ತವರು ಕ್ಷೇತ್ರದಲ್ಲಿ ಡಿಕೆಶಿಗೆ ಅಭೂತಪೂರ್ವ ಸ್ವಾಗತ

KannadaprabhaNewsNetwork |  
Published : Jun 08, 2026, 01:15 AM IST
4.ಹೊಸದುರ್ಗ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಜನರಿಗೆ ಕೃತಜ್ಞತೆ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಕಣ್ಣು ಹಾಯಿಸಿದಷ್ಟು ದೂರ ಜನಸಾಗರ, ಆಳೆತ್ತೆರದ ಕಟೌಟ್‌ಗಳು, ಬಗೆಬಗೆಯ ಬೃಹತ್ ಗಾತ್ರದ ಹಾರಗಳು, ಮೆರಗು ಹೆಚ್ಚಿಸಿದ ಜಾನಪದ ಕಲಾ ತಂಡಗಳು, ಮೊಳಗಿದ ಡಿಕೆ, ಡಿಕೆ ಘೋಷಣೆಗಳು, ಡಿಕೆಶಿ ಕಣ್ತುಂಬಿಕೊಳ್ಳಲು ಕಟ್ಟಡವೇರಿದ ಜನರು...

ರಾಮನಗರ: ಕಣ್ಣು ಹಾಯಿಸಿದಷ್ಟು ದೂರ ಜನಸಾಗರ, ಆಳೆತ್ತೆರದ ಕಟೌಟ್‌ಗಳು, ಬಗೆಬಗೆಯ ಬೃಹತ್ ಗಾತ್ರದ ಹಾರಗಳು, ಮೆರಗು ಹೆಚ್ಚಿಸಿದ ಜಾನಪದ ಕಲಾ ತಂಡಗಳು, ಮೊಳಗಿದ ಡಿಕೆ, ಡಿಕೆ ಘೋಷಣೆಗಳು, ಡಿಕೆಶಿ ಕಣ್ತುಂಬಿಕೊಳ್ಳಲು ಕಟ್ಟಡವೇರಿದ ಜನರು...

ಇದು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ತರುವಾಯ ಸ್ವ ಕ್ಷೇತ್ರ ಕನಕಪುರದ ವಿವಿಧ ಭಾಗಗಳಲ್ಲಿ ಪ್ರವಾಸ ಕೈಗೊಂಡು ಜನರಿಗೆ ಕೃತಜ್ಞತೆ ಸಲ್ಲಿಸುವ ಕೃತಜ್ಞತಾ ಸಮರ್ಪಣಾ ಪ್ರವಾಸದಲ್ಲಿ ಕಂಡು ಬಂದ ದೃಶ್ಯಗಳು.

ಹಾರೋಹಳ್ಳಿ ಪಟ್ಟಣ ಡಿ.ಕೆ.ಶಿವಕುಮಾರ್ ಅವರಿಗೆ ಶುಭಾಶಯ ಕೋರುವ ಬೃಹತ್ ಬ್ಯಾನರ್‌ಗಳು, ಆಳೆತ್ತೆರದ ಕಟೌಟ್‌ಗಳು ಹಾಗೂ ಕಾಂಗ್ರೆಸ್ ಬಾವುಟಗಳಿಂದ ಸಿಂಗಾರಗೊಂಡಿತ್ತು. ಅನೇಕ ಭಾಗಗಳಿಂದ ಸಹಸ್ರಾರು ಕಾರ್ಯಕರ್ತರು ಮತ್ತು ಜನರು ಆಗಮಿಸಿ ಜಮಾಯಿಸಿದ್ದರು.

