- ಜಿಲ್ಲೆಯಲ್ಲಿ 1730 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ । 7 ಅತಿ ಸೂಕ್ಷ್ಮ ಪ್ರದೇಶಗಳು । ಸಾಮಾಜಿಕ ಜಾಲ ತಾಣದ ಮೇಲೆ ನಿಗಾ
ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸಬಾರದೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿವೆ. ಹಾಗಾಗಿ ಗೌರಿ - ಗಣೇಶ ಮತ್ತು ಈದ್ ಮಿಲಾದ್ ವೇಳೆಯಲ್ಲಿ ಡಿಜೆ ಬಳಸಬಾರದೆಂದು ಸಂಘಟಕರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದ್ದಾರೆ.
ಈ ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು. ಇಲ್ಲದೆ ಹೋದರೆ ಸಂಬಂಧಪಟ್ಟ ಸಂಘಟನೆ ಮುಖಂಡರು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ 1730 ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇವುಗಳಲ್ಲಿ 7 ಅತಿ ಸೂಕ್ಷ್ಮ ಹಾಗೂ 157 ಸೂಕ್ಷ್ಮ ಗಣಪತಿಗಳೆಂದು ಗುರುತಿಸಲಾಗಿದೆ. ಹಾಗೆಯೇ 27 ಕಡೆಗಳಲ್ಲಿ ಈದ್ ಮಿಲಾದ್ ಮೆರವಣಿಗಳು ನಡೆಯಲಿದ್ದು, ಈ ಪೈಕಿ 3 ಅತಿ ಸೂಕ್ಷ್ಮ ಪ್ರದೇಶ ಗಳೆಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.
ಗೌರಿ - ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಒಟ್ಟಿಗೆ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಮಟ್ಟ ಹಾಗೂ ಉಪ ವಿಭಾಗ ಮಟ್ಟದಲ್ಲಿ ಪೊಲೀಸ್ ಇಲಾಖೆ ಉಭಯ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಕೆಲವು ಸಲಹೆ ನೀಡಿದೆ. ಇದರ ಜತೆಗೆ ಕಂದಾಯ, ಪೊಲೀಸ್, ಅರಣ್ಯ, ಅಗ್ನಿಶಾಮಕ ದಳ, ಮೆಸ್ಕಾಂ ಅಧಿಕಾರಿಗಳ ಸಮನ್ವಯ ಸಭೆ ಸಹ ನಡೆಸಲಾಗಿದೆ.
ಜಿಲ್ಲಾ ಪೊಲೀಸ್ ಇಲಾಖೆ ಈವರೆಗೆ ಸುಮಾರು 40 ಸಾವಿರ ಸೋಸಿಯಲ್ ಮೀಡಿಯಾದ ಖಾತೆಗಳ ಮೇಲೆ ಕಣ್ಣಿಟ್ಟಿದೆ. ಪ್ರತಿದಿನ ಅವುಗಳ ಮೇಲೆ ನಿಗಾ ಇಡಲಾಗಿದೆ. ಬೇರೆ ಧರ್ಮದ ವಿರುದ್ಧ ಪ್ರಚೋದನ ಕಾರಿ ಪೋಸ್ಟ್ ಮಾಡಿದರೆ, ಸುಳ್ಳು ಸುದ್ದಿ ಹಾಕಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.