ಅನ್ಯರ ಜೀವ ಉಳಿಸಲು ರಕ್ತದಾನಕ್ಕೆ ಮುಂದಾಗಿ: ಡಾ.ಗೀತಾ

KannadaprabhaNewsNetwork | Published : Jun 19, 2024 1:13 AM

ಸಾರಾಂಶ

ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಲು ರಕ್ತದ ಅವಶ್ಯಕತೆ ಇರುತದೆ. ಈ ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಗೀತಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ । ಜನಜಾಗೃತಿ ಜಾಥಾ - - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಜೂ.14,ತುರ್ತು ಸಂದರ್ಭದಲ್ಲಿ ಜೀವಗಳನ್ನು ಉಳಿಸಲು ರಕ್ತದ ಅವಶ್ಯಕತೆ ಇರುತದೆ. ಈ ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಗೀತಾ ಹೇಳಿದರು. ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ವಿವಿಧ ರಕ್ತ ಕೇಂದ್ರಗಳು, ಜಿಲ್ಲಾ ಆರ್.ಆರ್.ಸಿ ಕಾಲೇಜುಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ 2005ರಿಂದ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ರಕ್ತದಾನ ಮಾಡಿದ ವ್ಯಕ್ತಿ ಆರೋಗ್ಯವಾಗಿ ಇರುತ್ತಾರೆ. 18ರಿಂದ 60ರ ವಯಸ್ಸಿನ ಆರೋಗ್ಯವಂತರು ರಕ್ತದಾನಕ್ಕೆ ಅರ್ಹರು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

ಜಾಥಾವು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಆರಂಭವಾಗಿ ವಿದ್ಯಾರ್ಥಿ ಭವನ ಸರ್ಕಲ್, ಕೆಇಬಿ ಸರ್ಕಲ್, ಚೇತನ ಹೋಟೆಲ್, ಮೋತಿ ವೀರಪ್ಪ ಕಾಲೇಜ್ ಮೂಲಕ ಸಾಗಿ ಸಿ.ಜಿ.ಆಸ್ಪತ್ರೆ ಬಳಿ ಮುಕ್ತಾಯಗೊಂಡಿತು.

ಸ್ವಯಂಪ್ರೇರಿತ ರಕ್ತದಾನಿಗಳಿಗೆ ಪ್ರಶಸ್ತಿಪತ್ರ ಪ್ರದಾನ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಆರ್.ಸಿ.ಎಚ್. ಅಧಿಕಾರಿ ಡಾ.ರೇಣುಕಾರಾಧ್ಯ, ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾದ ಡಾ.ಮಧು, ನಿವಾಸಿ ವೈದ್ಯಾಧಿಕಾರಿ ಡಾ.ಮುರುಳೀಧರ್, ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್, ಸ್ವಯಂಪ್ರೇರಿತ ರಕ್ತದಾನಿಗಳು, ಶುಶ್ರೂಷಕ ಕಾಲೇಜಿನ ವಿದ್ಯಾರ್ಥಿಗಳು, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವಾರು ಜನರು ಇದ್ದರು.

- - -

ಬಾಕ್ಸ್‌ ರಕ್ತದಾನಿ ಆಪತ್ಬಾಂಧವ

ವಿಶ್ವದೆಲ್ಲೆಡೆ ಮನುಷ್ಯನಿಗೆ ಎರಡು ರೀತಿಯ ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಮೊದಲನೆಯದಾಗಿ ತುರ್ತು ಪರಿಸ್ಥಿತಿಗಳಲ್ಲಿ ಅಂದರೆ, ಅಪಘಾತ, ಪ್ರಕೃತಿ ವಿಕೋಪಗಳು, ಹೆಣ್ಣು ಮಕ್ಕಳ ಪ್ರಸೂತಿ ಸಮಯ ಮತ್ತಿತರ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳು, ಎರಡನೆಯದಾಗಿ ರಕ್ತಸಂಬಂಧಿ ಖಾಯಿಲೆಗಳಾದ ತಲಸ್ಸೀಮಿಯಾ, ಹಿಮೋಫಿಲಿಯಾ, ಸಿಕಲ್ ಸೆಲ್ ಅನಿಮೀಯ ಮುಂತಾದವುಗಳು. ಈ ಎರಡೂ ಪರಿಸ್ಥಿತಿಗಳಲ್ಲಿ ನವಜಾತ ಶಿಶುಗಳಿಂದ ದೊಡ್ಡವರವರೆಗಿನ ಎಲ್ಲರಿಗೂ ಸುರಕ್ಷಿತ ರಕ್ತದ ಅವಶ್ಯಕತೆ ಇರುತ್ತದೆ. ಹೀಗೆ ಅತ್ಯವಶ್ಯಕ ರಕ್ತ ಮತ್ತು ರಕ್ತದ ಉತ್ಪನ್ನವನ್ನು ಕೃತಕವಾಗಿ ಸೃಷ್ಟಿಮಾಡಲು ಸಾಧ್ಯವಿಲ್ಲ. ಈ ವೇಳೆ ರಕ್ತದಾನಿಯೊಬ್ಬನೇ ಆಪದ್ಬಾಂಧವ. ಆದ್ದರಿಂದ ಎಲ್ಲರು ರಕ್ತದಾನ ಮಾಡಬೇಕು ಎಂದು ಡಾ.ಗೀತಾ ಮನವಿ ಮಾಡಿದರು.

- - -

-14ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಜಾಥಾವನ್ನು ಜಿಪಂ ಸಿಇಒ ಸುರೇಶ ಇಟ್ನಾಳ್, ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ್ ಉದ್ಘಾಟಿಸಿದರು.

Share this article