ಯುವ ಕಾಂಗ್ರೆಸ್ ಘಟಕದಿಂದ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬಕ್ಕೆ ದಿವ್ಯ ಕಾರುಣ್ಯ ಆಶ್ರಮಕ್ಕೆ ರೇಷನ್ ಕಿಟ್ ವಿತರಣೆ
ಕಾಂಗ್ರೆಸ್ಸನ್ನು ತಳಹಂತದಿಂದಲೇ ಸಂಘಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ .ಶಿವಕುಮಾರ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಮುಖ ಕಾರಣರಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ ಹೇಳಿದರು.
ಶುಕ್ರವಾರ ಯುವ ಕಾಂಗ್ರೆಸ್ ನಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಮತ್ತಿಮರದ ಬಳಿ ಇರುವ ದಿವ್ಯಕಾರುಣ್ಯ ಆನಂದಾಶ್ರಮದಲ್ಲಿ ರೇಷನ್ ಕಿಟ್ ವಿತರಣೆ ವೇಳೆ ಮಾತನಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬವನ್ನು ಇಂದು ಆಶ್ರಮಕ್ಕೆ ರೇಷನ್ ಕಿಟ್ ಕೊಡುವ ಮೂಲಕ ಆಚರಿಸುತ್ತಿದ್ದೇವೆ. ಅವರು ರಾಜ್ಯದಲ್ಲಿ ಪಕ್ಷವನ್ನು ಯಶಸ್ಸಿನತ್ತ ಮುನ್ನಡೆ ಸುತ್ತಿದ್ದು ರಾಜ್ಯದಲ್ಲಿ ಸರ್ಕಾರ ಬರಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಯುವಕರನ್ನು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಸುವ ಗುಣ ಹೊಂದಿದ್ದಾರೆ ಎಂದರು. ಕೆಡಿಪಿ ಸದಸ್ಯ ಕೆ.ವಿ.ಸಾಜು ಮಾತನಾಡಿ, ಯುವ ಕಾಂಗ್ರೆಸ್ ನಿಂದ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿ ಕೊಂಡಿರುವುದು ನಿಜಕ್ಕೂ ಸಂತೋಷದ ವಿಷಯ ಎಂದರು.ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ಮಾತನಾಡಿ, ಉಪಮುಖ್ಯಮಂತ್ರಿಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷ ಸಹ ವಿಭಿನ್ನವಾಗಿ ಆಚರಿಸಲಾಗಿದೆ. ಯಾವುದೇ ರೀತಿ ಫ್ಲೆಕ್ಸ್ ಹಾಕದೆ ದುಂದು ವೆಚ್ಚ ಮಾಡದೆ ಹಸಿದವರು ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದೇವೆ ಎಂದರು. ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿನು ಜೋಸೆಫ್ ಮಾತನಾಡಿದರು.