ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಸವಾಲಿಗೆ ಪ್ರತಿ ಸವಾಲು ಹಾಕುತ್ತಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾಳೇಗಾರರಾ, ಸವಾಲಿಗೆ ಬರುವುದಾದರೆ ಇಬ್ಬರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಬೀದಿಗೆ ಬನ್ನಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದರು.
ಟೌನ್ ಶಿಪ್ ಯೋಜನೆ ಕುರಿತು ಕುಮಾರಸ್ವಾಮಿ ಮತ್ತು ಶಿವಕುಮಾರ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕುಮಾರಸ್ವಾಮಿ ಯೋಜನೆ ಮಾಡಿದ್ದರೆ ಶಿವಕುಮಾರ್ ಅವರು ಅದನ್ನು ಏಕೆ ಮುಂದುವರಿಸುತ್ತಿದ್ದಾರೆ. ಅಷ್ಟಕ್ಕೂ
ರೈತರ ಜಮೀನು ಕಸಿದುಕೊಂಡು ಏನು ಸಾಧಿಸಲು ಹೊರಟಿದ್ದೀರಾ. ಟೌನ್ ಶಿಪ್ ಬೇಕೆಂದು ನಿಮಗೆ ಕೇಳಿದವರು ಯಾರೆಂದು ಪ್ರಶ್ನಿಸಿದರು.ಈ ಟೌನ್ ಶಿಪ್ ಯೋಜನೆ ಹೊರತುಪಡಿಸಿದರೆ ಬೇರೆ ಯಾವುದೇ ಯೋಜನೆಯಲ್ಲಿ ಭೂ ಸ್ವಾಧೀನ ಪಡಿಸಿಕೊಂಡಾಗ ಇಷ್ಟು ಬೇಗ ರೈತರಿಗೆ ಪರಿಹಾರ ಚೆಕ್ ವಿತರಿಸಿದ ಉದಾಹರಣೆಯೇ ಇಲ್ಲ. ಎಕರೆ ಭೂಮಿಗೆ 2 ರಿಂದ 2.5 ಕೋಟಿ ಪರಿಹಾರವನ್ನು ಶಾಸನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿದ್ದೀರಾ ಅಥವಾ ನಿಮಗೆ ಇಷ್ಟ ಬಂದಂತೆ ನಿಗದಿ ಮಾಡಿದ್ದೀರಾ ಹೇಳಿ ಎಂದರು.
ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು , ರಾಜ್ಯ ಉಸ್ತುವಾರಿ ಅಧ್ಯಕ್ಷ ಗಂಗಾಧರ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಲಕ್ಷ್ಮಿ, ತಾಲೂಕು ಗೌರವಾಧ್ಯಕ್ಷ ಕೆಂಪರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ಸಿ.ಎಂ.ವಿಜಯ್ ಕುಮಾರ್, ಕಾರ್ಯಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಪಿ.ಸುರೇಶ್, ವೆಂಕಟಲಕ್ಷ್ಮಿ ಮತ್ತಿತರರು ಭಾಗವಹಿಸಿದ್ದರು.
ರಾಮನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದರು.