ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಿ: ಸಿಎಂಗೆ ಕೆಸಿಸಿಐ ಮನವಿ

KannadaprabhaNewsNetwork |  
Published : Sep 20, 2026, 04:00 AM IST
ಮಹಮ್ಮದ್ ಮುದಾಸೀರ್ | Kannada Prabha

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ಹಾಗೂ ವಾಣಿಜ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ), ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ಹಾಗೂ ವಾಣಿಜ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ), ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.ಸೆ.11ರಂದು ಸಲ್ಲಿಸಿರುವ ಮನವಿಯಲ್ಲಿ ಬಳ್ಕುಂಜೆ ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವುದು, ದಶಕಗಳಿಂದ ಬಳಕೆಯಾಗದೆ ಇರುವ ಜಸ್ಕೋ ಮತ್ತು ಕಿಸ್ಕೋ ಜಮೀನುಗಳನ್ನು ಮರುಪಡೆದು ಎಂಎಸ್‌ಎಂಇಗಳಿಗೆ ಹಂಚಿಕೆ ಮಾಡುವುದು, ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಐದು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.ಬಳ್ಕುಂಜೆ ಭೂಮಿ ಹಂಚಿಕೆಗೆ ಆಗ್ರಹ:ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಒಟ್ಟು 1,050 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಈ ಹಿಂದೆ ಮಾಡಲಾಗಿತ್ತು. ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಉತ್ತೇಜನ ನೀಡುವ ಉದ್ದೇಶ ಹೊಂದಿದ್ದ ಈ ಯೋಜನೆ ವಿಳಂಬವಾಗಿರುವುದರಿಂದ ಹಲವು ಕೈಗಾರಿಕೆಗಳ ಸ್ಥಾಪನೆಗೆ ತೊಂದರೆಯಾಗಿದೆ ಎಂದು ಕೆಸಿಸಿಐ ತಿಳಿಸಿದೆ.ವಿಳಂಬ ಮುಂದುವರಿದರೆ ಕೈಗಾರಿಕೆಗಳು ಮೂಲಸೌಕರ್ಯ ಮತ್ತು ಸರ್ಕಾರದ ಬೆಂಬಲ ಸುಲಭವಾಗಿ ದೊರೆಯುವ ಇತರ ಜಿಲ್ಲೆಗಳು ಅಥವಾ ರಾಜ್ಯಗಳಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಬಳ್ಕುಂಜೆ ಯೋಜನೆಗೆ ಸರ್ಕಾರ ತ್ವರಿತವಾಗಿ ಮಧ್ಯಪ್ರವೇಶಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.30 ವರ್ಷಗಳಿಂದ ಬಳಕೆಯಾಗದ ಜಮೀನು:ಸುಮಾರು 400 ಎಕರೆ ಜಸ್ಕೋ ಜಮೀನು ಮತ್ತು 50 ಎಕರೆ ಕಿಸ್ಕೋ ಜಮೀನು 30 ವರ್ಷಗಳಿಂದ ಬಳಕೆಯಾಗದೆ ಉಳಿದಿದೆ. ಈ ಜಮೀನುಗಳನ್ನು ಸರ್ಕಾರ ಮರುಪಡೆದು ಎಂಎಸ್‌ಎಂಇಗಳಿಗೆ ಮಾತ್ರ ಹಂಚಿಕೆ ಮಾಡುವ ಮೂಲಕ ಕೈಗಾರಿಕಾ ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು ಎಂದು ಕೆಸಿಸಿಐ ಒತ್ತಾಯಿಸಿದೆ.

ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಮೂಲಸೌಕರ್ಯ: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಭೂಗತ ಒಳಚರಂಡಿ ವ್ಯವಸ್ಥೆ, ನೀರು ಸಂಸ್ಕರಣಾ ಘಟಕ ಹಾಗೂ ಭೂಗತ ವಿದ್ಯುತ್ ಕೇಬಲಿಂಗ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ.ಮಂಗಳೂರಿನಲ್ಲಿ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್: ಮಂಗಳೂರಿನ ಭೌಗೋಳಿಕ ಸ್ಥಾನಮಾನ ಹಾಗೂ ಸಮುದ್ರ, ವಾಯು ಮತ್ತು ರಸ್ತೆ ಸಂಪರ್ಕವನ್ನು ಬಳಸಿಕೊಂಡು ಸಮಗ್ರ ಅಥವಾ ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪಿಸಬೇಕು ಎಂದು ಕೆಸಿಸಿಐ ಆಗ್ರಹಿಸಿದೆ.ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ ಬೇಡಿಕೆ: ಮಂಗಳೂರಿನಲ್ಲಿ ಮಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ (MIEC) ಸ್ಥಾಪಿಸಲು ಸರ್ಕಾರ ಸಹಕರಿಸಬೇಕು ಎಂದು ಕೆಸಿಸಿಐ ಮನವಿ ಮಾಡಿದೆ.ರಾಜ್ಯದ ಏಕೈಕ ಎಲ್ಲ ಹವಾಮಾನದಲ್ಲೂ ಕಾರ್ಯನಿರ್ವಹಿಸುವ ಆಳಸಮುದ್ರ ಬಂದರು, ಗಲ್ಫ್ ರಾಷ್ಟ್ರಗಳಿಗೆ ನೇರ ಸಂಪರ್ಕ ಹೊಂದಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಲಿಷ್ಠ ಆರೋಗ್ಯ-ಶೈಕ್ಷಣಿಕ ಸಂಸ್ಥೆಗಳಿರುವುದರಿಂದ ಮಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರಕ್ಕೆ ಸೂಕ್ತ ತಾಣವಾಗಿದೆ ಎಂದು ಕೆಸಿಸಿಐ ತಿಳಿಸಿದೆ.ಸರ್ಕಾರ ಸೂಕ್ತ ಭೂಮಿ ಗುರುತಿಸಿ MIEC ಸ್ಥಾಪನೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ ಇಂದು ಕೆಸಿಸಿಐ ಅಧ್ಯಕ್ಷ ಮಹಮ್ಮದ್ ಮುದಾಸೀರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾ ಸೇವಾ ಆಂದೋಲನದಲ್ಲಿ ಅವ್ಯವಸ್ಥೆ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಅಂಗನವಾಡಿಗಳ ಕೊಡುಗೆ ಅಪಾರ: ಯಶವಂತರಾಯಗೌಡ