ಕನಕಪುರಕ್ಕೆ ಆಗಮಿಸುವುದಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಝೀರೋ ಟ್ರಾಫಿಕ್ ತಪ್ಪಿಸುವುದಕ್ಕಾಗಿ ವಿಧಾನಸೌಧದದಿಂದ ರೇಷ್ಮೆ ಸಂಸ್ಥೆವರೆಗೆ ಮೆಟ್ರೋದಲ್ಲಿಯೇ ಪ್ರಯಾಣಿಸಿದರು. ಅಲ್ಲಿಂದ ಕನಕಪುರಕ್ಕೆ ಕಾರಿನಲ್ಲಿ ಪ್ರಯಾಣ ಬೆಳಸಿದ ಡಿ.ಕೆ.ಶಿವಕುಮಾರ್​ ಅವರು ಬೆಳಗ್ಗೆ 11.50ಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಗೆ ಆಗಮಿಸಿದಾಗ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಅದ್ಧೂರಿಯಾಗಿ ಬರ ಮಾಡಿಕೊಂಡರು.

ಹಾರೋಹಳ್ಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಡಿಕೆಶಿಯವರ ಮೇಲೆ ಜನರು ಮಲ್ಲಿಗೆ ಹೂಮಳೆ ಸುರಿಸಿದರಲ್ಲದೆ, ಡಿಕೆ, ಡಿಕೆ... ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

ಜಾನಪದ ಕಲಾ ತಂಡಗಳು ಕಲಾ ಪ್ರದರ್ಶಿಸಿ ಮುಖ್ಯಮಂತ್ರಿಯವರಿಗೆ ವಿಶೇಷ ಸ್ವಾಗತ ಕೋರಿದರು. ತಮಟೆ, ಡೊಳ್ಳು, ನಗಾರಿ, ಹುಲಿವೇಷ ಹಾಗೂ ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾಪ್ರದರ್ಶನಗಳು ಗಮನ ಸೆಳೆದವು. ಮಹಿಳೆಯರು ಪೂರ್ಣಕುಂಭದೊಂದಿಗೆ ಡಿಕೆಶಿ ಅವರನ್ನು ಸ್ವಾಗತಿಸಿದರು.

ಈ ವೇಳೆ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯಿಂದ ತಯಾರಿಸಲಾದ ಸುಮಾರು 20 ಅಡಿ ಉದ್ದದ, 600 ಕೆ.ಜಿ ತೂಕದ ಬೃಹತ್ ಗಾತ್ರದ ಹಾರ ಎಲ್ಲರ ಗಮನ ಸೆಳೆಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೃಷ್ಟಿ ತಾಗದಿರಲಿ ಎಂಬ ಉದ್ದೇಶದಿಂದ ಸಿದ್ಧಪಡಿಸಲಾಗಿದ್ದ ಈ ವಿಶೇಷ ಹಾರವನ್ನು ಕ್ರೇನ್ ಮೂಲಕ ಅರ್ಪಿಸಲಾಯಿತು.

ಕಟ್ಟಡವೇರಿದ ಜನರು:

ತೆರೆದ ವಾಹನದಲ್ಲಿ ಡಿ.ಕೆ.ಶಿವಕುಮಾರ್ ರವರು ಪ್ರವಾಸ ನಡೆಸಿದ ಎಲ್ಲೆಡೆ ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಳ್ಳಲು ಗ್ರಾಮದ ಪ್ರಮುಖ ವೃತ್ತಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರಸ್ತೆ ಬದಿ ಮಾತ್ರವಲ್ಲದೆ ಸುತ್ತಮುತ್ತಲಿನ ಕಟ್ಟಡಗಳ ಮೇಲೂ ಜನರು ನಿಂತು ಡಿ.ಕೆ.ಶಿವಕುಮಾರ್ ಅವರ ರೋಡ್ ಶೋ ಅನ್ನು ಕಣ್ತುಂಬಿಕೊಂಡರು.

ತುಂಗಣಿಯಲ್ಲಿ ಕ್ರೇನ್ ಸಹಾಯದಿಂದ ಬೃಹತ್ ಸೇಬಿನ ಹಾರ ಹಾಕಿ ಡಿಕೆಶಿ ಅವರನ್ನು ಕಾರ್ಯಕರ್ತರು ಸ್ವಾಗತಿಸಿದರು. ತಮ್ಮ ಮನೆ ದೇವರಾದ ಕನಕಪುರದ ಕೆಂಕೇರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಡಿಕೆಶಿರವರು ದೇವಸ್ಥಾನದಲ್ಲಿ ಗಿಡ ನೆಟ್ಟರು.

