ಬೇಕಂತಲೇ ಎಚ್.ಡಿ.ರೇವಣ್ಣರನ್ನು ಆರೋಪಿ ಮಾಡಲಾಗಿದೆ । ಕಾಂಗ್ರೆಸ್‌ಗೆ ಸೋಲು ಖಚಿತ
ಕನ್ನಡಪ್ರಭ ವಾರ್ತೆ ಹಾಸನರಾಸಲೀಲೆ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಅವರನ್ನು ಉದ್ದೇಶಪೂರ್ವಕವಾಗಿ ಎ೧ ಆರೋಪಿ ಮಾಡಲಾಗಿದ್ದು, ಇದರ ಹಿಂದೆ ಮುಖ್ಯಮಂತ್ರಿಯಾಗಲು ಬಯಸುತ್ತಿರುವ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರನ್ನು ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎ೧ ಆರೋಪಿ ಮಾಡಲಾಗಿದ್ದು, ರೇವಣ್ಣ ವಿರುದ್ಧ ಎಫ್‌ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸೀಪುರ ಸರ್ಕಲ್ ಇನ್‌ಸ್ಪೆಕ್ಟರ್ ಗೆ ಡಿ.ಕೆ.ಶಿವಕುಮಾರ್ ಫೋನ್ ಮಾಡಿ ರೇವಣ್ಣ ವಿರುದ್ಧ ಎಫ್‌ಐಆರ್ ಮಾಡಿ ಅಂತ ಒತ್ತಾಯಿಸಿದ್ದಾರೆ ಎಂದು ದೂರಿದರು.‘ಇದರ ಹಿಂದೆ ಯಾರ ಪ್ರಭಾವ ಇದೆ ಎನ್ನುವುದು ತಿಳಿದ ವಿಚಾರ. ಕಾಂಗ್ರೆಸ್ ಮಹಾ ನಾಯಕರಿಗೆ ಸೋಲು ಖಚಿತ ಎಂದು ಗೊತ್ತಾಗಿ ರೇವಣ್ಣ ಕುಟುಂಬ ಹಣಿಯಲು ಹಾಗೂ ವಕ್ಕಲಿಗ ಸಮಾಜವನ್ನು ಹಿಡಿತಕ್ಕೆ ತೆಗೆದುಕೊಂಡು ಸಿಎಂ ಆಗಲು ಇದೆಲ್ಲ ಮಾಡಲಾಗಿದೆ. ಘಟನೆಯ ಸತ್ಯಾಸತ್ಯತೆ ಪರಿಶೀಲನೆ ಮಾಡದೆ ಕೇಸ್ ದಾಖಲಾಗಿದೆ. ಮಹಿಳೆಗೆ ಆಮಿಷ ತೋರಲಾಗಿದೆ. ಇಂತಹ ರಾಜಕಾರಣ ಮಾಡಲು ಇವರಿಗೆ ನಾಚಿಕೆ ಆಗಬೇಕು. ದೇವೇಗೌಡರು ಮೋದಿಯನ್ನು ಹಣಿಯಲು ಪ್ರಯತ್ನ ಮಾಡಿದ್ದಾರೆ’ ಎಂದು ದೂರಿದರು.
ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ:‘ಪ್ರಜ್ವಲ್ ವಿಚಾರವನ್ನು ನಾವು ಮಾತನಾಡುವುದಿಲ್ಲ. ತನಿಖೆ ವರದಿ ಬಂದ ಬಳಿಕ ಉಪ್ಪು ತಿಂದವರು ನೀರು ಕುಡಿಯಬೇಕು ಎಂಬುದು ನಮ್ಮ ಅಭಿಪ್ರಾಯ. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಚೇಲಾಗಳನ್ನು ಕಳಿಸಿ ಕೇಸ್ ಹಾಕಿಸಿದ್ದಾರೆ. ಎಸ್‌ಐಟಿ ಮಾಡಿರೋದು ಸಂಸದರ ಮೇಲಿನ ಆರೋಪ ತನಿಖೆಗಾಗಿ. ಇದರ ಜತೆಗೆ ಈಗ ನಾಲ್ಕು ವರ್ಷಗಳ ಹಿಂದೆ ನಡೆದಿದೆ ಎಂದು ರೇವಣ್ಣರ ಬಗ್ಗೆಯೂ ಆರೋಪ ಮಾಡಲಾಗಿದೆ. ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ. ಬೇರೆ ಸಮಯ ಇರಲಿಲ್ಲವೇ? ಈಗ ಬೇಕಾಗಿತ್ತಾ! ಪ್ರಜ್ವಲ್ ಅವರ ಅಶ್ಲೀಲ ವೀಡಿಯೋಗಳಿವೆ ಎಂದು ವಕೀಲ ದೇವರಾಜೇಗೌಡ ಈ ಹಿಂದೆಯೇ ಹೇಳಿದ್ದರು. ಹಾಗಿದ್ದರೆ ಜಿಲ್ಲಾಡಳಿತ ಏನು ಮಾಡುತ್ತಿದೆ. ಮಹಿಳೆಯರ ಮಾನ ಹರಾಜು ಹಾಕಿದ್ದಾರೆ. ಸತ್ಯ ಆಗಿದ್ದರೆ ಏನು ಶಿಕ್ಷೆ ಬೇಕೋ ಕೊಡಲಿ’ ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು ಇದ್ದರು.