ಶಿರಸಿ: ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿ, ಕಳೆದ ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ, ನಿಷೇಧಿತ ಪಿಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದ ಶಿರಸಿಯ ಟಿಪ್ಪುನಗರದ ಮೌಸಿನ್ ಯಾನೆ ಇಮ್ತಿಯಾಜ್ ಅಬ್ದುಲ್ ಶೂಕುರ ಹೊನ್ನಾವರ (೩೫) ಬಂಧಿಸುವಲ್ಲಿ ಶಿರಸಿ ನಗರ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವೈದ್ಯಕೀಯ ಪರೀಕ್ಷೆ ನಡೆಸಿ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು, ಶಿರಸಿಯಲ್ಲಿ ನಡೆದ ಕೊಲೆ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.
ಆರೋಪಿಗೆ ನೆರವಾದ ಐವರ ವಿರುದ್ಧ ಕೇಸು:ಶಿರಸಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ರಕ್ಷಣೆಗೆ ನೆರವಾದ ಕುಟುಂಬದ ಐವರು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ ಹೇಳಿದರು.
ಈತ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ಆತನ ಮನೆಯ ಮೇಲೆ ಎನ್‌ಐಎ ದಾಳಿ ಮಾಡಿತ್ತು. ವಿಷಯ ತಿಳಿದು ಮುಖ್ಯ ಆರೋಪಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಆರೋಪಿಯ ಕುಟುಂಬದ ಸದಸ್ಯರಾದ ರಿಹಾನಾ ಅಬ್ದುಲ್ ಶೂಕೂರ (೫೫), ಅಬ್ದುಲ್ ಹಜೀಜ್ ಅಬ್ದುಲ್ ಶೂಕೂರ (೩೮), ಇಜಾಜ್ ಅಬ್ದುಲ್ ಶುಕೂರ (೩೩), ಅಬ್ದುಲ್ ರಜಾಕ್ ಅಬ್ದುಲ್ ಶೂಕೂರ (೩೨), ಮಹಮದ್ ಸುಹೇಲ್ ಕರಿಂಸಾಬ ಶೇಖ (೩೨) ವಿರುದ್ಧ ದೂರು ದಾಖಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶಿರಸಿ ಡಿಎಸ್‌ಪಿ ಗಣೇಶ ಕೆ.ಎಲ್, ಸಿಪಿಐಗಳಾದ ಶಶಿಕಾಂತ ವರ್ಮಾ, ಮಂಜುನಾಥ ಗೌಡ, ಪಿಎಸ್‌ಐಗಳಾದ ನಾಗಪ್ಪ ಬಿ, ರಾಜಕುಮಾರ ಉಕ್ಕಲಿ, ರತ್ನ ಕುರಿ, ಮಹಂತೇಶ ಕಂಬಾರ ಮತ್ತಿತರರು ಇದ್ದರು.