ಟಿ.ಬೇಕುಪ್ಪೆ ಸರ್ಕಲ್, ನಾರಾಯಣಪುರ ಗ್ರಾಮದಲ್ಲಿ ಕಾರ್ಯಕರ್ತರು ಮೂಸಂಬಿ ಹಣ್ಣು, ಕೋಡಿಹಳ್ಳಿ, ಹೊಸದುರ್ಗಾ ಮತ್ತು ಹೆರಿಂದ್ಯಾಪನಹಳ್ಳಿಯಲ್ಲಿ ಸುಮಾರು 500 ಕೆಜಿಗೂ ಹೆಚ್ಚು ತೂಕದ ಸೇಬಿನ ಹಾರ ಹಾಕಿ ಕಾರ್ಯಕರ್ತರು ಜಯಘೋಷಗಳನ್ನು ಕೂಗಿ ಬರ ಮಾಡಿಕೊಂಡರು.

ನಾರಾಯಣಪುರದಲ್ಲಿ ಪೂಜಾಕುಣಿತ ಕಲಾವಿದರು ಸ್ವಾಗತಿಸಿದರೆ, ಕೊಳಗೊಂಡನಹಳ್ಳಿಯಲ್ಲಿ ನಂದಿಧ್ವಜ, ಪಟ ಕುಣಿತ, ನಂದಿಧ್ವಜ ಹೊತ್ತ ಕಲಾವಿದರು ಸ್ವಾಗತಿಸಿದರು. ಪ್ರತಿ ಊರಿನಲ್ಲೂ ತಮಟೆ, ನಗಾರಿ ಸದ್ದು ಮೇಳೈಸಿತ್ತು. ಬೇಕುಪ್ಪೆಯಲ್ಲಿ ಮನೆದೇವರು ಕೆಂಕೇರಮ್ಮನಿಗೆ ಹಾಗೂ ತುಂಗಣಿಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಹೋದರ ಡಿ.ಕೆ.ಸುರೇಶ್ ಅವರ ಜೊತೆಗೂಡಿ ಪೂಜೆ ಸಲ್ಲಿಸಿದರು. ಕ್ಷೇತ್ರದ ಗಡಿ ಭಾಗದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಪ್ರವಾಸದ ವೇಳೆ ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿ ಆಗಿದ್ದಕ್ಕೆ ಅಭಿನಂದಿಸಿ ಪತ್ರ ಬರೆದಿದ್ದ ಮಗುವಿಗೆ ಡಿಕೆಶಿರವರು ಶಾಲು ಹಾಕಿ ಒಳ್ಳೆದಾಗಲೆಂದು ಶುಭ ಹಾರೈಸಿದರು.

ಆರತಿ ಬೆಳಗಿದ ಮಹಿಳೆಯರು:

ಮುಖ್ಯಮಂತ್ರಿಗಳು ತೆರಳಿದ ಮಾರ್ಗದುದ್ದಕ್ಕೂ ಗ್ರಾಮಗಳಲ್ಲಿ ಬಾಳೆಕಂದು, ತಳಿರು ತೋರಣ, ಕಾಂಗ್ರೆಸ್ ಬಾವುಟ ಗಳಿಂದ ಅಲಂಕರಿಸಲಾಗಿತ್ತು. ತವರು ಮನೆ ಮಗನಿಗೆ ಮಹಿಳೆಯರು ಪೂರ್ಣಕುಂಭ ಕಳಸ ಹೊತ್ತು, ಬೆಲ್ಲದ ಆರತಿ ಬೆಳಗಿ, ಪಟಾಕಿ ಸಿಡಿಸಿದರು.

