ಕನಕಪುರ : ‘ಶ್ರಮಕ್ಕೆ ಪ್ರತಿಫಲ ಸಿಗಲೇಬೇಕು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಜಯ ಸಾಧಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣ. ಪಕ್ಷದ ಗೆಲುವಿಗೆ ಶಿವಕುಮಾರ್ ಅವರ ಶ್ರಮವಿದೆ. ಅವರಿಗೂ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಒಂದು ಅವಕಾಶ ಸಿಗಬೇಕು’ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಬಿಜ್ಜಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸಿದ್ದೇಶ್ವರ ಸ್ವಾಮಿ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಕೆಶಿ ಪರ ಬಹಿರಂಗವಾಗಿಯೇ ಬ್ಯಾಟಿಂಗ್ ಮಾಡಿದರು.
ಸಿಎಂ ಬದಲಾವಣೆ ಕುರಿತಂತೆ ಕೇಂದ್ರ ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಬೇಕು. ಒಪ್ಪಂದ ಆಗಿರುವಂತೆ ಡಿಕೆಶಿಗೆ ಅವಕಾಶ ಮಾಡಿಕೊಡಬೇಕು. ಏನು ಒಪ್ಪಂದ ಆಗಿದೆ ಎನ್ನುವುದು ಸಿದ್ದರಾಮಯ್ಯ, ಡಿಕೆಶಿ ಹಾಗೂ ವರಿಷ್ಠರಿಗೆ ಮಾತ್ರ ತಿಳಿದಿದೆ. ಆ ಒಪ್ಪಂದದಂತೆ ನಡೆದುಕೊಂಡರೆ ಎಲ್ಲಾ ರಾಜಕಾರಣಿಗಳಿಗೂ ಗೌರವ. ಈಗಾಗಲೇ ರಾಜ್ಯದ ನಾಯಕತ್ವದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಮಾತಿನ ಚಕಮಕಿ ನಡೆಯುತ್ತಿದ್ದು, ಇದನ್ನು ರಾಷ್ಟ್ರೀಯ ನಾಯಕರು ತಿಳಿಗೊಳಿಸಿ, ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಕ್ಷದ ಅಧ್ಯಕ್ಷರಾಗಿ ಅವರು ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಬಹುಶಃ ಅವರ ಕಾರ್ಯಚಟುವಟಿಕೆಯಿಂದ ಬಹುಮತ ಪಕ್ಷಕ್ಕೆ ಸಿಕ್ಕಿದೆ. ಹೀಗಾಗಿ, ಚುನಾವಣೆ ಬಳಿಕವೇ ಅವರಿಗೆ ಉನ್ನತ ಸ್ಥಾನ ಸಿಗಬೇಕಿತ್ತು. ಆದರೆ, ಅವರ ಪಕ್ಷದ ವರಿಷ್ಠರ ತೀರ್ಮಾನದಂತೆ ಡಿಸಿಎಂ ಸ್ಥಾನ ಸ್ವೀಕರಿಸಿ, ದೊಡ್ಡತನ ಮೆರೆದಿದ್ದಾರೆ. ಒಡಂಬಡಿಕೆಯಂತೆ ಈಗ ಅವರಿಗೂ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಮಾಡಿದರೆ, ಆಗ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಹಾಗೆ ಆಗುತ್ತೆ. ಈಗಿರುವ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಗೌರವವೂ ಉಳಿಯುತ್ತೆ. ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟಿದ್ದಕ್ಕಾಗಿ ಡಿ.ಕೆ.ಶಿವಕುಮಾರ್ ಅವರಿಗೂ ಸಮಾಧಾನ ಆಗುತ್ತೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಕೆಲವರು ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಾಗ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಎಲ್ಲಿಯವರೆಗೆ ಡಿಕೆಶಿಗೆ ಸಿಎಂ ಸ್ಥಾನ ಸಿಗುವುದಿಲ್ಲವೋ, ಅಲ್ಲಿಯವರೆಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಿ ಎಂದು ಹೈಕಮಾಂಡ್ ನಾಯಕರು ಕೇಳಬಾರದು. ಅವರಿಗೆ ಸಿಎಂ ಸ್ಥಾನ ಸಿಕ್ಕಿದರೆ ಅವರಾಗಿಯೇ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುತ್ತಾರೆ. ಈ ಮಾತನ್ನು ಸಂಬಂಧಪಟ್ಟವರಿಗೆ ರಾಷ್ಟ್ರೀಯ ನಾಯಕರು ನಿರ್ಣಾಯಕವಾಗಿ ಹೇಳಬೇಕು. ರಾಜಕೀಯದ ರೀತಿ, ನೀತಿ, ನಿಯತ್ತಿನ ಪಾಲನೆ ಆಗಬೇಕು. ಈ ಹಿಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಆದಂತಹ ಘಟನೆಗಳು ಎಲ್ಲರಿಗೂ ತಿಳಿದಿದೆ. ಅಂತಹ ಘಟನೆ ಮತ್ತೆ ಮರುಕಳಿಸದಂತೆ ಪಕ್ಷದ ಉನ್ನತ ನಾಯಕರು ತೀರ್ಮಾನ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಪಕ್ಷ ಹೇಳಿದಂತೆ ಕೇಳುತ್ತೇವೆ: ಡಿಕೆಶಿಕಾಂಗ್ರೆಸ್ ಕಾರ್ಯಕರ್ತರು, ಶ್ರೀಗಳು, ಜನತೆ ಬಯಸುತ್ತಾರೆ. ಯಾರು ಏನೇ ಬಯಸಿದರೂ ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ, ನಾವೆಲ್ಲ ಪಕ್ಷ ಕಟ್ಟಿರುವವರು, ಪಕ್ಷದ ಶಿಸ್ತಿನ ಸಿಪಾಯಿಗಳು. ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ, ಯಾರೇ ಆಗಿರಲಿ, ನಾವೆಲ್ಲರೂ ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ.- ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