ಪೆನ್‌ಡ್ರೈವ್‌ ವಿಡಿಯೋ ಪ್ರಚಾರಕ್ಕೆ 4 ಸಚಿವರ ತಂಡ ರೂಪಿಸಿದ್ದೇ ಡಿ.ಕೆ.ಶಿವಕುಮಾರ್‌

KannadaprabhaNewsNetwork | Published : May 18, 2024 12:41 AM

ಸಾರಾಂಶ

ಪ್ರಜ್ವಲ್‌ ರೇವಣ್ಣ ಅವದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಪ್ರಚಾರದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುತಂತ್ರ ಇದೆ ಎಂದು ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ವಕೀಲ ದೇವರಾಜೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ. ಹಾಸನದಲ್ಲಿ ಎಸ್‌ಐಟಿಗೆ ಅವರನ್ನು ಹಸ್ತಾಂತರಿಸುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿದರು.

ವಕೀಲ ದೇವರಾಜೇಗೌಡ ಹೊಸ ಬಾಂಬ್‌ । ನಾನು ಜೈಲಿನಿಂದ ಹೊರಗೆ ಬಂದ ದಿನವೇ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ

ಕನ್ನಡಪ್ರಭ ವಾರ್ತೆ ಹಾಸನ

ಪ್ರಜ್ವಲ್‌ ರೇವಣ್ಣ ಅವದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ಪ್ರಚಾರದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುತಂತ್ರ ಇದೆ. ಈ ಪ್ರಕರಣ ಇಟ್ಟುಕೊಂಡು ಜೆಡಿಎಸ್‌ ಮುಗಿಸುವುದು ಹಾಗೂ ಮೋದಿಗೆ ಕೆಟ್ಟ ಹೆಸರು ತರಲೆಂದೇ ಯೋಜನೆ ಮಾಡಿದ್ದರು. ಅದಕ್ಕೆಂದೇ ನಾಲ್ಕು ಸಚಿವರನ್ನೊಳಗೊಂಡ ಒಂದು ತಂಡವನ್ನೂ ಸಜ್ಜು ಮಾಡಿದ್ದರು ಎಂದು ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ವಕೀಲ ದೇವರಾಜೇಗೌಡ ಗಂಭೀರವಾಗಿ ಆರೋಪಿಸಿದ್ದಾರೆ.

ಎಸ್‌ಐಟಿಗೆ ಅವರನ್ನು ಹಸ್ತಾಂತರಿಸುವ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ‘ಪೆನ್‌ಡ್ರೈವ್‌ ಕೇಸಿನಲ್ಲಿ ನನ್ನನ್ನು ಮಧ್ಯಸ್ಥಿಕೆ ಮಾಡಿಸಿದ್ದು ಶಿವರಾಮೇಗೌಡ. ನನ್ನ ಬಂಧನಕ್ಕೆ ಡಿ.ಕೆ.ಶಿವಕುಮಾರ್ ನೇರ ಹೊಣೆ. ಡಿ.ಕೆ.ಶಿವಕುಮಾರ್‌ ನನಗೆ 100 ಕೋಟಿ ರು. ಆಫರ್‌ ನೀಡಿದ್ದರು. ಐದು ಕೋಟಿ ರುಪಾಯಿ ಅಡ್ವಾನ್ಸ್ ದುಡ್ಡನ್ನು ಬೌರಿಂಗ್ ಕ್ಲಬ್‌ನ 110ನೇ ರೂಂಗೆ ಕಳಿಸಿದ್ದರು. ಚನ್ನರಾಯಪಟ್ಟಣದ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳಿಸಿದ್ದರು. ಐದು ಕೋಟಿ ರು. ಹಣ ಕೊಟ್ಟು ಕಳಿಸಿದ್ದರು’ ಎಂದು ದೂರಿದರು.

‘ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕರೆಸಿ ಮಾತನಾಡಿದರು. ನೀನು ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಹೇಳು. ಪೆನ್‌ಡ್ರೈವ್‌ನ ಕುಮಾರಸ್ವಾಮಿ ಹಂಚಿದರು ಅಂತ ಹೇಳು. ನಿನಗೆ ಸಮಸ್ಯೆ ಆಗಲ್ಲ. ನಾನು ನಿನ್ನನ್ನು ಕಾಪಾಡುತ್ತೇನೆ ಅಂತ ಹೇಳಿದರು. ನಾನು ಅದಕ್ಕೆ ಒಪ್ಪದೇ ಇದ್ದಾಗ ಅಟ್ರಾಸಿಟಿ ಕೇಸ್ ಫಿಕ್ಸ್ ಮಾಡಿಸಿದರು’ ಎಂದು ಆರೋಪಿಸಿದರು.

