ಚನ್ನಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ : ಒಂದೇ ವೇದಿಕೆ ಹಂಚಿಕೊಂಡ ಡಿಕೆಶಿ-ಸಿಪಿವೈ!

KannadaprabhaNewsNetwork |  
Published : Aug 16, 2024, 12:59 AM ISTUpdated : Aug 16, 2024, 06:06 AM IST
ಪೊಟೋ೧೫ಸಿಪಿಟಿ೫: ಚನ್ನಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲಿ ಆಸೀನರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಯೋಗೇಶ್ವರ್. | Kannada Prabha

ಸಾರಾಂಶ

ಚನ್ನಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಬದ್ಧ ವೈರಿಗಳು ಎನಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ವಿಜಯ್ ಕೇಸರಿ

 ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಬದ್ಧ ವೈರಿಗಳು ಎನಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಗುರುವಾರ ಚನ್ನಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಆಸೀನರಾಗಿದ್ದರು. ಸುಮಾರು ಒಂದು ಗಂಟೆಗೂ ಹಚ್ಚು ಕಾಲ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ವೇದಿಕೆಗೆ ಆಗಮಿಸುವ ಕೆಲ ನಿಮಿಷಗಳ ಮೊದಲು ಆಗಮಿಸಿದ ಯೋಗೇಶ್ವರ್ ವೇದಿಕೆಯಲ್ಲಿ ಆಸೀನರಾಗಿದ್ದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಡಿಕೆಶಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ ನಂತರ ವೇದಿಕೆಯಲ್ಲಿದ್ದ ಗಣ್ಯರು ಕುಶಲೋಪಚಾರಿ ವಿಚಾರಿಸುವ ವೇಳೆ ಇವರಿಬ್ಬರು ಪರಸ್ಪರ ಕೈಮುಗಿದರು. ಇನ್ನು ಡಿ.ಕೆ.ಶಿವಕುಮಾರ್ ಭಾಷಣದ ವೇಳೆ ಯೋಗೇಶ್ವರ್ ಹೆಸರು ಪ್ರಸ್ತಾಪಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ವೇದಿಕೆಯಲ್ಲಿ ಪರಸ್ಪರ ಅಕ್ಕಪಕ್ಕದಲ್ಲೇ ಕುಳಿತಿದ್ದರೂ ಸಹ ಇಬ್ಬರು ಮಾತನಾಡಲಿಲ್ಲ. ಇನ್ನು ಸನ್ಮಾನಿತರನ್ನು ಸನ್ಮಾನಿಸುವಾಗ ಸಹ ಅಕ್ಕಪಕ್ಕದಲ್ಲೇ ನಿಂತಿದ್ದರು.

ಕುತೂಹಲ ಕೆರಳಿಸಿದ ಕಾರ್ಯಕ್ರಮ: ಚನ್ನಪಟ್ಟಣ ಉಪಚುನಾವಣೆ ಎನ್‌ಡಿಎ ಟಿಕೆಟ್ ಕುರಿತು ಬಿಜೆಪಿ ವರಿಷ್ಠರೊಡನೆ ಚರ್ಚೆ ನಡೆಸಲು ಸೋಮವಾರ ಯೋಗೇಶ್ವರ್ ದೆಹಲಿಗೆ ತೆರಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸಿಪಿವೈ ಭೇಟಿಯಾಗುತ್ತಾರೆ ಎನ್ನಲಾಗಿತ್ತಾದರೂ, ಅದು ಸಾಧ್ಯವಾಗದೇ ಕೇವಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮಾತ್ರ ಭೇಟಿ ಮಾಡಿ ಹಿಂದಿರುಗಿದ್ದರು.

ದೆಹಲಿಯಿಂದ ಹಿಂದಿರುಗಿದ ಮರುದಿನವೇ ಯೋಗೇಶ್ವರ್ ಏಕಾಏಕಿ ಡಿಸಿಎಂ ಭಾಗಿಯಾದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

