ಕನ್ನಡಪ್ರಭ ವಾರ್ತೆ ಬೆಂಗಳೂರು
ಉಪ ಚುನಾವಣೆ ಕಾಂಗ್ರೆಸ್‌ಗೆ ಪೂರಕವಾಗಿದೆ ಎಂದೇನಾದರೂ ಕಂಡು ಬಂದರೆ ಸಂಶಯವೇ ಇಲ್ಲದಂತೆ ಡಿ.ಕೆ.ಸುರೇಶ್ ಅವರೇ ಅಭ್ಯರ್ಥಿಯಾಗಲಿದ್ದಾರೆ. ಆದರೆ, ತುಸು ರಿಸ್ಕ್ ಇದೆ ಎನಿಸಿದರೆ ಅಥವಾ ಡಿ.ಕೆ.ಶಿವಕುಮಾರ್ ಅವರು ಕಣಕ್ಕೆ ಇಳಿದರೆ ಮಾತ್ರ ಅಲ್ಲಿ ಗೆಲುವು ಸಾಧ್ಯ ಎಂಬುದೇನಾದರೂ ಕಂಡು ಬಂದರೆ ಆಗ ಶಿವಕುಮಾರ್ ತಾವೇ ಕಣಕ್ಕೆ ಇಳಿಯಲು ಹಿಂಜರಿಯುವುದಿಲ್ಲ ಎಂಬುದು ಅವರ ಆಪ್ತರ ಅಂಬೋಣ.ಇಂತಹದೊಂದು ಚಿಂತನೆ ಶಿವಕುಮಾರ್ ಅವರಿಗೆ ಮೂಡಲು ಕಾರಣ ಚನ್ನಪಟ್ಟಣ ಕ್ಷೇತ್ರದಿಂದ ಈ ಹಿಂದೆ ಸ್ಪರ್ಧಿಸಿದ್ದ ಕೆಂಗಲ್ ಹನುಮಂತಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೇರಿದ್ದರು. ಇದೇ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರವನ್ನು ಅದೃಷ್ಟದ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ತಾವು ಇಲ್ಲಿ ಗೆದ್ದು ಮುಖ್ಯಮಂತ್ರಿ ಹುದ್ದೆಯ ದಾವೆದಾರನಾಗಬೇಕು ಎಂಬ ಬಯಕೆ ಶಿವಕುಮಾರ್ ಅವರ ಆಂತರ್ಯದಲ್ಲಿದೆ ಎನ್ನಲಾಗುತ್ತಿದೆ.ಆದರೆ, ಈ ಕ್ಷೇತ್ರಕ್ಕೆ ಜೆಡಿಎಸ್ ಹಾಗೂ ಬಿಜೆಪಿಯ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರು ಕಣಕ್ಕೆ ಇಳಿಯುವುದು ಬಹುತೇಕ ನಿರ್ಧಾರವಾಗಿದೆ. ಯೋಗೇಶ್ವರ್ ವಾಸ್ತವವಾಗಿ ಪ್ರಭಾವಿಶಾಲಿ ಪ್ರತಿಸ್ಪರ್ಧಿಯೇ. ಹೀಗಾಗಿ ಇಂತಹ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಚನ್ನಪಟ್ಟಣದ ಹವಾ ಹೇಗಿದೆ ಎಂಬುದರ ಪರಿಶೀಲನೆಯ ಅಗತ್ಯವನ್ನು ಡಿಕೆ ಸಹೋದರರು ಮನಗಂಡಿದ್ದಾರೆ.ಇದರ ಆರಂಭಿಕ ಹಂತವಾಗಿ ಬುಧವಾರದ ಟೆಂಪಲ್ ರನ್ ನಡೆಯಲಿದೆ. ಮತ್ತೊಂದು ಮೂಲಗಳ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಹೇಳಿಕೊಳ್ಳುವಂತಹ ಬೆಂಬಲ ದೊರಕಿಲ್ಲ. ಇದು ತುಸು ಹಿನ್ನಡೆ ಎಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ಚನ್ನಪಟ್ಟಣ ಉಪ ಚುನಾವಣೆಯನ್ನು ಗೆದ್ದುಕೊಂಡರೆ ಆಗ ಹಿನ್ನಡೆಯ ಕೊರಗು ನೀಗುತ್ತದೆ ಎಂಬ ಕಾರಣಕ್ಕಾಗಿಯೂ ಉಪ ಚುನಾವಣೆಯನ್ನು ಡಿಕೆ ಸಹೋದರರು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.ಆದರೆ, ಈ ಕ್ಷೇತ್ರದಿಂದ ಖುದ್ದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸ್ಪರ್ಧಿಸುತ್ತಾರಾ ಅಥವಾ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ ಇಳಿಸುತ್ತಾರೆಯೇ ಎಂಬುದು ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವ ರೀತಿಯ ರಾಜಕೀಯ ಗಾಳಿ ಬೀಸುತ್ತಿದೆ ಎಂಬದರ ಪಕ್ಕಾ ಪರಿಶೀಲನೆ ನಂತರವೇ ನಿರ್ಧಾರವಾಗಲಿದೆ.
ಚನ್ನಪಟ್ಟಣದ ಶಾಸಕ ಎಚ್.ಡಿ.ಕುಮಾರಸ್ವಾಮಿ ಇದೀಗ ಮಂಡ್ಯ ಸಂಸದರಾಗಿದ್ದಾರೆ. ಎಚ್‌ಡಿಕೆ ರಾಜೀನಾಮೆಯ ಕಾರಣ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋತ ಸೋದರ ಡಿ.ಕೆ.ಸುರೇಶ್ ಅವರನ್ನು ಚನ್ನಪಟ್ಟಣದಿಂದ ಕಣಕ್ಕಿಳಿಸುವ ಚಿಂತನೆ ಕಾಂಗ್ರೆಸ್ಸಲ್ಲಿ ಇತ್ತು. ಅದರ ಬದಲು ಈಗ ತಾವೇ ಅಲ್ಲಿಂದ ಸ್ಪರ್ಧಿಸಲು ಡಿ.ಕೆ.ಶಿವಕುಮಾರ್ ಚಿಂತನೆ ನಡೆಸಿದ್ದು, ತಮ್ಮಿಂದ ತೆರವಾಗುವ ಕನಕಪುರ ಕ್ಷೇತ್ರದಲ್ಲಿ ಡಿಕೆ ಸುರೇಶ್ ಕಣಕ್ಕಿಳಿಸುವ ಸಾಧ್ಯತೆಯಿದೆ.-----ಚನ್ನಪಟ್ಟಣ ಮೇಲೆ ಡಿಕೆಶಿ ಕಣ್ಣು ಏಕೆ? ಈ ಹಿಂದೆ ಇಲ್ಲಿಂದ ಗೆದ್ದಿದ್ದ ಕೆಂಗಲ್ ಹನುಮಂತಯ್ಯ, ಎಚ್‌ಡಿಕೆ ಸಿಎಂ ಆಗಿದ್ದಾರೆ. ಹೀಗಾಗಿ ಚನ್ನಪಟ್ಟಣ ಅದೃಷ್ಟದ ಕ್ಷೇತ್ರ. ಆದ್ದರಿಂದ ತಾವು ಇಲ್ಲಿ ಸ್ಪರ್ಧಿಸಿ ಗೆದ್ದರೆ ಸಿಎಂ ಆಗಬಹುದು ಎಂಬ ಇಂಗಿತ ಡಿಕೆಶಿ ಆಂತರ್ಯದಲ್ಲಿ ಇದೆ ಎನ್ನಲಾಗಿದೆ.