‘ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಕರೆಸಿಕೊಂಡು ಸಂಪೂರ್ಣ ಮಾಹಿತಿ ಪಡೆದು ಪೆನ್‌ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್. ಇದೆಲ್ಲಾ ಕುತಂತ್ರಕ್ಕಾಗಿ ನಾಲ್ಕು ಜನ ಮಂತ್ರಿಗಳ ಕಮಿಟಿ ಮಾಡಿದರು. ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ, ಪ್ರೀಯಾಂಕ್‌ ಖರ್ಗೆ ಮತ್ತು ಇನ್ನೊಬ್ಬ ಸಚಿವರು ಇದರಲ್ಲಿ ಇದ್ದರು. ನಾಲ್ಕು ಮಂತ್ರಿಗಳ ತಂಡ ರಚನೆ ಮಾಡಿ ಇದನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದರು’ ಎಂದು ತಿಳಿಸಿದರು.

‘ಒಂದೇ ಏಟಿಗೆ ಕುಮಾರಸ್ವಾಮಿ ಹಾಗೂ ಮೋದಿಗೆ ಕೆಟ್ಟ ಹೆಸರು ತರುವ ದುರುದ್ದೇಶ ಅವರದಾಗಿತ್ತು. ಈ ರಾಸಲೀಲೆ ಹಗರಣದಲ್ಲಿ ಮೋದಿಯವರನ್ನು ಬಿಂಬಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಅಂತ ಪ್ಲಾನ್‌ ಮಾಡಿದ್ದರು. ಹಾಗಾಗಿ ಅವರ ಯಾವ ಆಮಿಷಗಳಿಗೂ ನಾನು ಒಪ್ಪಲಿಲ್ಲ. ಹಾಗಾಗಿಯೇ ನನ್ನ ಮೇಲೆ ಲೈಂಗಿಕ ಕಿರುಕುಳ ಕೇಸ್ ಹಾಕಿಸಿದರು. ಅದರಲ್ಲಿ ಸಾಕ್ಷ್ಯ ಸಿಗಲಿಲ್ಲ. ಅದಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಅದರಲ್ಲೂ ಸಾಕ್ಷಿ ಸಿಗಲಿಲ್ಲ. ಏನಾದರೂ ಮಾಡಿ ದೇವರಾಜೇಗೌಡರನ್ನು ಮಟ್ಟ ಹಾಕಬೇಕು ಅಂತ ಹೇಳಿ ಈಗ ಪೆನ್‌ಡ್ರೈವ್ ಕೇಸ್‌ನಲ್ಲಿ ಲಾಕ್ ಮಾಡಿಸಿದ್ದಾರೆ. ಇದೆಲ್ಲಾ‌ ಡಿ.ಕೆ.ಶಿವಕುಮಾರ್ ಕುತಂತ್ರ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಜೈಲಿಗೆ ಕಳಿಸುವ ನಿಟ್ಟಿನಲ್ಲಿ ನಾನು ಕಾನೂನು ಹೋರಾಟ ಮಾಡುತ್ತೇನೆ’ ಎಂದು ಕಿಡಿಕಾರಿದರು.

‘ಅವರಿಗೆ ಸಿಕ್ಕಿರುವ ಪೆನ್‌ಡ್ರೈವ್‌ನಲ್ಲಿ ಕಾರ್ತಿಕ್ ಪತ್ನಿ ಕಿಡ್ನಾಪ್ ಪ್ರಕರಣದ ವಿಡಿಯೋ ಇದೆ. ಡಿ.ಕೆ.ಶಿವಕುಮಾರ್ ಅವರು ನನ್ನೊಟ್ಟಿಗೆ ಮಾತನಾಡಿರುವ ಆಡಿಯೋ ಇದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಹೊರಗಡೆ ಬಂದ ದಿನ ಸರ್ಕಾರದ ಪತನವಾಗಲಿದೆ’ ಎಂದು ಆಕ್ರೋಶದಿಂದ ಹೇಳಿದರು.

