ಹೊಳೆನರಸೀಪುರ: ಶ್ರೀ ಮಹಾಗಣಪತಿ ಸೇವಾ ಸಮಿತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವದ ಉತ್ಸವ ಶನಿವಾರ ರಾತ್ರಿ ಪೊಲೀಸ್ ಬಿಗಿ ಬಂದೋಬಸ್ತು ನಡುವೆ ಪಟಾಕಿ ಪ್ರದರ್ಶನ ಹಾಗೂ ಡಿಜೆ ಸದ್ದು ಇಲ್ಲದೆ, ಯಾವುದೇ ಜೋಶ್ ಇಲ್ಲದೆ ತರಾತುರಿಯಲ್ಲಿ ನಡೆಯಿತು. ಬೆರಳೆಣಿಕೆಯಷ್ಟು ಕಲಾ ತಂಡಗಳು ಮಾತ್ರ ಪ್ರದರ್ಶನ ಮಾಡಿದವು.
ಬಳಿಕ ಮಹಾ ಮಂಗಳಾರತಿ ನೆರವೇರಿಸಿ, ತೀರ್ಥ ಪ್ರಸಾದ ವಿನಿಯೋಗದ ನಂತರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ವಿವಿಧ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಸರ್ವಲಂಕೃತಗೊಂಡ ವೈಭವದ ರಥದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಪೇಟೆ ಮುಖ್ಯರಸ್ತೆ, ಕೋಟೆ ರಾಜ ಬೀದಿಯಲ್ಲಿ ಹಾಗೂ ಡಾ.ಅಂಬೇಡ್ಕರ್ ನಗರ ಮತ್ತು ಪ್ರಮುಖ ರಸ್ತೆಗಳಲ್ಲಿ ಮಂಗಳವಾಧ್ಯ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಯಾವುದೇ ಜೋಶ್ ಇಲ್ಲದೇ ತರಾತುರಿಯಲ್ಲಿ ಮೆರವಣಿಗೆ ಜರುಗಿತು.ಹೊಳೆನರಸೀಪುರ ಪ್ಲವರ್ ಡೆಕೊರೇಟರ್ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶ್ರೀ ವಿನಾಯಕ ಮೂರ್ತಿಯ ಉತ್ಸವದ ವಾಹನವನ್ನು ಅಕರ್ಷಕ ಪುಷ್ಪಗಳಿಂದ ರಥದಂತೆ ಸಿಂಗರಿಸಿ, ಮೆಚ್ಚುಗೆಗೆ ಪಾತ್ರರಾದರು. ಭಕ್ತರು ದಾರಿಯುದ್ದಕ್ಕೂ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಯನ್ನು ಪೂರೈಸುವಂತೆ ವರಸಿದ್ಧಿ ವಿನಾಯಕನಲ್ಲಿ ಪ್ರಾರ್ಥಿಸಿದರು. ಭಾನುವಾರ ಮಧ್ಯಾಹ್ನ ೨ ಗಂಟೆಯ ನಂತರ ಹೇಮಾವತಿ ನದಿಯಲ್ಲಿ ಗೌರಿಗಣೇಶಸ್ವಾಮಿಯ ಮೂರ್ತಿಗಳನ್ನು ತೆಪ್ಪೋತ್ಸವ ನಡೆಸಿ ವಿಸರ್ಜಿಸಲಾಯಿತು.
ಪೂಜಾ ಮಹೋತ್ಸವದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿ ಗೌರವಾಧ್ಯಕ್ಷ ಟಿ.ಶಿವಕುಮಾರ್, ಅಧ್ಯಕ್ಷ ಕೆ.ಶ್ರೀಧರ್, ಕಾರ್ಯಧ್ಯಕ್ಷ ಪುಟ್ಟಸೋಮಪ್ಪ, ಸುಧಾ ನಳಿನಿ, ದೊಡ್ಡಮಲ್ಲೇಗೌಡ, ಎಚ್.ವಿ.ಸುರೇಶ್ ಕುಮಾರ್, ಎಚ್.ಎಸ್.ಸುದರ್ಶನ್, ಎಸ್.ಗೋಕುಲ್, ಗುರುರಾಜ್, ಅಶೋಕ್, ಶಂಕರ್, ಪಿಎಚ್‌ಇ ವೆಂಕಟೇಶ್, ಮಂಜುನಾಥ್, ನರಸಿಂಹಶೆಟ್ಟಿ, ವೈ.ವಿ.ಚಂದ್ರಶೇಖರ್, ಈಶ್ವರ್, ಶಿವಕುಮಾರ್, ಲೋಕೇಶ್, ಗೋವಿಂದ, ಮುರಳಿಧರ ಗುಪ್ತ, ಮಹಮದ್ ಕಾಲೀದ್, ಕಾದಲನ್ ಕೃಷ್ಣ, ಶಂಕರನಾರಾಯಣ ಐತಾಳ್, ಪುರಸಭಾ ಸದಸ್ಯರು ಭಾಗವಹಿಸಿದ್ದರು. ವೈಭವ ಕಳೆದುಕೊಂಡ ವಿಸರ್ಜನಾ ಮಹೋತ್ಸವ