೇಂದ್ರದಲ್ಲಿ ಕೂಸಿನ ಆರೈಕೆ ಮಾಡುತ್ತಿದ್ದೇವೆ. ಮಗುವನ್ನು ನಾವೇ (ಜಿಲ್ಲಾಡಳಿತ) ಇಟ್ಟುಕೊಳ್ಳುತ್ತೇವೆ. ನಾವೇ ಕೂಸನ್ನು ಸಾಕುತ್ತೇವೆ.

- ಜಿ.ಎಂ. ಗಂಗಾಧರ ಸ್ವಾಮಿ ಜಿಲ್ಲಾಧಿಕಾರಿ.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