‘ಎಸ್ಐಟಿಗೆ ನನ್ನ ಮನೆಯಲ್ಲಿ ಏನೂ ಸಿಗಲ್ಲ. ನನ್ನ ಬಳಿ ಇರುವ ಸಾಕ್ಷಿ ಎಲ್ಲೋ ಇದೆ. ಸಾಕ್ಷಿಯನ್ನು ಭದ್ರವಾಗಿ ಇಟ್ಟಿದ್ದೇನೆ.

ಪೊಲೀಸ್‌ ಕಸ್ಟಡಿಯಲ್ಲಿ ನಾಲ್ಕು ದಿನಗಳ ಕಾಲ ನನ್ನನ್ನು ವಿಚಾರಣೆ ಮಾಡಿದ್ದಾರೆ. ಇದರಲ್ಲಿ ಎಸ್ಪಿ, ಐಜಿ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

ಸತ್ಯ ಹೊರಬರಲಿದೆ: ದೇವರಾಜೇಗೌಡ

ಹಾಸನ: ‘ಪೆನ್‌ಡ್ರೈವ್‌ ಪ್ರಕರಣದ ತನಿಖೆ ಪೂರ್ಣಗೊಂಡರೆ ಸತ್ಯ ಹೊರಬೀಳಲಿದೆ’ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಹೇಳಿದ್ದಾರೆ.

ಪೆನ್‌ಡ್ರೈವ್‌ನ ಅಶ್ಲೀಲ ವಿಡಿಯೋ ಹಂಚಿಕೆ ಆರೋಪ ಎದುರಿಸುತ್ತಿರುವ ದೇವರಾಜೇಗೌಡ ಅವರ ಪೊಲೀಸ್ ಕಸ್ಟಡಿ ಅಂತ್ಯಗೊಂಡು ಮತ್ತೆ ಹಾಸನ ಜಿಲ್ಲಾ ಬಂದೀಖಾನೆಗೆ ಆಗಮಿಸಿದ ವೇಳೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದರು.

ಪೊಲೀಸ್ ಜೀಪ್‌ನಿಂದ ಇಳಿದು ಜೈಲಿನ ಒಳಗೆ ತೆರಳಬೇಕಾದರೆ ಮಾಧ್ಯಮದೊಂದಿಗೆ ಮಾತನಾಡಿ, ‘ಪೆನ್‌ಡ್ರೈವ್‌ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ, ತನಿಖೆ ಪೂರ್ಣಗೊಂಡರೆ ಸತ್ಯ ಹೊರಬರಲಿದೆ. ಈಗ ಪೊಲೀಸ್ ಕಸ್ಟಡಿ ಮುಗಿದಿದೆ. ಜಾಮೀನಿಗೆ ಈಗ ಅರ್ಜಿ ಹಾಕುತ್ತಿದ್ದೇವೆ. ಮುಂದೆ ಎಲ್ಲಾ ಸತ್ಯ ಹೊರಗೆ ಬರುತ್ತದೆ. ಸತ್ಯ, ಧರ್ಮದ ಪರ ಹೋರಾಟ ಮಾಡುವ ನಾಯಕ ನಾನು. ತಲೆಕೆಡಿಸಿಕೊಳ್ಳುವುದಿಲ್ಲ. ಧೈರ್ಯವಾಗಿ, ಆರಾಮಾಗಿ ಇರಿ. ಯಾವ ಷಡ್ಯಂತ್ರ ಇದೆಯೋ ಅದರಿಂದ ಯಾರೂ ಏನು ಮಾಡಲು ಆಗಲ್ಲ. ಕಾನೂನಿಗೆ ತಲೆ ಬಾಗಲೇಬೇಕು, ಸತ್ಯಕ್ಕೆ ಜಯವಿದೆ. ಸತ್ಯ ಮುಂದೆ ಹೊರ ಬರುತ್ತದೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಳಿಕ ಮಾಧ್ಯಮದವರು ಪ್ರಶ್ನಿಸಲು ಅವಕಾಶ ಕೊಡದೆ ಬಂದೀಖಾನೆ ಒಳಗೆ ಪೊಲೀಸರ ಜತೆ ತೆರಳಿದರು.

Share this article