ರಾಮನಗರ: ಸಂದಿಗ್ಧ ಮತ್ತು ಸಂಕಷ್ಟ ಪರಿಸ್ಥಿತಿಗಳಲ್ಲಿ ಕಾಂಗ್ರೆಸ್ ಪಾಲಿಗೆ ''ಬಂಡೆ''ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸುತ್ತಾ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒಡಿಶಾ ರಾಜ್ಯದ ರಾಜ್ಯಸಭೆ ಚುನಾವಣೆ ಸವಾಲಾಗಿ ನಿಂತಿದೆ
ರಾಮನಗರ: ಸಂದಿಗ್ಧ ಮತ್ತು ಸಂಕಷ್ಟ ಪರಿಸ್ಥಿತಿಗಳಲ್ಲಿ ಕಾಂಗ್ರೆಸ್ ಪಾಲಿಗೆ ''''ಬಂಡೆ''''ಯಂತೆ ನಿಂತು ಪಕ್ಷ ನಿಷ್ಠೆ ಪ್ರದರ್ಶಿಸುತ್ತಾ ಬಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಒಡಿಶಾ ರಾಜ್ಯದ ರಾಜ್ಯಸಭೆ ಚುನಾವಣೆ ಸವಾಲಾಗಿ ನಿಂತಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ಗೆ ಭಾರೀ ಬಹುಮತ ತಂದುಕೊಡುವಲ್ಲಿ ಯಶಸ್ವಿಯಾದವರು. ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಅಥವಾ ಶಾಸಕರು ಆಪರೇಷನ್ ಕಮಲದಂತಹ ರಾಜಕೀಯ ದಾಳಗಳಿಗೆ ಸಿಲುಕಿದ ಸಂದರ್ಭದಲ್ಲಿ ಕಾಂಗ್ರೆಸ್ನ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಮೂಲಕ ಡಿ.ಕೆ.ಶಿವಕುಮಾರ್ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದವರು. ಈಗ ಒಡಿಶಾ ರಾಜ್ಯದಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಖ್ಯಾತ ಮೂತ್ರಪಿಂಡ ತಜ್ಞ ದತ್ತೇಶ್ವರ ಹೋಟಾ ಅವರನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ಅನ್ನು ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದಂತಿದೆ. ಹೀಗಾಗಿ ಬಿಜೆಪಿಯ ಆಪರೇಷನ್ ಕಮಲದ ಆತಂಕದಲ್ಲಿರುವ ಒಡಿಶಾದ ಕಾಂಗ್ರೆಸ್ ಶಾಸಕರಿಗೆ ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್ ವಾಸ್ತವ್ಯ ಕಲ್ಪಿಸಿ ರಕ್ಷಣೆ ಒದಗಿಸಿದ್ದಾರೆ.
ಕಾಂಗ್ರೆಸ್ ಪಾಲಿಗೆ ಆಪತ್ಬಾಂಧವ :
ವಿಲಾಸ್‌ರಾವ್ ದೇಶಮುಖ್ ಅವರು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರು 2002ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಬೇಕಾಗಿ ಬಂದಿತು. ಆ ಸಂದರ್ಭದಲ್ಲಿ ಅವರೊಂದಿಗೆ ಡಿ.ಕೆ.ಶಿವಕುಮಾರ್ ನಿಕಟವಾಗಿ ಕೆಲಸ ಮಾಡಿದರು. ವಿಶ್ವಾಸಮತದ ದಿನಾಂಕದವರೆಗೆ ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ನಲ್ಲಿ ಮಹಾರಾಷ್ಟ್ರದ
ಶಾಸಕರಿಗೆ ಆತಿಥ್ಯ ನೀಡಿ ದೇಶಮುಖ್ ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2017ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭ ಪಕ್ಷದ ಶಾಸಕರನ್ನು ಬಿಜೆಪಿಯ ‘ಆಪರೇಷನ್ ಕಮಲ’ದಿಂದ ರಕ್ಷಿಸಲು 42 ಕಾಂಗ್ರೆಸ್ ಶಾಸಕರನ್ನು ಬಿಡದಿ ಸಮೀಪದ ಈಗಲ್ ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಿ ರಕ್ಷಣೆ ಒದಗಿಸಿದರು. ಇದು ಅಹ್ಮದ್ ಪಟೇಲ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್‌ಗೆ ಸಹಾಯ ಮಾಡಿತು.
ಇದರ ಪರಿಣಾಮ ಡಿ.ಕೆ.ಶಿವಕುಮಾರ್ ಅವರ ನಿವಾಸ ಮತ್ತು ಆಪ್ತರ ಮೇಲೆ ಐಟಿ (ಆದಾಯ ತೆರಿಗೆ) ಮತ್ತು ಇಡಿ (ಜಾರಿ ನಿರ್ದೇಶನಾಲಯ) ಇಲಾಖೆಗಳ ನಿರಂತರ ದಾಳಿಗಳು ನಡೆದವು. ಕೊನೆಗೆ ದೆಹಲಿಯ ತಿಹಾರ್ ಜೈಲುವಾಸ ಅನುಭವಿಸಬೇಕಾಯಿತು. ಈ ಘಟನೆ ಡಿ.ಕೆ.ಶಿವಕುಮಾರ್ ಅವರನ್ನು ಗಾಂಧಿ ಕುಟುಂಬದ ಅತ್ಯಂತ ಆಪ್ತ
ವಲಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು. ಇದು ಟ್ರಬಲ್ ಶೂಟರ್ ಇಮೇಜ್ ಮತ್ತಷ್ಟು ಹೆಚ್ಚಿಸಿತು.
2018 ರ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಹಾಗೂ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ನಿರ್ಣಾಯಕ ಪಾತ್ರ ವಹಿಸಿದ್ದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲೂ ಡಿ.ಕೆ.ಶಿವಕುಮಾರ್ ಕಾರ್ಯತಂತ್ರ ಕೆಲಸ ಮಾಡಿದೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಿಕ್ಕಟ್ಟಿಗೆ ಸಿಲುಕಿದಾಗಲೂ ಹೈಕಮಾಂಡ್ ಡಿಕೆಶಿ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿತ್ತು. ಒಟ್ಟಾರೆಯಾಗಿ ಪಕ್ಷಕ್ಕಾಗಿ ಎಂತಹ ಸವಾಲು ಸ್ವೀಕರಿಸಲು ಸಿದ್ಧರಿರುವ ಡಿ.ಕೆ.ಶಿವಕುಮಾರ್ ಇದೀಗ ಒಡಿಶಾ ರಾಜ್ಯದ ರಾಜ್ಯಸಭೆ ಚುನಾವಣೆಗೆ ಕೈ ಹಾಕಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.