ಕೆಪಿಸಿಸಿಗೆ ಹೊಸದಾಗಿ ನೇಮಕ ಮಾಡಲು 300 ಪದಾಧಿಕಾರಿಗಳ ಪಟ್ಟಿ ಜೊತೆ ಡಿಕೆಶಿ ಇಂದು ದಿಲ್ಲಿಗೆ

KannadaprabhaNewsNetwork | Updated : Feb 25 2025, 06:56 AM IST

ಸಾರಾಂಶ

ಕೆಪಿಸಿಸಿಗೆ ಹೊಸದಾಗಿ ನೇಮಕ ಮಾಡಲು 300 ಪದಾಧಿಕಾರಿಗಳ ಸಂಭಾವ್ಯ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಂಗಳವಾರ ವರಿಷ್ಠರನ್ನು ಭೇಟಿ ಮಾಡಲಿದ್ದು, ತನ್ಮೂಲಕ ಪದಾಧಿಕಾರಿಗಳ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

 ಬೆಂಗಳೂರು  : ಕೆಪಿಸಿಸಿಗೆ ಹೊಸದಾಗಿ ನೇಮಕ ಮಾಡಲು 300 ಪದಾಧಿಕಾರಿಗಳ ಸಂಭಾವ್ಯ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಂಗಳವಾರ ವರಿಷ್ಠರನ್ನು ಭೇಟಿ ಮಾಡಲಿದ್ದು, ತನ್ಮೂಲಕ ಪದಾಧಿಕಾರಿಗಳ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಲೋಕಸಭೆ ಚುನಾವಣೆಗೆ ಮೊದಲು ಕೆಲ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿದ್ದು ಹೊರತುಪಡಿಸಿದರೆ ಉಳಿದಂತೆ ಮುಂಚೂಣಿ ಘಟಕಗಳು, ಜಿಲ್ಲಾ ಕಾಂಗ್ರೆಸ್‌, ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳ ಹುದ್ದೆಗಳಿಗೆ ಹೊಸಬರ ನೇಮಕ ಆಗಿಲ್ಲ. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರ ಆಗುತ್ತಿರುವ ಹಿನ್ನೆಲೆಯಲ್ಲಿ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆಗೆ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ ಎನ್ನಲಾಗಿದೆ. 

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪರಾಜಿತ ಅಭ್ಯರ್ಥಿಗಳು ಹಾಗೂ ಪದಾಧಿಕಾರಿಗಳ ಜತೆ ಸಭೆ ನಡೆಸಿದ ಅವರು ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು 300 ನೂತನ ಪದಾಧಿಕಾರಿಗಳ ಪಟ್ಟಿ ನೀಡಲಿದ್ದಾರೆ.ಈ ಪಟ್ಟಿ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ. ಬಳಿಕ ಪದಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.ಕಾಂಗ್ರೆಸ್‌ ಕಚೇರಿಗಳ ಶಂಕುಗೆ ಆಹ್ವಾನ:

ಇದೇ ವೇಳೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್‌ ಅಧಿವೇಶನ 100 ವರ್ಷ ಪೂರೈಸಿದ ನೆನಪಿಗಾಗಿ ರಾಜ್ಯ ಕಾಂಗ್ರೆಸ್‌ ವತಿಯಿಂದ ರಾಜ್ಯಾದ್ಯಂತ ನಿರ್ಮಿಸುತ್ತಿರುವ 100 ಕಾಂಗ್ರೆಸ್‌ ಕಚೇರಿಗಳ ಶಂಕುಸ್ಥಾಪನೆಗೆ ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, 100 ಕಾಂಗ್ರೆಸ್‌ ಕಚೇರಿಗಳ ಶಂಕುಸ್ಥಾಪನೆಗೆ ಬೆಂಗಳೂರಿನಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮಕ್ಕೆ ನಾವು ಆಮಂತ್ರಣ ನೀಡುತ್ತೇವೆ.

 ದೆಹಲಿ ನಾಯಕರು ಸಮಯ ನೀಡಿದರೆ ಅವರೊಂದಿಗೆ ಭೇಟಿ ಮಾಡಿ ಚರ್ಚಿಸುತ್ತೇನೆ. ಇನ್ನು ಅವರಿಗೂ ಸಂಸತ್ ಅಧಿವೇಶನ ಇರುತ್ತದೆ. ಹೀಗಾಗಿ ರಾಹುಲ್‌ ಗಾಂಧಿ ಅವರು ವರ್ಚುಯಲ್‌ ಆಗಿ ಆದರೂ ಭಾಗವಹಿಸುವ ನಿರೀಕ್ಷೆ ಇದೆ. ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಬರುವ ಸಾಧ್ಯತೆಯಿದೆ ಎಂದು ಹೇಳಿದರು.ಜಲಶಕ್ತಿ ಸಚಿವ ಭೇಟಿ:

ಇದೇ ವೇಳೆ ನಾನು ದೆಹಲಿಯಲ್ಲಿ ವಿ.ಸೋಮಣ್ಣ ಅವರೊಂದಿಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ. ರಾಜಸ್ಥಾನದಲ್ಲಿ ಕೇಂದ್ರ ಸಚಿವರೊಂದಿಗೆ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದಾಗ ನಮ್ಮ ರಾಜ್ಯದವರೇ ಆದ ಸೋಮಣ್ಣ ಮೂಲಕವೇ ಕಡತ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಅವರನ್ನು ಬಿಟ್ಟು ನಾನು ಮಾತನಾಡುವುದು ಸರಿಯಲ್ಲ. ಸೋಮಣ್ಣ ಅವರಿಗೂ ನಾನು ಪತ್ರ ಬರೆದಿದ್ದೇನೆ. ಮಂಗಳವಾರ ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಇಬ್ಬರೂ ಭಾಗಿಯಾಗುತ್ತೇವೆ ಎಂದು ಹೇಳಿದರು.

Share this article