ರಾಮನಗರ: ಅಶ್ಲೀಲ ವೀಡಿಯೋಗಳು ಬಹಿರಂಗವಾಗಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಸ್ಟರ್ ಮೈಂಡ್ ಎಂಬುದು ಜಗಜ್ಜಾಹೀರಾಗಿದೆ. ಮಹಿಳೆಯರ ಮಾನ ಹರಾಜಾಗಿ ರಾಜ್ಯ ತಲೆತಗ್ಗಿಸುವಂತಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣ ವೈಯಕ್ತಿಕವಾದದ್ದು, ಆದರೂ ಅದನ್ನು ಯಾರು ಸಮರ್ಥಿಸಿಕೊಳ್ಳುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರು ಪ್ರಜ್ವಲ್ ಪರವಹಿಸಿ ಮಾತನಾಡಿಲ್ಲ. ಆತನ ಕೃತ್ಯ ಖಂಡನೀಯ. ಆದರೆ ಖಾಸಗಿ ವಿಚಾರವನ್ನು ಬಹಿರಂಗಗೊಳಿಸಿ ಹೆಣ್ಣು ಮಕ್ಕಳ ಮರ್ಯಾದೆ ತೆಗೆದಿದ್ದಾರೆ. ಹೀಗೆ ಅಶ್ಲೀಲ ವೀಡಿಯೋಗಳನ್ನು ಬಹಿರಂಗ ಮಾಡಿ ದೇವೇಗೌಡರು, ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡಲು ಹೋಗಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ ಎಂದು ಡಿಕೆಶಿ ವಿರುದ್ದ ಹರಿಹಾಯ್ದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ದೇವೇಗೌಡರ ಕುಟುಂಬ ರಾಜಕೀಯವಾಗಿ ಪ್ರಬಲವಾಗುತ್ತಿದೆ. ಹೀಗಾಗಿ ಅವರ ಮುಖಕ್ಕೆ ಮಸಿ ಬಳಿಯುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ಈ ಷಡ್ಯಂತ್ರ ರೂಪಿಸಿದ್ದಾರೆ. ರಮೇಶ್ ಜಾರಕಿ ಹೊಳಿ, ಈಶ್ವರಪ್ಪ ಅವರ ಪ್ರಕರಣಗಳಲ್ಲು ಇವರ ಕೃತ್ಯ ಸಾಬೀತಾಗಿದೆ. ಇವರ ನಡವಳಿಕೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಗಂಭೀರವಾಗಿ ರಾಜಕಾರಣ ಮಾಡಬೇಕು. ಆದರೆ, ಡಿಕೆ ಸಹೋದರರು ಅಡ್ಡ ಕಸುಬು ಮಾಡಿಕೊಂಡು ಬಂದವರು. ಈ ಹಿಂದೆ ಕನಕಪುರದಲ್ಲಿ ಸಿನಿಮಾ ತೋರಿಸಿರುವ ವೃತ್ತಿಯನ್ನು ಈಗಲೂ ಮುಂದುವರೆಸುತ್ತಿದ್ದಾರೆ ಎಂದು ಟೀಕಿಸಿದರು.ದೇವರಾಜೇಗೌಡರನ್ನು ತಾವು ಸಂಪರ್ಕಿಸಿದಾಗ, ಅವರ ಪ್ರಕಾರ ದೇವೇಗೌಡ ಮತ್ತು ಜೆಡಿಎಸ್ ಬಗ್ಗೆ ಸುಮಾರು 2 ಗಂಟೆ ಡಿ.ಕೆ.ಶಿವಕುಮಾರ್ ಮಾತನಾಡಿರುವ ಆಡಿಯೋ ಇದೆ ಎಂದು ಗೊತ್ತಾಗಿದೆ. ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಆಡಿಯೋವನ್ನು ಸಿಬಿಐಗೆ ಕೊಡುವುದಾಗಿ, ಆಗ ಸಿದ್ದರಾಮಯ್ಯ ಸರ್ಕಾರ ಉರುಳುತ್ತದೆ ಎಂದು ದೇವರಾಜೇಗೌಡರು ತಿಳಿಸಿದ್ದಾರೆ ಎಂದು ಹೇಳಿದರು.
ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವರಿಗೆ ಬೇಕಾದಂತೆ ತನಿಖೆ ಮಾಡಿಸುತ್ತಿದ್ದಾರೆ. ಹಾಗಾಗಿ ಪ್ರಕರಣವನ್ನು ಎಸ್‌ಐಟಿಯಿಂದ ನ್ಯಾಯಂಗ ತನಿಖೆ ಅಥವಾ ಸಿಬಿಐ ತನಿಖೆಗೆ ವರ್ಗಾವಣೆ ಮಾಡುವಂತೆ ನಾವು ಆಗ್ರಹಿತ್ತಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಜೆಡಿಎಸ್ ಮುಖಂಡರಾದ ಜಯಮುತ್ತು, ನಾಗರಾಜು, ಸೋಮೇಗೌಡ, ನರಸಿಂಹಮೂರ್ತಿ, ರವಿ, ರಾಜಶೇಖರ್, ಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಪುಷ್ಪಾಲತಾ ಮತ್ತಿತರರು ಭಾಗವಹಿಸಿದ್ದರು.ಕೋಟ್ ...........
-ಸಿ.ಪಿ.ಯೋಗೇಶ್ವರ್, ಸದಸ್ಯರು, ವಿಧಾನ ಪರಿಷತ್