ಡಿಕೆಶಿ-ಸಿಪಿವೈ ಸಮಾಗಮಕ್ಕೆ ವೇದಿಕೆಯಾಗುವುದೇ ಸ್ವಾತಂತ್ರ್ಯದಿನಾಚರಣೆ?: ಚನ್ನಪಟ್ಟಣದ ಉಪಚುನಾವಣೆಯ ಎನ್‌ಡಿಎ ಟಿಕೆಟ್‌ಗಾಗಿ ಯೋಗೇಶ್ವರ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಹಗ್ಗಜಗ್ಗಾಟ ತೀವ್ರಗೊಂಡಿದೆ. ಶತಾಯ ಗತಾಯ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ನಿರ್ಧರಿಸಿದಂತಿರುವ ಯೋಗೇಶ್ವರ್ ಟಿಕೆಟ್‌ಗಾಗಿ ಪಟ್ಟು ಹಿಡಿದ್ದಾರೆ. ಒಂದು ವೇಳೆ ಟಿಕೆಟ್ ದೊರೆಯದಿದಲ್ಲಿ ಪಕ್ಷಾಂತರವಾಗಿ ಸ್ಪರ್ಧಿಸುವ ಎಚ್ಚರಿಕೆಯನ್ನು ಸಹ ಬಹಿರಂಗವಾಗಿಯೇ ನೀಡಿದ್ದಾರೆ. ಇದೀಗ ಇದೇ ಹೊತ್ತಿನಲ್ಲೇ ಅವರು ಅಚಾನಕ್ಕಾಗಿ ತಮ್ಮ ರಾಜಕೀಯ ಬದ್ಧವೈರಿಯೊಂದಿಗೆ ೬ ವರ್ಷಗಳ ನಂತರ ವೇದಿಕೆ ಹಂಚಿಕೊಂಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಡಿಕೆಶಿಗೂ ಪ್ರತಿಷ್ಠೆಯ ಕಣ: ಇನ್ನು ಡಿಸಿಎಂ ತವರು ಜಿಲ್ಲೆಯ ಚನ್ನಪಟ್ಟಣದ ಉಪಚುನಾವಣೆ ಡಿಕೆಶಿ ಪಾಲಿಗೂ ಪ್ರತಿಷ್ಠೆಯಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ಅಸ್ತಿತ್ವ ಇಲ್ಲದಂತೆ ಮಾಡುವ ಜತೆಗೆ ಜಿಲ್ಲೆಯನ್ನು ಕ್ವೀನ್ ಸ್ವೀಪ್ ಮಾಡುವ ಇರಾದೆ ಹೊಂದಿದ್ದಾರೆ. ಅದಕ್ಕಾಗಿ ಚನ್ನಪಟ್ಟಣ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿ ವಹಿಸಿದ್ದಾರೆ. ಇಂಥ ಹೊತ್ತಿನಲ್ಲಿ ಇವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ನಾನಾ ರಾಜಕೀಯ ವ್ಯಾಖ್ಯಾನಕ್ಕೆ ಎಡೆಮಾಡಿಕೊಟ್ಟಿದೆ.

ಕೈಹಿಡಿಯುವ ಮುನ್ನುಡಿಯೇ?: ಇನ್ನು ಉಪಚುನಾವಣೆ ಎನ್‌ಡಿಎ ಟಿಕೆಟ್ ಕುರಿತು ಯೋಗೇಶ್ವರ್ ಬೇಸರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದೊರೆಯದಿದ್ದಲಿ ಅವರು ಪಕ್ಷೇತರ ಅಥವಾ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಕುರಿತು ಸಹ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಇವರಿಬ್ಬರು ವೇದಿಕೆ ಹಂಚಿಕೊಂಡಿರುವುದು ಇನ್ನಷ್ಟು ಚರ್ಚೆಗೆ ನಾಂದಿ ಹಾಡಿದೆ.

ಸಿಪಿವೈರಿಂದ ಸಂದೇಶ ನೀಡುವ ಯತ್ನ?: ಇನ್ನು ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ವಿಚಾರ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ರಚಿಸಿರುವ ಸಮಿತಿ ಸಹ ಯೋಗೇಶ್ವರ್‌ಗೆ ಟಿಕೆಟ್ ನೀಡುವಂತೆ ಶಿಫಾರಸ್ಸು ಮಾಡಿದೆ. ಆದರೂ ಟಿಕೆಟ್ ವಿಚಾರದಲ್ಲಿ ಹಗ್ಗಜಗ್ಗಾಟ ಇನ್ನು ಮುಂದುವರಿದಿದ್ದು, ಟಿಕೆಟ್ ಸಿಗದಿದ್ದರೆ ತನ್ನ ಹಾದಿ ನೋಡಿಕೊಳ್ಳುವ ಸಂದೇಶ ನೀಡುವ ನಿಟ್ಟಿನಲ್ಲಿ ಯೋಗೇಶ್ವರ್ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು