ಪವನ ಲಮಾಣಿ
ಕನ್ನಡಪ್ರಭ ವಾರ್ತೆ ಸವಣೂರತಾಲೂಕಿನ ಇಚ್ಚಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿ 5 ವರ್ಷ ಕಳೆದರೂ ಜನರಿಗೆ ಶುದ್ಧ ನೀರು ಕುಡಿಯಲು ಆಗುತ್ತಿಲ್ಲ. ಸರಿಯಾದ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ.
ಹೆಸರಿಗೆ ಮಾತ್ರ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇದೆ. ಘಟಕದ ಮುಂದೆ ಹಾಕಿರುವ ಗಾಜುಗಳನ್ನು ಒಡೆದು ಹಾಳು ಮಾಡಲಾಗಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತದಿಂದ ನೀರು ಬರುವುದು ಕಡಿಮೆ ಆಗಿರುವುದರಿಂದ ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ತೆರಳಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜನತೆ ಕಂಗೆಟ್ಟಿದ್ದಾರೆ. ಜನರಿಗೆ ಉತ್ತರ ಹೇಳಿ ನಮಗೆ ಸಾಕಾಗಿದೆ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತಹ ಕಲಿವಾಳ ಗ್ರಾಮದ ಕೆಲವು ಸದಸ್ಯರು ರಾಜೀನಾಮೆ ನೀಡಲು ಹೋದಾಗ ಅಧ್ಯಕ್ಷರು ಮತ್ತು ಇತರ ಅಧಿಕಾರಿಗಳು ಜನರಿಗೆ ಸಮರ್ಪಕವಾಗಿ ನೀರು ಪೂರೈಸುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಇದ್ಯಾವುದು ಕಾರ್ಯ ರೂಪಕ್ಕೆ ಬಂದಿಲ್ಲ.ಈ ಗ್ರಾಮ ಪಂಚಾಯಿತಿಗೆ ಕಾಯಂ ಆಗಿರುವ ಪಿಡಿಓ ಆಗಲಿ, ಕಾರ್ಯದರ್ಶಿಗಳಾಗಲಿ ಇಲ್ಲದಿರುವುದರಿಂದ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಅನುಭವಿಸುವಂತಹ ಪರಿಸ್ಥಿತಿ ಎದುರಾಗಿದೆ. ಬರಗಾಲದಲ್ಲಿ ಸಹ ನೀರನ್ನು ಕೇಳಲೂ ಯಾವೊಬ್ಬ ಅಧಿಕಾರಿ ಇಲ್ಲದಿರುವುದು ಶೋಚನಿಯವಾಗಿದೆ ಎಂದು ಗ್ರಾಮದ ನಿವಾಸಿ ದ್ಯಾಮಣ್ಣ ಸೋಮಲಪ್ಪ ಲಮಾಣಿ ಅವರು ಹೇಳಿದರು.ಬೈರಾಪುರದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ತುಂಬಾ ಹಾಳಾಗಿದೆ ಹಾಗೂ ಅಲ್ಲಿ ಸುತ್ತಮುತ್ತಲಿನ ಪ್ರದೇಶ ಗಲೀಜು ಆಗಿರುವುದರಿಂದ ಅದರ ನಿರ್ವಹಣೆ ಕಷ್ಟಕರವಾಗಿದೆ. ಹಾಗಾಗಿ ಸ್ಥಳ ಬದಲಾವಣೆ ಕುರಿತು ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸದಸ್ಯರಿಗೆ, ಅಧ್ಯಕ್ಷರಿಗೂ ಈ ಕುರಿತು ಮಾಹಿತಿ ನೀಡಲಾಗಿದ್ದು, ಈವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿರುವುದಿಲ್ಲ ಎಂದು ಅಲ್ಲಿಯ ನಿವಾಸಿಗಳು ಹೇಳಿದರು.ಇಲ್ಲಿಗೆ ಯಾವುದೇ ಅಧಿಕಾರಿಗಳು ಪ್ರಭಾರಿಯಾಗಿ ಬಂದರೂ ಈ ಕುರಿತು ಕ್ರಮ ಕೈಗೊಳ್ಳಲು ಮುಂದಾಗುವುದಿಲ್ಲ. ಇದೇ ರೀತಿ ಸುಮಾರು 3 ವರ್ಷಗಳಿಂದ ಸಾರ್ವಜನಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಇಲ್ಲದೆ ಹಾಗೆ ಉಳಿದಿರುವ ಸನ್ನಿವೇಶ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡುಬರುತ್ತದೆ.ಕುಡಿಯುವ ನೀರು ಸೇರಿದಂತೆ, ಗ್ರಾಮದ ಸಾರ್ವಜನಿಕರ ಬೇರೆ ಕೆಲಸ ಕಾರ್ಯಗಳನ್ನು ಏಕೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಅನೇಕ ಬಾರಿ ಕೇಳಿದರೂ ಸರಿಯಾಗಿ ಜನರಿಗೆ ಸ್ಪಂದನೆ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ.ಆದಷ್ಟು ಬೇಗ ಬೈರಾಪುರದಲ್ಲಿರುವ ಶುದ್ಧ ನೀರು ಘಟಕವನ್ನು ಸ್ಥಳಾಂತರಿಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಈ ಕುರಿತು ನನಗೆ ಮಾಹಿತಿ ಇಲ್ಲದಿರುವುದರಿಂದ ಜನರಿಗೆ ಸ್ಪಲ್ಪ ಮಟ್ಟಿಗೆ ತೊಂದರೆಯಾಗಿದೆ ಎಂದು ತಾಪಂ ಇಒ ಎಫ್.ಜಿ. ಚಿನ್ನಣ್ಣನವರ ಹೇಳಿದರು.