ಕೊಳಗೊಂಡನಹಳ್ಳಿ, ಹುಣಸನಹಳ್ಳಿ ಮಾರ್ಗವಾಗಿ ಕೋಡಿಹಳ್ಳಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಕೆಲಕಾಲ ವಿಶ್ರಾಂತಿ ಪಡೆದರು. ಆನಂತರ ಹೂಕುಂದ, ಮುಳ್ಳಹಳ್ಳಿ, ನಲ್ಲಹಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರಹಳ್ಳಿ ಗೇಟ್ , ಸೋಮದ್ಯಾಪನಹಳ್ಳಿ, ಹಳ್ಳಿ ಮಾರನಹಳ್ಳಿ ಮಾರ್ಗವಾಗಿ ಕನಕಪುರ ನಗರಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳು ಹೂವಿನ ಮಳೆ ಸುರಿಸಿದರಲ್ಲದೆ ಜನಪದ ಕಲಾ ತಂಡಗಳೊಂದಿಗೆ ಸ್ವಾಗತಿಸಿ ಅಭಿಮಾನ ಮೆರೆದರು. ಕ್ಷೇತ್ರದ ಜನರು ಹುಟ್ಟೂರಿನ ಮಗನನ್ನು ಮನದುಂಬಿ ಹರಿಸಿದರು.

ಅಜ್ಜಯ್ಯನ ಮಾರ್ಗದರ್ಶನ:

ಮುಖ್ಯಮಂತ್ರಿಗಳು ರೋಡ್ ಶೋ ನಡೆಸಿದ ವಾಹನದ ಮುಂಭಾಗದಲ್ಲಿ ಅಜ್ಜಯ್ಯನ ಫೋಟೊ ಅಳವಡಿಸಿದ್ದು ವಿಶೇಷವಾಗಿತ್ತು. ವೀರ ಗಂಗಾಧರ ಅಜ್ಜಯ್ಯನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂದೇಶ ಕೊಟ್ಟರು.

ಬಾಕ್ಸ್ ...............

ಆಂಬ್ಯುಲೆನ್ಸ್ ದಾರಿ ಬಿಡಿಸಿದ ಸಿಎಂ:

ಬೇಕುಪ್ಪೆ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಭಾಷಣ ಮಾಡುತ್ತಿದ್ದ ವೇಳೆ ಆಂಬ್ಯುಲೆನ್ಸ್ ಬಂದ ಕಾರಣಕ್ಕೆ ಮಧ್ಯದಲ್ಲೇ ಭಾಷಣ ನಿಲ್ಲಿಸಿ ಜನರಿಗೆ ದಾರಿ ಬಿಡುವಂತೆ ಸೂಚಿಸಿದರು. ಆಂಬ್ಯುಲೆನ್ಸ್ ಹೋದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

7ಕೆಆರ್ ಎಂಎನ್ 4,5,6,7,8.ಜೆಪಿಜಿ

4.ಹೊಸದುರ್ಗ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಜನರಿಗೆ ಕೃತಜ್ಞತೆ ಸಲ್ಲಿಸಿದರು.

5.ಟಿ.ಬೇಕುಪ್ಪೆ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದರು.

6.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಮನೆದೇವರು ಕೆಂಕೇರಮ್ಮ ದೇವಿಗೆ ಭಾನುವಾರ ಪೂಜೆ ಸಲ್ಲಿಸಿದರು.

7.ಹಾರೋಹಳ್ಳಿಯಲ್ಲಿ ಭಾನುವಾರ ಕೃತಜ್ಞತೆ ಸಮರ್ಪಣಾ ಪ್ರವಾಸ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

8.ಮನೆ ದೇವರಾದ ಕೆಂಕರಮ್ಮ ದೇವಾಲಯದಲ್ಲಿ ಡಿ.ಕೆ.ಶಿವಕುಮಾರ್ ಈಡುಗಾಯಿ ಹೊಡೆದು ಹರಕೆ ತೀರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಕ್ ಉಗ್ರರ ಜತೆ ಮತ್ತಷ್ಟು ಜನಕ್ಕೆ ನಂಟು ಸಾಧ್ಯತೆ!: ರಾಜನಹಳ್ಳಿ ಶಿವಕುಮಾರ ಶಂಕೆ
ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಸಲೀಂಗೆ ಸಚಿವ ಸ್ಥಾನಕ್ಕೆ ಒತ್ತಾಯ